Advertisement
ನಗರದ ನ್ಯೂ ಇಂಗ್ಲೀಷ ಸ್ಕೂಲಿನ ಮತಗಟ್ಟೆ ನಂ. 136ರಲ್ಲಿ ಮತ ಚಲಾಯಿಸಲು ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಅವರು ತಮ್ಮ ಪುತ್ರ ಅಮರನಾಥ ಜೊತೆ ಬೈಕ್ ಮೇಲೆ ಆಗಮಿಸಿ ಮತ ಚಲಾಯಿಸಿದ ನಂತರ ಮಾಧ್ಯಮದವರ ಜೊತೆ ಮಾತನಾಡಿ ನಾನು ಇನ್ನೂ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ. ಕಳೆದ ಐದು ಅವಧಿಯಲ್ಲಿ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಿದ್ದೇನೆ. ನನ್ನ ಜವಾಬ್ದಾರಿ ನನಗೆ ಚೆನ್ನಾಗಿ ಗೊತ್ತಿದೆ. ನನಗೆ ಅನ್ಯಾಯವಾಗಿದೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ಆದರೆ ನಾನು ಯಾವ ಅಭ್ಯರ್ಥಿಗೂ ಮತ ನೀಡುವಂತೆ ಜನರಿಗೆ ಒತ್ತಾಯ ಮಾಡುತ್ತಿಲ್ಲ. ಆದರೆ ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವುದು ನಿಶ್ಚಿತ ಎಂದರು.
Related Articles
Advertisement
ಲಖನ್ ಜಾರಕಿಹೊಳಿ ನಗರದ ಮತಗಟ್ಟೆ ಹತ್ತಿರ ಮಾಧ್ಯಮದವರ ಜೊತೆ ಮಾತನಾಡಿ, ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿದ್ದೇವೆ. ಸಹೋದರರ ಜೊತೆ ಚರ್ಚಿಸಿ ನಿರ್ಧಾರ ಕೈಕೊಂಡಿದ್ದೇವೆ. ನಮ್ಮ ನಾಯಕ ಸಿದ್ಧರಾಮಯ್ಯ. ಗೋಕಾಕ ಕಾಂಗ್ರೆಸ್‌ನ ಭದ್ರಕೋಟೆ. ರಮೇಶ ಜಾರಕಿಹೊಳಿ ಕಾಂಗ್ರೆಸ್ ಪರ ನಿರ್ಧಾರ ಕೈಗೊಂಡರೆ ಮಾತ್ರ ನಮ್ಮ ಬೆಂಬಲ ಎಂದು ಸ್ಪಷ್ಟ ಪಡಿಸಿದರು.
ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಗರದ ಕೆಬಿಎಸ್ ನಂ 3 ಶಾಲೆಯ ಮತಗಟ್ಟೆ ಸಂಖ್ಯೆ 131 ರಲ್ಲಿ ತಮ್ಮ ಮತ ಚಲಾಯಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ದೇಶದಲ್ಲಿ ಬಿಜೆಪಿ ಪರ ಅಲೆ ಇದ್ದು, ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಲಿದ್ದಾರೆ. 4ನೇ ಬಾರಿಗೆ ಸುರೇಶ ಅಂಗಡಿ ಸಂಸದರಾಗಿ ಆಯ್ಕೆಯಾಗುವುದು ಖಚಿತ. ಲೋಕಸಭಾ ಚುನಾವಣೆಯ ಫಲಿಂತಾಶದ ನಂತರ ಕೇಂದ್ರದಲ್ಲಿ ಬಲಿಷ್ಠವಾಗಿ ಎನ್‌ಡಿಎ ಸರ್ಕಾರ ರಚಿಸಲಿದ್ದು ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ಬದಲಾವಣೆಯಾಗಲಿದೆ. ಮೈತ್ರಿ ಸರ್ಕಾರ ಉರುಳಲಿದೆ ಎಂದು ಒಗಟಾಗಿ ಮಾತನಾಡಿದರು.
ಸಹೋದರ ರಮೇಶ ಜಾರಕಿಹೊಳಿ ಅವರು ಕಾಂಗ್ರೆಸ್‌ನಿಂದ ಒಂದು ಹೆಜ್ಜೆ ಹೊರಗೆ ಕಾಲಿಟ್ಟಿದ್ದು, ಒಲ್ಲದ ಮನಸ್ಸಿನಿಂದ ಕಾಂಗ್ರೆಸ್‌ನಲ್ಲಿ ಇದ್ದಾರೆ. ಅವರು ಮುಂದಾಳತ್ವ ವಹಿಸಿದರೆ ಅವರ ಮುಖಾಂತರ ಬಿಜೆಪಿಗೆ ಒಳ್ಳೆಯದಾಗಬಹುದು. ಕುಟುಂಬ ವಿಷಯದಲ್ಲಿ ನಾವೆಲ್ಲ ಸಹೋದರರು ಒಂದೇ ಇರಬೇಕೆನ್ನುವುದು ನನ್ನ ಅಭಿಲಾಷೆ. ರಾಜಕಾರಣದಲ್ಲಿ ಕೆಲ ಭಿನ್ನ ವಿಚಾರಗಳು ಇರುತ್ತವೆ. ಮಾಧ್ಯಮಗಳ ಮುಂದೆ ಕುಟುಂಬಕ್ಕೆ ಸಂಬಂಧಿಸಿದ ಹೇಳಿಕೆ ನೀಡಿದೇ ಎಲ್ಲರೂ ಕುಳಿತು ಮಾತನಾಡಿ ಇದ್ದ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬೇಕು. ಇದರ ಸಂಬಂಧವಾಗಿ ನಾನು ಚಿಕ್ಕವನಾದರೂ ಸಹೋದರರೊಂದಿಗೆ ಮಧ್ಯಸ್ಥಿಕೆ ವಹಿಸಲು ಸಿದ್ದವಿರುವುದಾಗಿ ಹೇಳಿದರು.
ರಮೇಶ ಹಾಗೂ ಸತೀಶ ಅವರು ಸಾರ್ವಜನಿಕವಾಗಿ ಯಾವುದೇ ಹೇಳಿಕೆಗಳನ್ನು ನೀಡದೇ ಸಹೋದರರೆಲ್ಲರೂ ಒಂದೇಯಾದರೆ ಜಿಲ್ಲೆಯಲ್ಲಿ ಮಾತ್ರವಲ್ಲದೇ ರಾಜ್ಯವನ್ನೇ ನಾವು ಆಳಬಹುದು ಎಂದರು.
ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಬಾಲಚಂದ್ರ ಸಹೋದರ ರಮೇಶ ಜಾರಕಿಹೊಳಿ ಅವರು ಬಿಜೆಪಿಯಿಂದ ಒಂದು ರೂಪಾಯಿಯನ್ನೂ ಪಡೆದಿಲ್ಲ, ದುಡ್ಡಿಗಾಗಿ ರಾಜಕಾರಣ ಮಾಡುವ ವ್ಯಕ್ತಿಯಲ್ಲ, ಸ್ವಂತ ಹಣ ಹಾಗೂ ಸಾಲ ಮಾಡಿಯಾದರೂ ಚುನಾವಣೆಯಲ್ಲಿ ಬೇರೆಯೊಬ್ಬ ವ್ಯಕ್ತಿಯನ್ನು ಗೆಲ್ಲಿಸುವ ವ್ಯಕ್ತಿಯಾಗಿದ್ದು ಬೇರೆ ಕಾರಣಗಳಿಂದಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಶಿವಶಂಕರಪ್ಪ ಆರೋಪ ಸತ್ಯಕ್ಕೆ ದೂರ ಎಂದು ಹೇಳಿದರು.