ಬೆಳಗಾವಿ: ರಾಜ್ಯದಲ್ಲಿ ಈ ವಾರದಲ್ಲಿ ಭೂ ಸುರಕ್ಷಾ ಯೋಜನೆ ಜಾರಿಗೆ ತರಲಿದ್ದೇವೆ. 31 ಜಿಲ್ಲೆಗಳಲ್ಲಿ 31 ತಾಲೂಕುಗಳನ್ನು ಆಯ್ಕೆ ಮಾಡಿಕೊಂಡು ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಬೆಳಗಾವಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಂದು ಜಿಲ್ಲೆಯಲ್ಲಿ ಒಂದು ತಾಲೂಕನ್ನು ಆಯ್ಕೆಮಾಡಿಕೊಂಡು ಮೂರು ತಿಂಗಳಲ್ಲಿ ಎಲ್ಲ ಹಳೆಯ ದಾಖಲೆಗಳನ್ನು ಡಿಜಟಲೀಕರಣಗೊಳಿಸಲಾಗುವದು ಎಂದರು.
ಈ ಯೋಜನೆಗೆ ಬೇಕಾದ ಅನುದಾನವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ಒದಗಿಸಲಾಗಿದೆ ಎಂದು ಹೇಳಿದರು.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹಳೆಯ ದಾಖಲೆಗಳು ಶಿಥಿಲಾವಸ್ಥೆಯಲ್ಲಿವೆ. ಅವುಗಳನ್ನು ಸಂರಕ್ಷಿಸಿ ಡಿಜಿಟಲೀಕರಣಗೊಳಿಸುವದು ಈ ಯೋಜನೆಯ ಉದ್ದೇಶ ಎಂದರು.
ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ತಹಸೀಲ್ದಾರ ಕಚೇರಿಗಳಲ್ಲಿ 95% ರಷ್ಟು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಎಸಿ ಕಚೇರಿ ನ್ಯಾಯಾಲಯದಲ್ಲಿ 35 ಸಾವಿರ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಸಚಿವರು ಹೇಳಿದರು