ಬೆಳಗಾವಿ: ಸರಿಯಾಗಿ ನೂರು ವರ್ಷಗಳ ಹಿಂದೆ ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆ ಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನವು ಮುಂದೆ ಸ್ವಾತಂತ್ರ್ಯ ಹೋರಾಟ ಪ್ರವರ್ಧಮಾನಕ್ಕೆ ಬರಲು ದಿಕ್ಸೂಚಿಯಾಯಿತು. ಇಂದು ಅದೇ ಅಧಿವೇಶನದ ಶತಮಾನೋತ್ಸವ ಆಚರಣೆ ವೇದಿಕೆಯ ಮೂಲಕ ಕಾಂಗ್ರೆಸ್ “ಸಂವಿಧಾನ ಬಚಾವೋ’ ರಾಷ್ಟ್ರೀಯ ಪಾದಯಾತ್ರೆ ಯೊಂದಿಗೆ ಮತ್ತೂಂದು ಐತಿಹಾಸಿಕ ಘಟನೆಗೆ ಮುನ್ನುಡಿ ಬರೆಯಲು ನಿರ್ಧರಿಸಿದೆ. ಇದರೊಂದಿಗೆ ಪಕ್ಷ ಸಂಘಟನೆಗೆ ಮುಂದಾಗಿದೆ.
2025ರ ಜ. 26; ಗಣ ರಾಜ್ಯೋತ್ಸವ ದಂದು ಅಂಬೇಡ್ಕರ್ ಜನ್ಮಸ್ಥಳ ಮಧ್ಯ ಪ್ರದೇಶದ ಮಹೂವಿನಲ್ಲಿ ರಾಷ್ಟ್ರೀಯ ಪಾದ ಯಾತ್ರೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೇ ಪದೇ ಪದೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸುತ್ತಲೇ ಇದೆ ಎಂಬ ಆರೋಪ ಕಾಂಗ್ರೆಸ್‌ನದ್ದಾಗಿದೆ. ಇದಕ್ಕೆ ಪೂರಕವಾಗಿ ಈಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಈಚೆಗೆ ಡಾ| ಅಂಬೇಡ್ಕರ್ ಕುರಿತು ನೀಡಿರುವ ಹೇಳಿಕೆಯು ದೊಡ್ಡ ವಿವಾದದ ಅಲೆ ಸೃಷ್ಟಿಸಿದೆ. ಈಗ ಅದನ್ನೇ ಅಸ್ತ್ರವಾಗಿಟ್ಟು ಕೊಂಡು ಡಾ| ಅಂಬೇಡ್ಕರ್ ಹುಟ್ಟೂರಿನಿಂದಲೇ ಸಂವಿಧಾನ ಬಚಾವೋ ಪಾದ ಯಾತ್ರೆಯ ಕಹಳೆ ಮೊಳಗಿಸಲು ನಿರ್ಧರಿಸಿದೆ.
ಮೋದಿ-ಶಾ ಭದ್ರಕೋಟೆಗೆ ಲಗ್ಗೆ
ಈ ಆಂದೋಲನದ ಮಧ್ಯೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಭದ್ರಕೋಟೆಯಾದ ಗುಜರಾತಿಗೆ ಲಗ್ಗೆ ಇಟ್ಟು, ಎಐಸಿಸಿ ಅಧಿವೇಶನ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ. ಇದು ಎಪ್ರಿಲ್‌ನಲ್ಲಿ ನಡೆಯಲಿದೆ. ಈ ಮೂಲಕ ಮೋದಿ ಮತ್ತು ಅಮಿತ್ ಶಾ ಗುರಿಯಾಗಿಟ್ಟುಕೊಂಡು ನೇರ ಅಖಾಡಕ್ಕೆ ಕಾಂಗ್ರೆಸ್ ಧುಮುಕುತ್ತಿದೆ.
ಕುಂದಾನಗರಿಯ ವೀರಸೌಧ (1924ರಲ್ಲಿ ಗಾಂಧಿ ನೇತೃತ್ವದಲ್ಲಿ ಅಧಿವೇಶನ ನಡೆದಿದ್ದ ಸ್ಥಳ)ದಲ್ಲಿ ಗುರುವಾರ ನವ ಸತ್ಯಾಗ್ರಹ ಬೈಠಕ್‌ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಸಂಬಂಧ ಒಕ್ಕೊರಲ ನಿರ್ಣಯ ಕೈಗೊಳ್ಳಲಾಯಿತು. ಸಭೆಯ ಅನಂತರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್, 132 ಜನ ಭಾಗವಹಿಸಿದ್ದ ಈ ಐತಿಹಾಸಿಕ ಸಭೆಯಲ್ಲಿ ಸುಮಾರು 50 ಜನ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಒಮ್ಮತದೊಂದಿಗೆ ಎರಡು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಈ ಪೈಕಿ ಒಂದು ಗಾಂಧಿ ಮಾರ್ಗದಲ್ಲಿ ಸಾಗುವುದು, ಮತ್ತೂಂದು ರಾಜಕೀಯ ನಿರ್ಣಯವಾಗಿದ್ದು, ಅದರಂತೆ ಕಾಂಗ್ರೆಸ್ ಪಕ್ಷ ಸಂಘಟನೆ ಮಾಡುವುದಾಗಿದೆ ಎಂದರು.
ಶತಮಾನೋತ್ಸವದ ಅಂಗವಾಗಿ ಜೈ ಬಾಪು- ಜೈ ಭೀಮ್-ಜೈ ಸಂವಿಧಾನ ಅಭಿಯಾನವನ್ನು ಮುಂದಿನ 13 ತಿಂಗಳ ಕಾಲ ನಿರಂತರವಾಗಿ ನಡೆಸಲಾಗುವುದು. ಬೂತ್, ಹೋಬಳಿ, ಬ್ಲಾಕ್, ತಾಲೂಕು, ಜಿಲ್ಲಾಮಟ್ಟದಲ್ಲಿ ಪ್ರತೀ ಹಳ್ಳಿಗಳಲ್ಲಿ ಈ ಆಂದೋಲನ ಸಾಗಲಿದೆ. ಆಂದೋಲನದುದ್ದಕ್ಕೂ ಲೋಕತಂತ್ರಕ್ಕೆ ಉಂಟಾಗಿರುವ ಆತಂಕ, ಗಾಂಧಿ, ಅಂಬೇಡ್ಕರ್ ಮತ್ತು ಸಂವಿಧಾನದ ಮೇಲೆ ನಡೆಯುತ್ತಿರುವ ದಾಳಿಗಳು, ಕೇಂದ್ರ ಸರಕಾರದ ಭ್ರಷ್ಟಾಚಾರ, ಆರ್ಥಿಕ ಅಸಮಾನತೆ, ಅದಾನಿ-ಅಂಬಾನಿ ಸೇರಿ ಉದ್ಯಮಿಗಳ ಪರ ನೀತಿಗಳು ಹೀಗೆ ಎಲ್ಲದರ ಮೇಲೂ ಬೆಳಕು ಚೆಲ್ಲಲಾಗುವುದು ಎಂದರು.
ಇದಲ್ಲದೆ ಎಪ್ರಿಲ್‌ನಲ್ಲಿ ಎಐಸಿಸಿ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಇದರಲ್ಲಿ ಸುಮಾರು 2 ಸಾವಿರ ಜನ ನಾಯಕರು ಭಾಗವಹಿಸಲಿದ್ದಾರೆ. ಅಲ್ಲಿಯೂ ಪಕ್ಷ ಬಲಿಷ್ಠಗೊಳಿಸುವ ಸಂಬಂಧ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಈ ಎರಡೂ ಕಾರ್ಯಕ್ರಮಗಳು ಗುಜರಾತಿನಲ್ಲಿ ನಡೆಯಲಿವೆ ಎಂದು ಮಾಹಿತಿ ನೀಡಿದರು.
ಮಲ್ಲಿಕಾರ್ಜುನ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ, ರಣದೀಪ್ ಸಿಂಗ್ ಸುರ್ಜೇವಾಲ, ಪವನ್ ಖೇರ್, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಬಿ.ಕೆ. ಹರಿಪ್ರಸಾದ್ ಸಹಿತ 132 ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ಗಾಂಧಿ, ಸಿದ್ಧಾಂತದ ಮೇಲೆ ದಾಳಿಗೆ ಖಂಡನೆ
ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಗೈರು ಹಾಜರಾಗಿದ್ದರು. ಈ ಪೈಕಿ ಸೋನಿಯಾ ಗಾಂಧಿ ತಮ್ಮ ಗೈರುಹಾಜರಾತಿ ಬಗ್ಗೆ ವಿಷಾದ ವ್ಯಕ್ತಪಡಿಸಿ ಸಂದೇಶ ಕಳುಹಿಸಿದ್ದರು. ಗಾಂಧಿ ಮತ್ತು ಅವರ ತತ್ವ-ಸಿದ್ಧಾಂತಗಳ ಮೇಲೆ ನಡೆಯುತ್ತಿರುವ ಸಂಸ್ಥೆಗಳ ಮೇಲೆ ನಡೆಯುತ್ತಿರುವ ದಾಳಿ ಖಂಡನೀಯ. ಅದರ ವಿರುದ್ಧ ಹೋರಾಟಕ್ಕೆ ನಾವೆಲ್ಲರೂ ಸಜ್ಜಾಗಬೇಕಿದೆ ಎಂದು ಪಕ್ಷಕ್ಕೆ ಕರೆ ನೀಡಿದ್ದಾರೆ.
3 ವರ್ಷಗಳ ಅಂತರದಲ್ಲಿ ಕಾಂಗ್ರೆಸ್ 3ನೇ ರಾಷ್ಟ್ರೀಯ ಪಾದಯಾತ್ರೆಗೆ ಸಜ್ಜು
ಮೊದಲಿಗೆ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ ಜೋಡೋ ಯಾತ್ರೆ ನಡೆಯಿತು. ಅನಂತರ 2024ರ ಜನವರಿಯಲ್ಲಿ ಜೋಡೋ ನ್ಯಾಯ ಯಾತ್ರೆ ನಡೆಸಲಾಯಿತು. ಈಗ ಅದೇ ಮಾದರಿಯಲ್ಲಿ ಸಂವಿಧಾನ ಬಚಾವೋ ರಾಷ್ಟ್ರೀಯ ಪಾದಯಾತ್ರೆ ಹಮ್ಮಿಕೊಂಡಿದೆ. ಇದು ಸತತ 13 ತಿಂಗಳ ಕಾಲ ನಡೆಯಲಿದೆ. ಆದರೆ ಸ್ಥಳೀಯ ಮುಖಂಡರೇ ಇದರ ನೇತೃತ್ವ ವಹಿಸಿಕೊಳ್ಳಲಿದ್ದಾರೆ.
Advertisement
– ವಿಜಯ ಕುಮಾರ ಚಂದರಗಿ