ಬೆಳಗಾವಿ: ಕಳೆದ ಎರಡು ದಿನಗಳಿಂದ ಈ ಭಾಗದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಮಾರೀಹಾಳ ಸಮೀಪದ ಹಳ್ಳ ತುಂಬಿ ಹರಿಯುತ್ತಿದೆ.
ಹಳ್ಳದ ನೀರಿನ ರಭಸಕ್ಕೆ ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿ ಕುಸಿದು ಬಿದ್ದಿದೆ.
ಭಾರೀ ಮಳೆಯಿಂದಾಗಿ ಈ ಹಳ್ಳಕ್ಕೆ ಅಪಾಎ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ ಸೇತುವೆ ಕಡೆಗೆ ಹೋಗುವ ನೀರು ರಸ್ತೆಗೆ ಅಪ್ಪಳಿಸಿದ ರಸ್ತೆ ಕುಸಿದಿದೆ.
ಇದೀಗ ಈ ಭಾಗದಲ್ಲಿ ಅರ್ಧ ರಸ್ತೆಯನ್ನೇ ಬಂದ್ ಮಾಡಲಾಗಿದೆ.
ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿಯಲ್ಲಿರುವ ಮಾರೀಹಾಳ-ಮೋದಗಾ ಸೇತುವೆ ಬಳಿ ಈ ಹಳ್ಳದ ನೀರು ಹರಿಯುತ್ತದೆ. ರಸ್ತೆ ಕುಸಿದಿದ್ದರಿಂದ ಮಾರೀಹಾಳ ಪೊಲೀಸರು ಬ್ಯಾರಿಕೇಡ್ ಹಾಕಿ ಅರ್ಧ ರಸ್ತೆಯನ್ನು ಬಂದ್ ಮಾಡಿದ್ದಾರೆ.
ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಸ್ತೆಗೆ ಅಪ್ಪಳಿಸುತ್ತಿರುವ ನೀರಿನ ಹರಿವು ಕಡಿಮೆ ಮಾಡಲು ಜೆಸಿಬಿಯಿಂದ ನೀರಿನ ಹರಿಯುವಿಕೆಯನ್ನು ಬದಲಾಯಿಸುವ ಕಾರ್ಯ ನಡೆಸಿದ್ದಾರೆ.