Advertisement
– ಈ ಪ್ರಶ್ನೆ ಈಗ ವಾಯುವ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತದಾರರನ್ನು ಕಾಡುತ್ತಿದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಪೈಪೋಟಿ ಇದೆ. ಜೆಡಿಎಸ್ ಇಲ್ಲಿ ಸ್ಪರ್ಧೆ ಮಾಡಿಲ್ಲ. ಹೀಗಾಗಿ ಎಲ್ಲರ ಗಮನ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆಯೇ ನೆಟ್ಟಿದೆ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಯಲ್ಲಪ್ಪ ಮಹದೇವಪ್ಪ ಕಲಕುಟ್ರಿ, ಸರ್ವ ಜನತಾ ಪಕ್ಷದಿಂದ ಜಿ.ಸಿ.ಪಟೇಲ ಹಾಗೂ ಏಳು ಜನ ಪಕ್ಷೇತರರು ನೆಪಮಾತ್ರಕ್ಕೆ ಇದ್ದಂತಿದೆ.
Related Articles
Advertisement
ಹನುಮಂತ ನಿರಾಣಿ ನಿರಾಳ: ಕಳೆದ ಬಾರಿ ತೀವ್ರ ಪೈಪೋಟಿ ಇದ್ದರೂ ನಿರಾಯಾಸವಾಗಿ ಜಯಗಳಿಸಿದ್ದ ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿ ಈ ಬಾರಿ ಸಾಕಷ್ಟು ನಿರಾಳರಾಗಿರುವಂತೆ ಕಾಣುತ್ತಿದೆ. ಕಾರಣ ಕಾಂಗ್ರೆಸ್‌ನಲ್ಲಿ ಚುನಾವಣೆ ಬಗ್ಗೆ ಅಂತಹ ಗಂಭೀರತೆ ಕಾಣದೇ ಇರುವುದು ಬಿಜೆಪಿಗೆ ಅನುಕೂಲವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇನ್ನೊಂದು ಕಡೆ ವಾಯವ್ಯ ಪದವೀಧರ ಕ್ಷೇತ್ರದಲ್ಲಿ 99 ಸಾವಿರ ಮತದಾರರಿದ್ದು ಅದರಲ್ಲಿ ಸುಮಾರು 40 ಸಾವಿರ ಮತದಾರರು ಹನುಮಂತ ನಿರಾಣಿ ಅವರ ಬೆಂಬಲಿಗರು. ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಹನುಮಂತ
ನಿರಾಣಿ ತಮ್ಮ ಪರವಾಗಿ ನಿಲ್ಲುವಂತೆ 40 ಸಾವಿರ ಪದವೀಧರ ಮತದಾರರನ್ನು ನೋಂದಣಿ ಮಾಡಿಸಿದ್ದಾರೆ. ಇದರಿಂದ ಬಿಜೆಪಿ ಈಗಾಗಲೇ ಗೆದ್ದ ವಿಶ್ವಾಸದಲ್ಲಿದೆ.
ಕ್ಷೇತ್ರದಲ್ಲಿ ಹನುಮಂತ ನಿರಾಣಿ ಅವರ ವರ್ಚಸ್ಸು ಕಡಿಮೆಯಾಗಿಲ್ಲ. ಮಿತ ಭಾಷಿಯಾಗಿದ್ದರೂ ಪದವೀಧರರನ್ನು ಆಕರ್ಷಿಸಿ ಮತ ಸೆಳೆಯುವ ಚಾಣಾಕ್ಷತನ ಸಿದ್ಧಿಸಿಕೊಂಡಿದ್ದಾರೆ. ಕಳೆದ ಬಾರಿ ಪೈಪೋಟಿಯ ನಡುವೆ ಚೊಚ್ಚಲ ಬಾರಿಗೆ ಪರಿಷತ್ ಪ್ರವೇಶಿಸಿದ್ದರು. ಅನಂತರದ ಆರು ವರ್ಷಗಳ ಸುದೀರ್ಘ ಪಯಣದಲ್ಲಿ ಅವರು ಪದವೀಧರರ ಸಮಸ್ಯೆಗಳ ಬಗ್ಗೆ ತೋರಿದ ಕಳಕಳಿ ಈ ಬಾರಿಯೂ ಅವರಿಗೆ ಪರಿಷತ್ ಪ್ರವೇಶ ಸುಲಭ ಎಂಬ ವಾತಾವರಣ ನಿರ್ಮಾಣ ಮಾಡಿದೆ.
ಸುನೀಲ ಹಾದಿ ದುರ್ಗಮ: ಮೊದಲ ಬಾರಿಗೆ ಪರಿಷತ್ ಚುನಾವಣೆ ಅಖಾಡಕ್ಕೆ ಇಳಿದಿರುವ ಸುನೀಲ ಸಂಕ ಚುನಾವಣ ರಾಜಕೀಯ ಪಟ್ಟುಗಳನ್ನು ಇನ್ನೂ ಕಲಿಯಬೇಕಿದೆ. ಇಲ್ಲಿನ ಹೊಂದಾಣಿಕೆ ರಾಜಕಾರಣ ಹಾಗೂ ಮತದಾರರನ್ನು ಸೆಳೆಯುವ ತಂತ್ರಗಾರಿಕೆ ಇನ್ನೂ ಕರಗತವಾಗಿಲ್ಲ. ಹೀಗಾಗಿ ಗೆಲುವಿನ ಹಾದಿ ದುರ್ಗಮವಾಗಿರುವಂತೆ ಕಾಣುತ್ತಿದೆ. ಒಂದು ವೇಳೆ ಈ ಹಾದಿಯನ್ನು ಸುನೀಲ ಸಂಕ ಸುಗಮವಾಗಿ ದಾಟಿ ಜಯದ ನಗೆ ಬೀರಿದರೆ ಅದೊಂದು ಪವಾಡವೇ ಸರಿ.
ಮುಖ್ಯವಾಗಿ ಕಾಂಗ್ರೆಸ್ ಪಾಳೆಯದಲ್ಲಿ ಆತ್ಮವಿಶ್ವಾಸದ ಹಾಗೂ ಎಲ್ಲರೂ ಒಂದಾಗಿ ಹೋಗುವ ಕೊರತೆ ಎದ್ದು ಕಂಡಿದೆ. ಅಭ್ಯರ್ಥಿ ಆಯ್ಕೆ ಬಗ್ಗೆ ಅಸಮಾಧಾನವೋ ಏನೋ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಅಭ್ಯರ್ಥಿಯ ಪರ ಬಿರುಸಿನ ಪ್ರಚಾರದ ಸುದ್ದಿಯಾಗಲಿಲ್ಲ. ಮೊದಲ ಬಾರಿಗೆ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿರುವ ಸುನೀಲ ಸಂಕ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಪರಿಚಯದ ನಾಯಕರಾಗಿ ಗುರುತಿಸಿಕೊಂಡಿಲ್ಲ. ಮೇಲಾಗಿ ಸುನೀಲ ಅವರಿಗೆ ಪದವೀಧರರ ಬೇಡಿಕೆಗಳು ಹಾಗೂ ಸಮಸ್ಯೆಗಳ ಬಗ್ಗೆ ಅಷ್ಟಾಗಿ ಪರಿಚಯವಿಲ್ಲ. ಹೀಗಾಗಿ ಮತದಾರರು ಕಾಂಗ್ರೆಸ್ ಅಭ್ಯರ್ಥಿಯನ್ನು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದು ಕುತೂಹಲದ ಸಂಗತಿ.
99,598
ಒಟ್ಟು ಮತದಾರರು
45,124
ಬೆಳಗಾವಿ
33,651
ಬಾಗಲಕೋಟೆ
20,873
ವಿಜಯಪುರ
ಗೆಲುವಿಗೆ ಯಾವುದೇ ಸಮಸ್ಯೆ ಇಲ್ಲ. ಆರು ವರ್ಷ ಗಳ ಕಾಲ ಪದವೀಧರರ ಸಮಸ್ಯೆ ಗಳಿಗೆ ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ವಾಗಿ ಕೆಲಸ ಮಾಡಿದ್ದೇನೆ. ಎಲ್ಲ ಕ್ಷೇತ್ರಗಳಿಗೆ ನಿರಂತರವಾಗಿ ಭೇಟಿ ನೀಡಿ ಸಮಸ್ಯೆ ಆಲಿಸಿದ್ದೇನೆ. ಪಕ್ಷದ ಮುಖಂಡರ ಆಶೀರ್ವಾದ ಇದೆ. ಮೂರೂ ಜಿಲ್ಲೆಗಳಲ್ಲೂ ನಮ್ಮ ಪರ ಅಲೆ ಇದೆ.-ಹನುಮಂತ ನಿರಾಣಿ, ಬಿಜೆಪಿ ಅಭ್ಯರ್ಥಿ
ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧೆ ಮಾಡಿದ್ದರೂ ಪದವೀಧರರ ಸಮಸ್ಯೆಗಳ ಅರಿವಿದೆ. ಪಕ್ಷದ ಮುಖಂಡರು ಒಗ್ಗಟ್ಟಿನಿಂದ ನನ್ನ ಪರ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯೊಳಗಿನ ಅಸಮಾಧಾನ ನಮ್ಮ ನೆರವಿಗೆ ಬರಲಿದೆ. ಮತದಾರರೂ ಬದಲಾವಣೆ ಬಯಸಿದ್ದಾರೆ. ಗೆಲುವಿನ ವಿಶ್ವಾಸ ಇದೆ.-ಸುನೀಲ ಸಂಕ, ಕಾಂಗ್ರೆಸ್ ಅಭ್ಯರ್ಥಿ
-ಕೇಶವ ಆದಿ