Advertisement

ಹಳೇ ನಿರೀಕ್ಷೆ ಗಳಿಗೆ ಮರುಜೀವ

07:00 PM Jul 29, 2021 | Team Udayavani |

ಕೇಶವ ಆದಿ

Advertisement

ಬೆಳಗಾವಿ: ಯಾವುದೇ ಒಂದು ಹೊಸ ಸರಕಾರ ಅಥವಾ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಂಡಾಗ ಜನರ ನಿರೀಕ್ಷೆಗಳು ಗರಿಗೆದರುವುದು ಸಹಜ. ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಕಾಯಕಲ್ಪ, ಅಭಿವೃದ್ಧಿ ಹಾಗೂ ಸಮಸ್ಯೆಗಳ ಪರಿಹಾರದ ವಿಷಯದಲ್ಲಿ ಬೆಟ್ಟದಷ್ಟು ಬೇಡಿಕೆಗಳು ತಾವಾಗಿಯೇ ಜೀವ ಪಡೆಯುತ್ತವೆ. ಇದಕ್ಕೆ ಗಡಿ ಜಿಲ್ಲೆ ಬೆಳಗಾವಿ ಹೊರತಾಗಿಲ್ಲ. ಹೊಸ ಮುಖ್ಯಮಂತ್ರಿ ಮತ್ತು ಸರಕಾರ ಬಂದಾಗ ಇಲ್ಲಿಯ ಒಂದೆರಡು ಪ್ರಮುಖ ಬೇಡಿಕೆಗಳು ಪ್ರಸ್ತಾಪವಾಗುತ್ತವೆ.

ಒಂದು ಸುವರ್ಣ ವಿಧಾನಸೌಧಕ್ಕೆ ಸರಕಾರಿ ಕಚೇರಿಗಳ ಸ್ಥಳಾಂತರ ಹಾಗೂ ನೀರಾವರಿ ಯೋಜನೆಗಳ ಪೂರ್ಣ ಪ್ರಮಾಣದ ಅನುಷ್ಠಾನ. ಇನ್ನೊಂದು ಜಿಲ್ಲಾ ವಿಭಜನೆ. ಈಗ ಅದೇ ಸವಾಲುಗಳು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮುಂದಿವೆ. ಹೊಸದಾಗಿ ಬಂದ ಮುಖ್ಯಮಂತ್ರಿಗಳು ಹಾಗೂ ಸರಕಾರ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಮಂತ್ರ ಪಠಿಸುತ್ತಾರೆ. ಆದರೆ ಮುಂದಿನ ದಿನಗಳಲ್ಲಿ ಇದು ಪಾಲನೆಯಾಗುವದೇ ಇಲ್ಲ. ಎಲ್ಲ ಕಡೆಗೂ ತಾರತಮ್ಯ ಧೋರಣೆ ಎದ್ದುಕಾಣುತ್ತದೆ. ಮೊದಲು ಇದು ನಿಲ್ಲಬೇಕು. ಉತ್ತರ ಕರ್ನಾಟಕದವರಾದ ಬಸವರಾಜ ಬೊಮ್ಮಾಯಿ ಅವರು ಸರ್ವಜನಾಂಗದ ಹೂವುಗಳು ಕಮರಿಹೋಗದ ಹಾಗೆ ನೋಡಿಕೊಳ್ಳಬೇಕು ಎಂಬುದು ಸಾಹಿತಿಗಳ ಹಾಗೂ ಹೋರಾಟಗಾರರ ಅಭಿಪ್ರಾಯ.

ಬೆಳಗಾವಿ ಜಿಲ್ಲೆಯ ವಿಷಯ ಬಂದಾಗ ಸತತ ಮೂರು ವರ್ಷಗಳಿಂದ ಪ್ರಕೃತಿ ವಿಕೋಪ ಮತ್ತು ನದಿಗಳ ಪ್ರವಾಹ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದೆ. ನದಿ ಪಾತ್ರದ ಗ್ರಾಮಗಳಲ್ಲಿ ನೆಮ್ಮದಿಯೇ ಮಾಯವಾಗಿದೆ. ಪ್ರವಾಹ ಬಂದಾಗ ಗ್ರಾಮಗಳ ಸ್ಥಳಾಂತರ ಭರವಸೆ ನೀಡುವ ಸರಕಾರ ನೀರು ಇಳಿಯುತ್ತಿದ್ದಂತೆ ಅದನ್ನು ಮರೆಯುತ್ತಿದೆ. ಹಾನಿಯಾದಾಗ ಸಾವಿರಾರು ಕೋಟಿ ಪರಿಹಾರಕ್ಕೆ ಸಿದ್ಧವಾಗುತ್ತದೆ ಆದರೆ ಸಮಸ್ಯೆ ಮಾತ್ರ ಹಾಗೆಯೇ ಇದೆ. ಉತ್ತರ ಕರ್ನಾಟಕದ ಜನರ ಸಮಸ್ಯೆಯನ್ನು ಚೆನ್ನಾಗಿ ಬಲ್ಲ ಬಸವರಾಜ ಬೊಮ್ಮಾಯಿ ಅವರು ಮೊದಲು ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕಾಗಿದೆ. ಇದು ನದಿ ಪಾತ್ರದ ಜನರ ಬಹಳ ದೊಡ್ಡ ನಿರೀಕ್ಷೆ. ಇನ್ನು ಕಚೇರಿಗಳ ಸ್ಥಳಾಂತರ ವಿಷಯದಲ್ಲಿ ಮುಖ್ಯಮಂತ್ರಿಗಳು ಗಟ್ಟಿ ನಿರ್ಧಾರ ಕೈಗೊಳ್ಳಬೇಕು. ಸಕ್ಕರೆ ನಿರ್ದೇಶನಾಲಯ, ಗಡಿ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಧಾರವಾಡದಲ್ಲಿರುವ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಸೇರಿದಂತೆ 10 ಮುಖ್ಯ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಬೇಕು. ಇದರಿಂದ ಸುವರ್ಣ ವಿಧಾನಸೌಧ ಅಲಂಕಾರಿಕ ಗೊಂಬೆಯಾಗುವದು ತಪ್ಪುತ್ತದೆ ಎಂಬುದು ಕನ್ನಡ ಸಂಘಟನೆಗಳ ಅಭಿಪ್ರಾಯ. ಆದರೆ ಕಚೇರಿಗಳ ಸ್ಥಳಾಂತರದ ಬದಲು ಪ್ರಾದೇಶಿಕ ಆಯುಕ್ತರ ಕಚೇರಿಯನ್ನು ರದ್ದುಮಾಡಲು ಹೊರಟಿರುವ ಸರಕಾರದ ಕ್ರಮ ಈ ಭಾಗದ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಜನರ ಈ ನೋವನ್ನು ನೂತನ ಮುಖ್ಯಮಂತ್ರಿಗಳು ನಿವಾರಣೆ ಮಾಡುವ ಕಡೆ ಗಮನಹರಿಸಬೇಕಿದೆ.

ಇದಲ್ಲದೆ ಬೆಳಗಾವಿ ನಗರದಲ್ಲಿ ಆರು ದಶಕಗಳಿಂದ ಹಾಗೇ ಇರುವ ಕುಡಿಯುವ ನೀರು ಪೂರೈಕೆ ಪೈಪ್‌ ಲೈನ್‌ಗಳ ಬದಲಾವಣೆ, ಒಳಚರಂಡಿ ನಿರ್ಮಾಣ ಹಾಗೂ ನಗರದಲ್ಲಿ ಫ್ಲೈಓವರ್‌ಗಳ ನಿರ್ಮಾಣ ಸರಕಾರದ ಮುಂದಿರುವ ಪ್ರಮುಖ ಬೇಡಿಕೆಗಳು. ಈ ಹಿಂದೆ ಫ್ಲೈಓವರ್‌ಗಳ ನಿರ್ಮಾಣಕ್ಕೆ ಹಣ ಮಂಜೂರಾಗಿದ್ದರೂ ಅದು ಕಾರ್ಯರೂಪಕ್ಕೆ ಬರಲೇ ಇಲ್ಲ. ಜಿಲ್ಲಾ ವಿಭಜನೆ: ನೂತನ ಮುಖ್ಯಮಂತ್ರಿಗಳಿಗೆ ಇದು ದೊಡ್ಡ ಸವಾಲು. ಆಡಳಿತಾತ್ಮಕ ಅನುಕೂಲತೆ ದೃಷ್ಟಿಯಿಂದ ಬೆಳಗಾವಿಯನ್ನು ವಿಭಜನೆ ಮಾಡಿ ಚಿಕ್ಕೋಡಿ ಹಾಗೂ ಗೋಕಾಕನ್ನು ಹೊಸ ಜಿಲ್ಲೆಗಳನ್ನಾಗಿ ಮಾಡಬೇಕು ಎಂಬ ಕೂಗು ದಶಕಗಳಿಂದ ಕೇಳಿಬರುತ್ತಲೇ ಇದೆ. ಇದುವರೆಗಿನ ಯಾವ ಮುಖ್ಯಮಂತ್ರಿಗಳೂ ಇದರ ಬಗ್ಗೆ ದಿಟ್ಟ ನಿಲುವು ತೆಗೆದುಕೊಂಡಿಲ್ಲ. ಇದಕ್ಕಾಗಿ ಸಾಕಷ್ಟು ಹೋರಾಟಗಳು ನಡೆದರೂ ರಾಜಕೀಯ ಪಕ್ಷಗಳಲ್ಲಿನ ಒಗ್ಗಟ್ಟಿನ ಕೊರತೆ ಇದಕ್ಕೆ ಅಡ್ಡಿಯಾಗಿದೆ. ಈಗ ಬಸವರಾಜ ಬೊಮ್ಮಾಯಿ ಸರಕಾರದ ಮೇಲೆ ಈ ಜವಾಬ್ದಾರಿ ಬಿದ್ದಿದೆ.

Advertisement

ನೀರಾವರಿ ವಿಷಯದಲ್ಲಿ ಖೀಳೇಗಾವ ಬಸವೇಶ್ವರ ಏತ ನೀರಾವರಿ, ವೀರಭದ್ರೇಶ್ವರ ಏತ ನೀರಾವರಿ, ರಾಮಲಿಂಗೇಶ್ವರ ಏತ ನೀರಾವರಿ, ಮಹಾಲಕ್ಷ್ಮಿ ಏತ ನೀರಾವರಿ ಸೇರಿದಂತೆ ಅನೇಕ ಯೋಜನೆಗಳು ಇನ್ನೂ ಪೂರ್ಣವಾಗಿಲ್ಲ. ಫಲವತ್ತಾದ ಭೂಮಿ ಹೊಂದಿರುವ ಖಾನಾಪುರ ತಾಲೂಕಿನಲ್ಲಿ ಒಂದೇ ಒಂದು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇಲ್ಲ. ಈ ಎಲ್ಲ ಯೋಜನೆಗಳ ಕುರಿತು ಮಾಹಿತಿ ಹೊಂದಿರುವ ಮುಖ್ಯಮಂತ್ರಿಗಳು ಈಗ ಎಷ್ಟು ಆದ್ಯತೆ ನೀಡುತ್ತಾರೆ ಎಂಬ ಕುತೂಹಲ ಕ್ಷೇತ್ರದ ಜನರಲ್ಲಿದೆ. ಅದೇ ರೀತಿ ಕಳಸಾ-ಬಂಡೂರಿ ಯೋಜನೆ ಬೊಮ್ಮಾಯಿ ಅವರ ಮುಂದಿರುವ ಮತ್ತೂಂದು ಪ್ರಮುಖ ಸವಾಲು. ಕಳಸಾ-ಬಂಡೂರಿ ಮತ್ತು ಮಹದಾಯಿ ವಿಷಯದಲ್ಲಿ ಬೊಮ್ಮಾಯಿ ಅವರಿಗೆ ಅಪಾರ ಅನುಭವ ಹಾಗೂ ಜ್ಞಾನವಿದೆ. ಅದರ ಇಂಚಿಂಚೂ ಮಾಹಿತಿ ಅವರಲ್ಲಿದೆ. ಈ ಹಿಂದೆ ಇದರ ಅನುಷ್ಠಾನಕ್ಕೆ ಸಾಕಷ್ಟು ಹೋರಾಟ ಮಾಡಿದ್ದಾರೆ. ಪಾದಯಾತ್ರೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಈಗ ಕಳಸಾ-ಬಂಡೂರಿ ನೀರನ್ನು ಮಲಪ್ರಭಾ ನದಿಗೆ ಜೋಡಿಸುವ ಕಾರ್ಯದ ಮಹತ್ತರ ಜವಾಬ್ದಾರಿ ಮುಖ್ಯಮಂತ್ರಿಗಳ ಮೇಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next