ಬೆಳಗಾವಿ: ದೂರು ದಾಖಲಾದ ಕೇವಲ ಆರು ಗಂಟೆಯಲ್ಲಿ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಇಲ್ಲಿಯ ಎಪಿಎಂಸಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಜಾರಾ ಕಾಲೋನಿಯ 1ನೇ ಕ್ರಾಸ್‌ನ ಮರಿಯಮ್ಮ ಬಾಬು ಪರಶಿಪೋಗು ಹಾಗೂ ಜನತಾ ಕಾಲೋನಿ ಬಾಚಿಯ ಅನಿತಾ ಯಲ್ಲಪ್ಪ ಕಾಂಬಳೆ ಎಂಬ ಇಬ್ಬರು ಕಳ್ಳಿಯರನ್ನು ಪೊಲೀಸರು ಬಂಧಿಸಿ 4.50 ಲಕ್ಷ ರೂ.
ನಗದು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳಗಾವಿಯ ಕುವೆಂಪು ನಗರದ ಓಂಕಾರ ನಗರದ 8ನೇ ಕ್ರಾಸ್‌ನ ಆಝಾದ್ ಕೋ-ಆಪ್ ಹೌಸಿಂಗ್ ಸೊಸೈಟಿಯ ಯೋಗೇಶ್ ಭರತ್ ಛಾಬಡಾ ಎಂಬುವವರ ಪ್ಲೈವುಡ್ ಅಂಗಡಿ ಭಾತಕಾಂಡೆ ಗಲ್ಲಿಯಲ್ಲಿದೆ. ವ್ಯಾಪಾರ ಮಾಡಿದ 5.50 ಲಕ್ಷ ರೂ. ಹಣವನ್ನು ನ. 11ರಂದು ಮನೆಯ ಕಪಾಟಿನಲ್ಲಿ ತಂದು ಇಟ್ಟಿದ್ದರು. ಬಳಿಕ ಮಾರನೇ ದಿನ ಬ್ಯಾಂಕಿಗೆ ಹಣ ಜಮಾ ಮಾಡಲು ಕಪಾಟು
ತೆರೆದಾಗ ಕೇವಲ 1 ಲಕ್ಷ ರೂ. ಮಾತ್ರ ಇತ್ತು. ಇದರಿಂದ ಗಾಬರಿಯಾದ ಛಾಬಡಾ ಕುಟುಂಬ ಮನೆಯ ಎಲ್ಲರನ್ನೂ ವಿಚಾರಿಸಿದೆ.
ನಂತರ ನ. 15ರಂದು ಯೋಗೇಶ್ ಛಾಬಡಾ ಎಪಿಎಂಸಿ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಪಿಎಂಸಿ ಇನ್ಸಪೆಕ್ಟರ್ ಜಾವೇದ್ ಮುಶಾಪುರೆ ನೇತೃತ್ವದ ತಂಡ ಕಳ್ಳತನ ಆಗಿರುವ ಮನೆಯ ಸುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದೆ. ಬಳಿಕ ಮನೆ ಕೆಲಸದವರನ್ನು ವಿಚಾರಣೆಗೆ ಒಳಪಡಿಸಿದಾಗ ಮನೆಯಲ್ಲಿ ಇಟ್ಟಿದ್ದ 5.50 ಲಕ್ಷ ರೂ. ಪೈಕಿ 4.50 ಲಕ್ಷ ರೂ. ಲಪಟಾಯಿಸಿದ್ದಾಗಿ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ:ಕೊನೆಗೂ ರಾಜ್ಯ ಸಾರಿಗೆ ನೌಕರರ ವೇತನ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ
ಈ ಇಬ್ಬರೂ ಕಳ್ಳಿಯರು ಯೋಗೇಶ್ ಭರತ್ ಛಾಬಡಾ ಮನೆ ಕೆಲಸದವರಾಗಿದ್ದರು. ಆರೋಪಿಗಳಿಂದ 4.50 ಲಕ್ಷ ರೂ. ವಶಕ್ಕೆ
ಪಡೆದುಕೊಂಡು ಹಣವನ್ನು ಮೂಲ ಮಾಲೀಕರಿಗೆ ಹಸ್ತಾಂತರಿಸಲಾಯಿತು. ದೂರು ದಾಖಲಾದ ಕೇವಲ ಆರು ಗಂಟೆಗಳಲ್ಲಿ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರ ಕಾರ್ಯಕ್ಕೆ ಪೊಲೀಸ್ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.