ಬೆಳಗಾವಿ: 15 ವರ್ಷಗಳ ಹಿಂದೆ ಗ್ಯಾಂಗ್‌ಸ್ಟಾರ್ ಪ್ರವೀಣ ಶಿಂತ್ರೆಯನ್ನು ಎನ್‌ಕೌಂಟರ್ ಮಾಡಿದ ಬಳಿಕ ಈಗ ಬೆಳಗಾವಿಯಲ್ಲಿ ಮತ್ತೊಮ್ಮೆ ಗುಂಡಿನ ಸದ್ದು ಮಾರ್ದನಿಸಿದ್ದು, ಕೊಲೆ, ಸುಲಿಗೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಮಂಗಳವಾರ ಬೆಳಗಿನ ಜಾವ ನಗರದ ಧರ್ಮನಾಥ ಭವನ ಸಮೀಪ ಪೊಲೀಸರ ಮೇಲೆ ಅಟ್ಯಾಕ್ ಮಾಡಲು ಮುಂದಾದಾಗ ಪೊಲೀಸರು ಗುಂಡು ಹಾರಿಸುವ ಮೂಲಕ ಆತನನ್ನು ಹೆಡೆಮುರಿ ಕಟ್ಟಿದ್ದಾರೆ.
ಮೂಲತಃ ಕಿತ್ತೂರು ತಾಲೂಕಿನ ಚಿಕ್ಕನಂದಿ ಗ್ರಾಮದ ಸದ್ಯ ಶಾಸ್ತ್ರಿ ನಗರದ ನಿವಾಸಿ ವಿಶಾಲಸಿಂಗ್ ವಿಜಯಸಿಂಗ್ ಚವ್ಹಾಣ(25) ಎಂಬ ಆರೋಪಿಯ ಕಾಲಿಗೆ ಗುಂಡು ಹಾರಿಸಲಾಗಿದ್ದು, ಈತನ ಮೊಣಕಾಲಿಗೆ ಗುಂಡು ಹೊಡೆಯಲಾಗಿದೆ. ಗಂಭೀರ ಗಾಯಗೊಂಡ ಈತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾದಿ ಹಾಗೂ ಅವರ ತಂಡ ಗುಂಡಿನ ದಾಳಿ ನಡೆಸಿದೆ. ಹಲವು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ವಿಶಾಲಸಿಂಗ್ ಪೊಲೀಸರ ಮೇಲೆಯೇ ದಾಳಿ ನಡೆಸಲು ಯತ್ನಿಸಿದ್ದಾನೆ. ಕೂಡಲೇ ಪೊಲೀಸರು ಈತನ ಮೇಲೆ ಗುಂಡು ಹಾರಿಸಿ ಸಾಹಸ ಮೆರೆದಿದ್ದಾರೆ. ಈ ಮೂಲಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಸಮಾಜದಲ್ಲಿ ಅಶಾಂತಿ ಭಂಗವನ್ನುಂಟು ಮಾಡುತ್ತಿದ್ದವರಿಗೆ ತಕ್ಕ ಪಾಠ ಕಲಿಸಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಕೊಲೆಗೆ ಸುಫಾರಿ ಪಡೆದಿದ್ದ ಆರೋಪಿ
Related Articles
ಇಲ್ಲಿಯ ಭವಾನಿ ನಗರದಲ್ಲಿ ಬೆಳಗ್ಗೆ ಕಾರಿನಲ್ಲಿ ಹೊರಟಿದ್ದ ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನವರ(40) ಎಂಬಾತನನ್ನು ಮಾರ್ಚ್ 15ರಂದು ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು, ಕಣ್ಣಿಗೆ ಖಾರದಪುಡಿ ಎರಚಿ, ಚಾಕುವಿನಿಂದ ಇರಿದು, ಕೊಲೆ ಮಾಡಿ ಪರಾರಿಯಾಗಿದ್ದರು. ರಾಜು ಮೂರು ವಿವಾಹವಾಗಿದ್ದನು. ತನ್ನ ಪತಿ ರಾಜುವನ್ನು ಕೊಲ್ಲಲು ಎರಡನೇ ಹೆಂಡತಿ ಕಿರಣ 10 ಲಕ್ಷ ರೂ. ಸುಫಾರಿ ನೀಡಿದ್ದಳು. ಕೊಲೆ ಮಾಡಿಸಲು ವಿಶಾಲಸಿಂಗ್ ಸುಫಾರಿ ಪಡೆದಿದ್ದನು.
ಮಾರ್ಚ್ 15ರಂದು ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನವರ ಎಂಬಾತನ ಕೊಲೆಗೆ ಸುಫಾರಿ ಪಡೆದಿದ್ದ ಆರೋಪ ವಿಶಾಲಸಿಂಗ್ ನ ಮೇಲಿದೆ. ಒಂದು ಕೊಲೆ, ಆರು ಕೊಲೆಗೆ ಯತ್ನ ಪ್ರಕರಣ, ಸುಲಿಗೆ, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ವಿಶಾಲಸಿಂಗ್ ಚವ್ಹಾಣ ಭಾಗಿಯಾಗಿದ್ದಾನೆ. ಖಡೇಬಜಾರ್, ಕ್ಯಾಂಪ್, ಶಹಾಪುರ, ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣಗಳಿವೆ. ಜತೆಗೆ ಮಹಾರಾಷ್ಟ್ರದ ವಿವಿಧ ಠಾಣೆಗಳಲ್ಲಿಯೂ ಈತನ ವಿರುದ್ಧ ಪ್ರಕರಣಗಳಿವೆ.
ಶೀತಲ ಚೌಗುಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರವೀಣ ಶಿಂತ್ರೆಯನ್ನು 6 ಸೆಪ್ಟೆಂಬರ್ 2007ರಂದು ಬೆಳಗಿನ ಜಾವ ಬೆಳಗಾವಿಯ ಲಕ್ಷ್ಮೀ ನಗರದ ರಾಜದೀಪ ಬಂಗ್ಲೆಯಲ್ಲಿ ಎನ್‌ಕೌಂಟರ್ ಮಾಡಲಾಗಿತ್ತು. ಈಗ ಅದೇ ರೀತಿಯಲ್ಲಿ ಬೆಳಗಾವಿಯಲ್ಲಿ ಇನ್ನೊಂದು ಗುಂಡಿನ ದಾಳಿ ಆಗಿದ್ದು, ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದವರಿಗೆ ನಡುಕ ಹುಟ್ಟಿಸಿದೆ.