ಬೆಳಗಾವಿ: ಉಕ್ರೇನ್ ನಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದ ಬೆಳಗಾವಿಯ ವಿದ್ಯಾರ್ಥಿನಿಯರು ಯುದ್ಧ ಆರಂಭವಾಗಿ 10 ದಿನಗಳ ನಂತರ ತಾಯ್ನಾಡಿಗೆ ಕಾಲಿಟ್ಟಿದ್ದು, ಪಾಲಕರಲ್ಲಿ ಸಂತಸದ ತಂದಿದೆ.
ಗೋಕಾಕ್ ತಾಲೂಕಿನ ಘಟಪ್ರಭಾದ ಅಮೋಘಾ ಚೌಗುಲೆ ಹಾಗೂ ರಾಯಬಾಗ ತಾಲೂಕಿನ ಕಂಕಣವಾಡಿಯ ಪ್ರಿಯಾ ನಿಡಗುಂದಿ ಎಂಬ ಇಬ್ಬರು ವಿದ್ಯಾರ್ಥಿನಿಯರು ರವಿವಾರ ಬೆಳಗ್ಗೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಶನಿವಾರ ಪೋಲೆಂಡ್ ದೇಶದಿಂದ ಪ್ರಯಾಣ ಬೆಳೆಸಿ ಭಾರತದ ವಿಮಾನ ಮೂಲಕ ಆಗಮಿಸಿದ್ದಾರೆ.
ದೆಹಲಿಯಲ್ಲಿ ಕರ್ನಾಟಕದ ಅಧಿಕಾರಿಗಳು ವಿದ್ಯಾರ್ಥಿಗಳನ್ನು ವಿಮಾನ ಮೂಲಕ ಬೆಂಗಳೂರಿಗೆ ಕರೆದುಕೊಂಡು ಬರಲಿದ್ದಾರೆ. ರವಿವಾರ ಮಧ್ಯಾಹ್ನದ ಹೊತ್ತಿಗೆ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ:ವಿಷಮ ಸ್ಥಿತಿಯಲ್ಲಿ ಭಾರತ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ: ಉಕ್ರೇನ್ ನಿಂದ ಆಗಮಿಸಿದ ಚೈತ್ರಾ
ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಹಿನ್ನೆಲೆಯಲ್ಲಿ ಸುಮಾರು ಐದಾರು ದಿನಗಳ ಕಾಲ ಬೆಳಗಾವಿಯ ಈ ವಿದ್ಯಾರ್ಥಿನಿಯರು ಆತಂಕದಲ್ಲಿ ಕಾಲ ಕಳೆದಿದ್ದಾರೆ. ಹಾಗೋ ಹೀಗೋ ಮಾಡಿ ರೈಲು, ಟ್ಯಾಕ್ಸಿ ಮೂಲಕ ಉಕ್ರೇನ್ ಗಡಿಗೆ ಒಂದು ಅಲ್ಲಿಂದ ಕಾಲ್ನಡಿಗೆಯಲ್ಲಿ ಚೆಕ್ ಪಾಯಿಂಟ್ ಗೆ ಆಗಮಿಸಿ ಪೋಲೆಂಡ್ ದೇಶಕ್ಕೆ ಬಂದು ಅಲ್ಲಿ ರವಿಶಂಕರ್ ಗುರೂಜಿಯವರ ಆಶ್ರಮದಲ್ಲಿ ನೆಲೆಸಿದ್ದರು. ಎರಡು ಮೂರು ದಿನಗಳ ಕಾಲ ಅಲ್ಲಿಯೇ ಉಳಿದು ನಂತರ ಭಾರತೀಯ ರಾಯಭಾರಿ ಕಚೇರಿಯ ಸಂಪರ್ಕಕ್ಕೆ ಬಂದು ಭಾರತಕ್ಕೆ ಮರಳಿದ್ದು ಪೋಷಕರಲ್ಲಿ ಸಂತಸ ಮನೆ ಮಾಡಿದೆ.