Advertisement

ಕಾಣದ ಒಗ್ಗಟ್ಟು; ಕನ್ನಡದ ಅಸ್ಮಿತೆಗೆ ಪೆಟ್ಟು

05:56 PM Aug 27, 2021 | Team Udayavani |

ವರದಿ: ಕೇಶವ ಆದಿ

Advertisement

ಬೆಳಗಾವಿ: ಎರಡೂವರೆ ದಶಕದ ನಂತರ ರಾಜಕೀಯ ಪಕ್ಷಗಳಹೆಸರಿನಲ್ಲಿಚುನಾವಣೆಕಾಣುತ್ತಿರುವ ಸ್ಥಳೀಯ ಮಹಾನಗರ ಪಾಲಿಕೆಯಲ್ಲಿ ರಾಷ್ಟ್ರೀಯ ಪಕ್ಷಗಳಿಂದಲೇ ಕನ್ನಡಿಗರಿಗೆ ಹಾಗೂ ಕನ್ನಡ ಹೋರಾಟಗಾರರ ಮುಖ್ಯ ಉದ್ದೇಶಕ್ಕೆ ಮಾರಕವಾಗಲಿದೆಯೇ? ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ನೋಡಿದಾಗ ಈ ಅನುಮಾನ ಪ್ರತಿಯೊಬ್ಬರನ್ನು ಬಲವಾಗಿ ಕಾಡುತ್ತಿದೆ.

ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದ ನಂತರ ಅಭ್ಯರ್ಥಿಗಳ ಪಟ್ಟಿಯಲ್ಲಿ ಮರಾಠಿ ಭಾಷಿಕರಿಗೆ ಪ್ರತಿಶತ 70 ರಿಂದ 80 ಸ್ಥಾನಗಳನ್ನು ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಸಾಲದ್ದಕ್ಕೆ ಈಗ ಕನ್ನಡ ಭಾಷಿಕರ ಜೊತೆಗೆ ಲಿಂಗಾಯತ ಸಮಾಜದ ಸದಸ್ಯರು ಸಹ ಬಿಜೆಪಿ ಮತ್ತು ಕಾಂಗ್ರೆಸ್‌ ವಿರುದ್ಧ ತಿರುಗಿಬಿದ್ದಿದ್ದಾರೆ. ಅದರಲ್ಲೂ ನಮ್ಮದು ಭಿನ್ನವಾದ ಪಕ್ಷ. ಕನ್ನಡ ಹಿತ ಮುಖ್ಯ ಎಂದು ಹೇಳುತ್ತಲೇ ಬಂದಿದ್ದ ಬಿಜೆಪಿ ಮೇಲೆ ಕನ್ನಡ ಹೋರಾಟಗಾರರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನೆ ವಿರುದ್ಧ ಕನ್ನಡದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಬಿಜೆಪಿ ಹಾಗೂ ಕಾಂಗ್ರೆಸ್‌ ಒಗ್ಗಟ್ಟಾಗಬೇಕು. ಆದರೆ ಇಲ್ಲಿಯೂ ರಾಜಕೀಯ ಪೈಪೋಟಿ ಕಂಡರೆ ಮತಗಳ ವಿಭಜನೆಯಾಗಿ ಅದರ ಲಾಭ ನಾಡವಿರೋಧಿಗಳಿಗೆ ಆಗಲಿದೆ ಎಂಬುದು ಕನ್ನಡ ಹೋರಾಟಗಾರರ ಆತಂಕ. ಇದಕ್ಕೆ ರಾಜಕೀಯ ಪಕ್ಷಗಳು ಎಷ್ಟರ ಮಟ್ಟಿಗೆ ಸ್ಪಂದಿಸುತ್ತವೆ ಎಂಬುದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.

ಟಿಕೆಟ್‌ ಹಂಚಿಕೆ ವಿಷಯದಲ್ಲಿ ಶಾಸಕರೊಬ್ಬರ ಏಕಪಕ್ಷೀಯ ನಿರ್ಧಾರ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಇದೇ ಕಾರಣದಿಂದ ಜಿಲ್ಲೆಯ ರಾಜಕಾರಣಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಚುನಾವಣಾ ಕಾರ್ಯದಿಂದ ದೂರ ಉಳಿದಿದ್ದಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ.

Advertisement

ಕನ್ನಡಕ್ಕೆ ಧಕ್ಕೆಯಾಗುವ ಆತಂಕ: ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಟಿಕೆಟ್‌ ಹಂಚಿಕ ಮಾಡಿರುವುದು ಪಕ್ಷಗಳಲ್ಲಿ ಅಸಮಾಧಾನ ಹುಟ್ಟಿಸಿದ್ದು ಒಂದು ಕಡೆಯಾದರೆ ಇನ್ನೊಂದು ಕಡೆ ಕನ್ನಡ ಹೋರಾಟಗಾರರಲ್ಲಿ ಆತಂಕ ಮೂಡಿಸಿದೆ. ಕಾರಣ ಟಿಕೆಟ್‌ ಹಂಚಿಕೆಯಲ್ಲಿ ಕನ್ನಡಿಗರನ್ನು ಕಡೆಗಣಿಸಿರುವದು. ಅದರಲ್ಲೂ ಬಿಜೆಪಿಯಲ್ಲಿ ಬಹುತೇಕ ಮರಾಠಿ ಭಾಷಿಕರಿಗೆ ಮಣೆ ಹಾಕಿರುವುದು ಸಾಕಷ್ಟು ಚರ್ಚೆ ಮತ್ತು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಗಡಿ ಮತ್ತು ಭಾಷೆಯ ಹೆಸರಿನಲ್ಲಿ ಸದಾ ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಐಎಸ್‌) ಮತ್ತು ಶಿವಸೇನೆಯನ್ನು ನಿಯಂತ್ರಣದಲ್ಲಿಡಲು ಮಹಾನಗರಪಾಲಿಕೆಯಲ್ಲಿ ಕನ್ನಡಿಗರ ಅಧಿಪತ್ಯ ಅಗತ್ಯವಾಗಿದೆ. ಆದರೆ ಈಗ ಎರಡು ಪಕ್ಷಗಳ ನಡುವಣ ತುರುಸಿನ ಸ್ಪರ್ಧೆಯಲ್ಲಿ ಗಡಿಯಲ್ಲಿ ಕನ್ನಡದ ಅಸ್ಮಿತೆಗೆ ಧಕ್ಕೆಯಾಗುವ ಹಾಗೂ ಕರ್ನಾಟಕದ ಹಿತ ಬಲಿಯಾಗುವ ಕಳವಳ ಕನ್ನಡಿಗರಲ್ಲಿ ಕಂಡಿದೆ. ಎಂಇಎಸ್‌ ವಿರುದ್ಧ ನಿಲುವು ತಳೆಯಲು ಪಕ್ಷಗಳು ಒಗ್ಗಟ್ಟಾಗಬೇಕಾಗುತ್ತದೆ. ಪೈಪೋಟಿಯ ಕಾರಣಕ್ಕೆ ಮತ ವಿಭಜನೆಯಾದರೆ ಕನ್ನಡ ವಿರೋಧಿ ಎಂಇಎಸ್‌ ಮತ್ತು ಶಿವಸೇನೆಗೆ ಲಾಭವಾಗುವ ಸಾಧ್ಯತೆ ಇದೆ.

ಮುಖ್ಯವಾಗಿ ಎಂಇಎಸ್‌ ಈಗ ಸಾಕಷ್ಟು ದುರ್ಬಲವಾಗಿದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅದಕ್ಕೆ ಶಕ್ತಿ ತುಂಬಲು ಅವಕಾಶ ಕೊಡಬಾರದು. ತಮ್ಮ ರಾಜಕೀಯ ಜಗಳದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಕನ್ನಡವನ್ನು ಬಲಿಕೊಡಬಾರದು. ಪಕ್ಷಗಳ ಚುನಾವಣಾ ಕಾರ್ಯಸೂಚಿಯಲ್ಲಿ ಕನ್ನಡಕ್ಕೆ ಆದ್ಯತೆ ಸಿಗಬೇಕು ಎಂಬುದು ಕನ್ನಡ ಸಂಘಟನೆಗಳ ಆಗ್ರಹ. ಕಾಂಗ್ರೆಸ್‌ ಮತ್ತು ಬಿಜೆಪಿ ರಾಜಕೀಯ ಹೋರಾಟದ ನಡುವೆ ಶಿವಸೇನೆ ಮತ್ತು ಎಂಇಎಸ್‌ ಮಹಾನಗರಪಾಲಿಕೆ ಎದುರು ಕನ್ನಡ ಹೋರಾಟಗಾರರು ಕನ್ನಡ ಬಾವುಟ ಹಾರಿಸಿದ ವಿಷಯವನ್ನು ಚುನಾವಣೆ ಅಸ್ತ್ರವನ್ನಾಗಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್‌ ಒಂದಾಗಿ ಉತ್ತರ ನೀಡಬೇಕು ಎಂಬುದು ಹೋರಾಟಗಾರರ ಒತ್ತಾಸೆ.

Advertisement

Udayavani is now on Telegram. Click here to join our channel and stay updated with the latest news.

Next