Advertisement
ಶಬಾನಾ (38) ಮಕ್ಕಳಾದ ಸಾನಿಯಾ (18), ಉಮ್ರಾ (16) ಮೃತಪಟ್ಟವರು. ಅಂಜುಮನ್ ಇಸ್ಲಾಂ ಸಂಸ್ಥೆಯ ಪಿಯುಸಿ ವಿಭಾಗದಲ್ಲಿ ಸಾನಿಯಾ, ಎಸ್‌ಎಸ್‌ಎಲ್‌ಸಿಯಲ್ಲಿ ಉಮ್ರಾ ಓದುತ್ತಿದ್ದಲ್ಲದೇ ಪರೀಕ್ಷೆಯ ತಯಾರಿಯಲ್ಲಿದ್ದರು. ಆದರೆ ಶಬಾನಾಳ ಪತಿಯಾದ ಮಹಮ್ಮದ ಅಸ್ಲಂನ ಚಿಕ್ಕಮ್ಮಳ ಮಗಳ ಮದುವೆಗೆ ತೆರಳಿದ್ದು, ಈ ವೇಳೆ ನಡೆದ ಅಪಘಾತದಲ್ಲಿ ತಾಯಿ-ಮಕ್ಕಳ ಜೀವವೇ ಹೋಗಿದೆ. ಶಬಾನಾಗೆ ಇನ್ನೂ ಇಬ್ಬರುಗಂಡು ಮಕ್ಕಳಿದ್ದು, ಅವರಿಬ್ಬರೂ ಈ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಹಮ್ಮದ್ ಅಸ್ಲಾಂ ಲಂಗೋಟಿ ಹಾಗೂ ವಾಸೀಮ್ ಲಂಗೋಟಿ ಅಣ್ಣ-ತಮ್ಮಂದಿರಾಗಿದ್ದು, ಇಬ್ಬರೂ ಲಾರಿ ಚಾಲಕರು. ಹೀಗಾಗಿ ಕೆಲಸವಿದ್ದ ಕಾರಣ ಚಿಕ್ಕಮ್ಮಳ ಮಗಳ ಮದುವೆಗೆ ಹೋಗಲು ಆಗಿರಲಿಲ್ಲ. ಈ ಕಾರಣದಿಂದ ಇಬ್ಬರು ತಮ್ಮ ಪತ್ನಿ-ಮಕ್ಕಳನ್ನು
ಮದುವೆಯಲ್ಲಿ ಪಾಲ್ಗೊಳ್ಳಲು ಕಿತ್ತೂರಿಗೆ ಕಳುಹಿಸಿ, ಕೊಟ್ಟಿದ್ದಾರೆ. ಕಿತ್ತೂರಿನಲ್ಲಿ ಬುಧವಾರ ಮದುವೆ ಮುಗಿಸಿ ಬಂದಿದ್ದ ಕುಟುಂಬಗಳು, ಮತ್ತೆ ಗುರುವಾರ ಬೆಳಿಗ್ಗೆ ಬೀಡಿಯಲ್ಲಿ ನಿಗದಿಯಾಗಿದ್ದ ಆರಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದೆ. ಈ ಹಿಂದಿನ ದಿನವೂ ಮದುವೆಗೂ ಧಾರವಾಡದಿಂದ ಬಸ್ಸಿನಲ್ಲಿಯೇ ಹೋಗಿ ಬಂದಿದ್ದ ಕುಟುಂಬವು, ಆರಕ್ಷತೆಗೂ ಕಿತ್ತೂರಿನವರೆಗೆ ಬಸ್ಸಿನಲ್ಲಿಯೇ ತೆರಳಿದೆ. ಆ ಬಳಿಕ ಕಿತ್ತೂರಿನಿಂದ ಬೀಡಿ ಗ್ರಾಮದವರೆಗೆ ತೆರಳಲು ಸಂಬಂಧಿಕರ ಕಾರು ಹತ್ತಿದ್ದು, ಈ ಕಾರೇ ಜವರಾಯನಂತೆ ಈ ಮೂವರ ಬಲಿ ಪಡೆದುಕೊಂಡಿದೆ. ಇದಲ್ಲದೇ ವಾಸೀಮ್‌ನ ಪತ್ನಿ ಸೋಫಿಯಾ ಹಾಗೂ ಇಬ್ಬರು ಮಕ್ಕಳಿಗೂ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗ್ಗೆಯಷ್ಟೇ ಆರಕ್ಷತೆಗೆಂದು ಹೋಗಿದ್ದವರ ಸಾವಿನ ಸುದ್ದಿ ಆಘಾತದಂತೆ ತಲುಪಿಸಿದ್ದು, ಇಡೀ ತಡಕೋಡ ಓಣಿಯಲ್ಲಿ ಸ್ಮಶಾನ ಮೌನವೇ ಆವರಿಸುವಂತೆ ಮಾಡಿದೆ. ಎಲ್ಲರೂ ತಾಯಿ-ಮಕ್ಕಳ ಸಾವಿನ ಸುದ್ದಿಗೆ ಎಲ್ಲರೂ ಮರುಗಿದ್ದು ಕಂಡು ಬಂದರೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.ತಡರಾತ್ರಿವರೆಗೂ ಮೃತರ ಪಾರ್ಥಿವ ಶರೀರಗಳು ತಲುಪಲಿದ್ದು, ಶುಕ್ರವಾರ ಅಂತ್ಯಕ್ರಿಯೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.