Advertisement

ಯಮರೂಪಿಯಾದ ರಕ್ಷಣೆಗೆಂದು ನಿಂತ ಶೆಡ್: ಮಳೆಯಿಂದ ರಕ್ಷಿಸಿಕೊಳ್ಳಲು ನಿಂತ ಕುರಿಗಾಹಿಗಳ ದುರ್ಮರಣ

08:32 AM May 12, 2020 | keerthan |

ಬೆಳಗಾವಿ: ಮಳೆಯಿಂದ ರಕ್ಷಿಸಿಕೊಳ್ಳಲು ಕುರಿಗಳನ್ನು ಬಿಟ್ಟು ಹೊಲದಲ್ಲಿರುವ ತಗಡಿನ ಶೆಡ್ ಕೆಳಗೆ ನಿಂತಿದ್ದ ಇಬ್ಬರು ಕುರಿಗಾಹಿಗಳ ಮೇಲೆ ಗೋಡೆ ಕುಸಿದು ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಕಮಕಾರಟ್ಟಿ ಗ್ರಾಮದ ಹೊಲದಲ್ಲಿ ರವಿವಾರ ಸಂಭವಿಸಿದೆ.

Advertisement

ತಾಲೂಕಿನ ಕೊಂಡಸಕೊಪ್ಪ ಗ್ರಾಮದ ಕಲ್ಲಪ್ಪ ಸಿದ್ದಪ್ಪ ಸಾಂಬ್ರೇಕರ (45) ಹಾಗೂ ಶಿಂಧೋಳ್ಳಿ ಗ್ರಾಮದ ಪರುಶರಾಮ ಗಂಗಪ್ಪ ಶಹಾಪುರಕರ (17) ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಮಣ್ಣಿನ ಕೆಳ ಭಾಗದಲ್ಲಿ ದೇಹಗಳು ಸಿಕ್ಕಿ ಹಾಕಿಕೊಂಡಿದ್ದು, ಇಬ್ಬರ ಅಂಗಿಗಳು ಮಾತ್ರ ಕಾಣುತ್ತಿದ್ದವು. ದೇಹಗಳನ್ನು ಹೊರತೆಗೆಯಲು ಜನರು ಹರಸಾಹಸ ಪಡಬೇಕಾಯಿತು.

ರವಿವಾರ ಮಧ್ಯಾಹ್ನ ಕಲ್ಲಪ್ಪ ಹಾಗೂ ಪರುಶರಾಮ ಈ ಇಬ್ಬರೂ ಕುರಿಗಾಹಿಗಳು ಕಮಕಾರಟ್ಟಿ ಗ್ರಾಮದ ಹೊಲದಲ್ಲಿ ಕುರಿ ಮೇಯಿಸಲು ಹೋಗಿದ್ದರು. ಮಧ್ಯಾಹ್ನ ಗಾಳಿ ಮಿಶ್ರಿತ ಮಳೆ ಜೋರಾಗಿ ಸುರಿಯಲು ಆರಂಭಿಸಿತು. ಮಳೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲೂ ಇಬ್ಬರೂ ಕುರಿಗಳನ್ನು ಬಿಟ್ಟು ಸಮೀಪದ ತಗಡಿನ ಶೆಡ್‌ನಲ್ಲಿ ಹೋದರು. ಬಿರುಗಾಳಿಯಿಂದ ಶೆಡ್ ತಗಡುಗಳು ಹಾರಿ ಹೋದವು. ಆಗ ಮಲೆ ನೀರು ಮೈಮೇಲೆ ಬೀಳಬಾರದೆಂದು ಶೆಡ್ ಗೋಡೆಯ ಮೂಲೆಯಲ್ಲಿ ಕುಳಿತುಕೊಂಡಿದ್ದರು.

ಶೆಡ್‌ನ ಗೋಡೆಗಳನ್ನು ಮಣ್ಣಿನಿಂದ ಕಟ್ಟಿ ಸಿಮೆಂಟ್ ಗಿಲಾವ್ ಮಾಡಲಾಗಿತ್ತು. ಮಳೆ ಹಾಗೂ ಗಾಳಿಯಿಂದ ಗೋಡೆ ಕುರಿಗಾಹಿಗಳ ಮೈ ಮೇಲೆ ಕುಸಿದು ಬಿದ್ದಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದೇ ಪ್ರದೇಶದಲ್ಲಿ ಇನ್ನಳಿದ ಕುರಿಗಾಹಿಗಳು ಮೇಯಿಸಲು ತಂದಿದ್ದ ಕುರಿಗಳ ಹಿಂಡಿನಲ್ಲಿ ಅವರ ಕುರಿಗಳು ಸೇರಿಕೊಂಡವು. ಆದರೆ ಈ ಇಬ್ಬರೂ ಮಾತ್ರ ಅಲ್ಲಿ ಕಾಣ ಸಿಗಲಿಲ್ಲ. ಆಗ ಸಂಶಯಗೊಂಡ ಕುರಿಗಾಹಿಗಳು ಎಲ್ಲ ಕಡೆಗಳಲ್ಲೂ ಹುಡುಕಾಡಿದರು. ಕೆಲವು ಹೊತ್ತಿನಲ್ಲಿ ಘಟನೆ ನಡೆದದ್ದು ಬೆಳಕಿಗೆ ಬಂತು.

Advertisement

ಈ ವೇಳೆ ಘಟನಾ ಸ್ಥಳದಲ್ಲಿ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಆಗ ಕುರಿಗಾಹಿಗಳ ಸಾವಿನ ಬಗ್ಗೆ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದರು. ಹಿರೇಬಾಗೇವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹಿರೇಬಾಗೇವಾಡಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಇನ್ಸಪೆಕ್ಟರ್ ಎನ್.ಎನ್. ಅಂಬಿಗೇರ ಹಾಗೂ ಸಿಬ್ಬಂದಿ ತನಿಖೆ ನಡೆಸಿದ್ದಾರೆ.

ಕಳೆದ ಎಂಟು ದಿನಗಳಿಂದ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಮೋಡ ಕವಿದ ವಾತಾವರಣ ಇದ್ದರೂ ಮಳೆ ಮಾತ್ರ ಕೈ ಕೊಟ್ಟಿತ್ತು. ರವಿವಾರ ಮಧ್ಯಾಹ್ನದಿಂದಲೇ ಮೋಡ ಕವಿದಿದ್ದರಿಂದ ತಾಲೂಕಿನ ಪೂರ್ವ ಹಾಗೂ ಪಶ್ಚಿಮ ಭಾಗದಲ್ಲಿ ಗಾಳಿ ಮಿಶ್ರಿತ ಮಳೆ ಆರಂಭಗೊಂಡು ನಗರ ಹೊರತುಪಡಿಸಿ ಗ್ರಾಮೀಣ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next