ವರದಿ: ಕೇಶವ ಆದಿ
ಬೆಳಗಾವಿ: ಎರಡೂವರೆ ದಶಕಗಳ ನಂತರ ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ಕಾಣುತ್ತಿರುವ ಮಹಾನಗರಪಾಲಿಕೆ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಹಣೆಬರಹ ನಿರ್ಧಾರಕ್ಕೆ ಅಖಾಡ ಸಿದ್ಧವಾಗಿದೆ.
ಕಡಿಮೆ ಕಾಲಾವಕಾಶ, ಸೀಮಿತ ಸಂಖ್ಯೆಯ ಜನರ ಪ್ರಚಾರ, ವಿವಾದಾತ್ಮಕ ಹೇಳಿಕೆ ಸೇರಿದಂತೆ ಎಲ್ಲವನ್ನೂ ಸೂಕ್ಷ್ಮವಾಗಿ ನೋಡಿರುವ ನಾಲ್ಕು ಲಕ್ಷ ಮತದಾರರು ಪಾಲಿಕೆಯಲ್ಲಿ ಯಾರ ಪಾರುಪತ್ಯ ನಡೆಯಬೇಕು ಎಂಬುದನ್ನು ನಿರ್ಧರಿಸಲಿದ್ದಾರೆ. ಮುಖ್ಯವಾಗಿ ಈ ಚುನಾವಣೆ ಬಿಜೆಪಿ ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ಅವರಿಗೆ ಒಂದು ರೀತಿಯ ಅಗ್ನಿಪರೀಕ್ಷೆ. ಮುಂದಿನ ವಿಧಾನಸಭೆ ಚುನಾವಣೆಯ ದೃಷ್ಟಿಯಿಂದ ಬಹಳ ಮಹತ್ವದ್ದು. ಇದರಲ್ಲಿ ಗೆದ್ದರೆ ಮುಂದಿನ ವಿಧಾನಸಭೆ ಚುನಾವಣೆಯ ಹಾದಿ ಸ್ವಲ್ಪ ಸರಳ.
ಒಟ್ಟು 58 ಸದಸ್ಯ ಬಲಾಬಲದ ಪಾಲಿಕೆಯಲ್ಲಿ ಸರಳ ಬಹುಮತಕ್ಕೆ 30 ಸ್ಥಾನ ಸಾಕು. ಈ ಗುರಿಯನ್ನು ತಲುಪುವ ವಿಶ್ವಾಸದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಇದೆ. ಮಹಾರಾಷ್ಟ್ರ ಏಕೀಕರಣ ಸಮಿತಿ ಮಾತ್ರ ಗೆದ್ದವರ ಕಡೆ ಮುಖ ಮಾಡಿ ಅವರಿಗೆ ತಮ್ಮ ಹಾರ ಹಾಕಲು ಸಿದ್ಧವಾಗಿದೆ. ಪ್ರಚಾರದ ಸಮಯದಲ್ಲಿ ಮಾತನಾಡುವ ಭರಾಟೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಅನಗತ್ಯ ವಿವಾದಕ್ಕೆ ಆಹಾರವಾಗಿದ್ದಾರೆ.
ಬಿಜೆಪಿ ಚುನಾವಣಾ ಪ್ರಣಾಳಿಕೆ ಮೂಲಕ ವಿವಾದದ ಕೇಂದ್ರವಾದರೆ ಕಾಂಗ್ರೆಸ್ ಪಕ್ಷ ದಿ| ಸುರೇಶ ಅಂಗಡಿ ಅವರ ಅಂತ್ಯಸಂಸ್ಕಾರದ ವಿಷಯ ಕೆದಕಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದೆ. ಈ ಎರಡೂ ವಿಷಯಗಳಲ್ಲಿ ಯಾವ ನಾಯಕರೂ ಪಕ್ಷದ ನಿಲುವನ್ನು ಸಮರ್ಥಿಸಿಕೊಳ್ಳಲಿಲ್ಲ. ಬದಲಾಗಿ ಅದಕ್ಕೆ ತೇಪೆ ಹಚ್ಚುವ ಕೆಲಸ ಮಾಡಿದರು. ಆದರೆ ಇದು ಮತದಾನದ ವೇಳೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಸತತ ಬೆಲೆ ಏರಿಕೆಯ ಮಧ್ಯೆಯೂ ಜನರ ಮುಂದೆ ಧೈರ್ಯವಾಗಿ ಹೋಗಿರುವ ಬಿಜೆಪಿ ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆ, ಅಭಿವೃದ್ಧಿ ಯೋಜನೆಗಳು ಮತ್ತು ಹಿಂದುತ್ವದ ಅಲೆಯನ್ನು ನೆಚ್ಚಿಕೊಂಡಿದೆ. ನಾಯಕರು ಇದೇ ಮಂತ್ರ ಜಪಿಸಿ ಮತ ಕೇಳಿದ್ದಾರೆ. ಅದೇ ಕಾಂಗ್ರೆಸ್ ಪಕ್ಷ ಯಾವುದನ್ನೂ ಸ್ಪಷ್ಟವಾಗಿ ಜನರ ಮುಂದೆ ಹೇಳಿಲ್ಲ. ಬದಲಾಗಿ ಸಿದ್ದರಾಮಯ್ಯ ಸರಕಾರ ಇದ್ದಾಗ ಮಾಡಿದ ಕೆಲಸಗಳನ್ನೇ ಜನರ ಮುಂದೆ ಹೇಳಿದೆ.