Advertisement
ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಘಟಪ್ರಭಾ ನದಿಗೆ 10 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದ ಜಿಲ್ಲೆಯ ಪ್ರಮುಖ ಜಲಾಶಯವಾಗಿರುವ ಹಿಡಕಲ್ ಜಲಾಶಯಮಟ್ಟದಲ್ಲಿ ಒಂದೇ ದಿನ ಮೂರು ಅಡಿಗಳಷ್ಟು ಏರಿಕೆಯಾಗಿದೆ. ಒಟ್ಟು 2175 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 2093 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಜಲಾಶಯದಿಂದ 1097 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಖಾನಾಪುರ ತಾಲೂಕಿನ ಕಣಕುಂಬಿ ಮತ್ತು ಜಾಂಬೋಟಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು ಮಲಪ್ರಭಾ ನದಿ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಮಲಪ್ರಭಾ ಜಲಾಶಯಕ್ಕೆ 7729 ಕ್ಯೂಸೆಕ್ ನೀರು ಬರುತ್ತಿದ್ದು ಜಲಾಶಯಮಟ್ಟದಲ್ಲಿ ಒಂದು ಅಡಿಯಷ್ಟು ಏರಿಕೆಯಾಗಿದೆ. ಒಟ್ಟು 2079.50 ಅಡಿ ಸಾಮರ್ಥ್ಯದ ಮಲಪ್ರಭಾ ಜಲಾಶಯದಲ್ಲಿ ಈಗ 2054.50 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 7729 ಕ್ಯೂಸೆಕ್ ನೀರು ಬರುತ್ತಿದ್ದು ಜಲಾಶಯದಿಂದ 194 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ.
Related Articles
Advertisement
ಇನ್ನು ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಳೆಯಾಗುತ್ತಿದ್ದು ಸಾಮಾನ್ಯ ಜನಜೀವನದ ಮೇಲೆ ಪರಿಣಾಮ ಬೀರಿದೆ. ಬೆಳಗಾವಿ ನಗರದಲ್ಲಿ ನಿರಂತರ ಮಳೆಯಾಗುತ್ತಿದ್ದು ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರಿಗೆ ತೊಂದರೆಯಾಗಿದೆ. ಕೆಲವು ಬಡಾವಣೆಗಳಲ್ಲಿ ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿರುವದರಿಂದ ವಾಹನ ವಾಹನ ಸವಾರರು ಪರದಾಡುವಂತಾಗಿದೆ.