Advertisement

ಸಾಹಿತಿಗಳೇ ಅಧಿಕಾರಕ್ಕೆ ಬಂದರೆ ಭಾಷೆ, ಗಡಿ ತಂಟೆಯಿಲ್ಲ : ಡಾ|ಸೋಮಶೇಖರ್

09:02 PM Jan 31, 2021 | Team Udayavani |

ಧಾರವಾಡ : ಭಾಷೆ, ಗಡಿ ತಂಟೆ ದೂರವಾಗಬೇಕಾದರೆ ಸಾಹಿತಿಗಳೇ ಅಧಿಕಾರಕ್ಕೆ ಬರಬೇಕು ಎಂದು ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪಿ.ಸೋಮಶೇಖರ್ ಹೇಳಿದರು.

Advertisement

ನಗರದ ಸಾಧನಕೇರಿಯ ಬೇಂದ್ರೆ ಭವನದಲ್ಲಿ ವರಕವಿ ಡಾ|ದ.ರಾ.ಬೇಂದ್ರೆ 125ನೇ ಜನ್ಮದಿನ ಪ್ರಯುಕ್ತ ಹಿರಿಯ ಸಾಹಿತಿ ಡಾ|ಎಚ್.ಎಸ್.ಶಿವಪ್ರಕಾಶ ಅವರಿಗೆ 1 ಲಕ್ಷ ನಗದು ಒಳಗೊಂಡ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಿದ ಅವರು ಮಾತನಾಡಿದರು.

ಬೇಂದ್ರೆ ಅವರ ಮನೆ ಭಾಷೆ, ಮನೆಯಂಗಳದ ಭಾಷೆಯೆ ಬೇರೆ ಬೇರೆಯಾಗಿತ್ತು. ಬೇಂದ್ರೆ ಮನೆ ಭಾಷೆ ಮರಾಠಿ ಆಗಿದ್ದರೂ ಮನದಂಗಳದ ಭಾಷೆ ಕನ್ನಡವಾಗಿತ್ತು. ಯಾವ ಮರಾಠಿ, ಯಾವ ಕನ್ನಡ. ನಮ್ಮ ನಮ್ಮಲ್ಲೇ ಯಾಕಿಷ್ಟು ಸಂಘರ್ಷ ಎಂಬುದೇ ತಿಳಿಯುತ್ತಿಲ್ಲ. ಇವೆಲ್ಲವೊ ದೂರವಾಗಬೇಕಾದರೆ ಸಾಹಿತಿಗಳೇ ಅಧಿಕಾರಕ್ಕೆ ಬರಬೇಕು. ಆಗ ಮಾತ್ರ ಸಾಮರಸ್ಯ, ಐಕ್ಯತೆ ಬರಲು ಸಾಧ್ಯವಿದೆ ಎಂದರು.

ಇದನ್ನೂ ಓದಿ:ಫೆಬ್ರವರಿ 1ರಿಂದ ಸಂಪೂರ್ಣವಾಗಿ ತೆರೆಯಲಿವೆ ಚಿತ್ರಮಂದಿರಗಳು

ಗಡಿ ವಾಜ್ಯ ತೀರ್ಮಾನ ಮಾಡಲು ವಿಶೇಷ ಆಯೋಗವೇ ಇದ್ದರೂ ಈಗಲೂ ಅನಗತ್ಯವಾಗಿ ಗಡಿ ಜಗಳ ಮಾಡುತ್ತಿದ್ದೇವೆ. ಭಾಷಾವಾರು ಪ್ರಾಂತ್ಯ ರಚನೆ ಮೇಲೂ ನಾವು ಭಾಷೆಗಳ ಮೇಲೆ ಸಂಘರ್ಷ ಮಾಡುತ್ತಿದ್ದೇವೆ. ಭಾಷೆ, ಭೌಗೋಳಿಕ ಹೆಸರಿನಲ್ಲಿ ಇನ್ನೂ ತಗಾದೆಯಲ್ಲೇ ನಾವು ಇದ್ದೇವೆ. ಹೀಗಾಗಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಎರಡೂ ಕಡೆ ಸಾಹಿತಿಗಳೇ ಅಧಿಕಾರಕ್ಕೆ ಬಂದು ಬಿಟ್ಟರೇ ಆಗ ಈ ಭಾಷೆ, ಗಡಿ ತಂಟೆಯಾವುದೂ ಇಲ್ಲ. ಅದು ಬರುವುದೂ ಇಲ್ಲ. ಎಲ್ಲ ಕಡೆಯೂ ಸಾಮರಸ್ಯವೇ ಇರುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.

Advertisement

ಪ್ರಶಸ್ತಿ ಸ್ವೀಕರಿಸಿದ ಡಾ|ಎಚ್.ಎಸ್. ಶಿವಪ್ರಕಾಶ ಮಾತನಾಡಿ, ನನ್ನ ಕಾವ್ಯ ಗುರುಗಳಲ್ಲಿ ಒಬ್ಬರಾದ ಬೇಂದ್ರೆ ಅವರ ಹೆಸರಿನ ಪ್ರಶಸ್ತಿ ಪಡೆದಿರುವುದು ಖುಷಿಯಾಗಿದೆ. ಬೇಂದ್ರೆಯವರಲ್ಲಿ ವಾಕ್ ವೈಭವ ಇತ್ತು. ಅದೇ ರೀತಿ ಕುವೆಂಪು ಅವರಲ್ಲಿ ಅಕ್ಷರ ವೈಭವ ಇತ್ತು. ಇವೆರಡು ಒಂದಾದರೆ ಮಹತ್ತರ ಸಾಹಿತ್ಯ ಹೊರ ಬರುತ್ತದೆ. ಬೇಂದ್ರೆ ಮತ್ತು ಕುವೆಂಪು ಅವರು ದೂರದ ಊರಿನವರು. ಆದರೂ ಅವರಿಂದ ವಿಶಿಷ್ಟವಾದ ಸಾಹಿತ್ಯ ರಚನೆಯಾಗಿದೆ. ಹಿರಿಯ ಸಾಹಿತ್ಯಗಳ ಪ್ರೇರಣೆ ಪಡೆದು ಯುವ ಸಾಹಿತಿಗಳು ಸಾಹಿತ್ಯ ರಚನೆ ಮಾಡುತ್ತಿರುವುದು ವಿಶೇಷ. ಅದೂ ಇತ್ತೀಚಿನ ನೆಟ್‌ವರ್ಕಿಂಗ್ ಹಾಗೂ ಮಾರ್ಕೆಟ್ ಸಂಸ್ಕೃತಿ ಎನ್ನುವ ಕಾಲದಲ್ಲೂ ಯುವಕರು ಸಾಹಿತ್ಯ ರಚನೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದರು.

ಇದನ್ನೂ ಓದಿ:ಪ್ರವಾಸಿ ತಾಣ ತೊಣ್ಣೂರು ಕೆರೆಯಲ್ಲಿ ಮುಳುಗಿ ಯುವಕ ಸಾವು

ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ, ಜಿಲ್ಲಾಽಕಾರಿ ನಿತೇಶ ಪಾಟೀಲ ಮಾತನಾಡಿದರು. ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಾ|ಡಿ.ಎಂ. ಹಿರೇಮಠ, ಡಾ|ಸಿದ್ದಲಿಂಗ ಪಟ್ಟಣಶೆಟ್ಟಿ,ಪ್ರೊ| ದುಷ್ಯಂತ ನಾಡಗೌಡ, ರಾಘವೇಂದ್ರ ಪಾಟೀಲ, ಮಲ್ಲಿಕಾರ್ಜುನ ಹಿರೇಮಠ, ಶ್ರೀನಿವಾಸ ವಾಡಪ್ಪಿ, ಮಂಜುಳಾ ಯಲಿಗಾರ ಇದ್ದರು. ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಡಾ|ಗೋಪಾಲಕೃಷ್ಣ ಬಿ. ಸ್ವಾಗತಿಸಿದರು. ಮಾಯಾ ರಾಮನ್ ನಿರೂಪಿಸಿದರು. ಪ್ರಕಾಶ ಬಾಳಿಕಾಯಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next