ಬೆಳಗಾವಿ: ರಾಜಕೀಯ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಇದುವರೆಗೆ ಹಿನ್ನಡೆ ಎಂಬುದನ್ನೇ ಕಾಣದ ಜಾರಕಿಹೊಳಿ ಕುಟುಂಬಕ್ಕೆ ಲೋಕಸಭೆ ಉಪಚುನಾವಣೆಯ ಮೂಲಕ ಮೊದಲ ಸೋಲಿನ ಆಘಾತ ಎದುರಾಗಿದೆ. ಅಷ್ಟೇ ಅಲ್ಲ, ರಾಷ್ಟ್ರ ರಾಜಕಾರಣಕ್ಕೆ ಪ್ರವೇಶ ಮಾಡಬೇಕು ಎಂಬ ದೂರದೃಷ್ಟಿಗೆ ಸಹ ಹಿನ್ನಡೆಯಾಗಿದೆ. ರಾಜಕೀಯದಲ್ಲಿ ಎಲ್ಲ ರೀತಿಯ ಅನುಭವ ಉಂಡಿರುವ ಹಾಗೂ ಒಳಸುಳಿಗಳನ್ನು ಚೆನ್ನಾಗಿ ಅರಿತುಕೊಂಡಿರುವ ಸತೀಶ ಜಾರಕಿಹೊಳಿ ಬಹುಶಃ ಲೋಕಸಭೆ ಉಪಚುನಾವಣೆಯಲ್ಲಿ ಸೋಲಿನ ಆಘಾತ ನಿರೀಕ್ಷೆ ಮಾಡಿರಲಿಲ್ಲ. ತಮ್ಮ 2 ದಶಕಗಳಿಗೂ ಹೆಚ್ಚು ಕಾಲದ ರಾಜಕೀಯ ಜೀವನದಲ್ಲಿ ಸತೀಶ ಅನುಭವಿಸಿದ ಮೊದಲ ಸೋಲು ಇದು.
ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಗೋಕಾಕ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಹಾಗೂ ಲಖನ್ ಜಾರಕಿಹೊಳಿ ಪ್ರತಿಸ್ಪರ್ಧಿಯಾಗಿದ್ದರೂ ಈ ಕುಟುಂಬಕ್ಕೆ ಶಾಸಕ ಸ್ಥಾನ ಲಭಿಸಿತ್ತು. ಈ ಚುನಾವಣೆಯಲ್ಲಿ ಮಂಗಲಾ ಅಂಗಡಿ ಗೆಲುವಿಗಿಂತ ಹೆಚ್ಚು ಸುದ್ದಿಯಾಗಿದ್ದು ಸತೀಶ ಜಾರಕಿಹೊಳಿ ಸೋಲು. ಅವರ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಈಗಲೂ ಸತೀಶ ಅವರ ಸೋಲು ನಂಬಲಾಗುತ್ತಿಲ್ಲ. ಅತಿಯಾದ ಅತ್ಮವಿಶ್ವಾಸ ಮುಳುವಾಯಿತೇ ಅಥವಾ ನಮ್ಮವರೇ ನಮಗೆ ಕೈಕೊಟ್ಟರೇ ಎಂಬ ಅನುಮಾನ ಅವರ ಅಪ್ತ ವಲಯವನ್ನು ಕಾಡುತ್ತಿದೆ. ಅಧಿಕಾರದ ವಿಷಯದಲ್ಲಿ ಇದು ಜಾರಕಿಹೊಳಿ ಕುಟುಂಬಕ್ಕೆ ದೊಡ್ಡ ಹಿನ್ನಡೆ ಏನಲ್ಲ. ಅದರ ಬಗ್ಗೆ ಅವರೂ ತಲೆಕೆಡಿಸಿ ಕೊಂಡಿಯೂ ಇಲ್ಲ. ಆದರೆ ಸೋಲು ಎಂಬುದು ಅವರಿಗೆ ಸಹಿಸಲಾಗದ ಸಂಗತಿ.
ಸರಕಾರ ಮತ್ತು ಪಕ್ಷಗಳ ಮೇಲೆಯೇ ಅಧಿಕಾರಯುತ ವಾಗಿ ಸವಾರಿ ಮಾಡುವ ಜಾರಕಿಹೊಳಿ ಸಹೋದರರಿಗೆ ಸೋಲು ಎಂಬ ಕಹಿಯನ್ನು ಅರಗಿಸಿಕೊಳ್ಳಲು ಆಗದು. ಆದರೆ ಈಗ ಬಂದಿರುವ ಮೊದಲ ಸೋಲಿನ ಕಹಿ ರಾಜಕೀಯವಾಗಿ ಬಹಳ ಆಲೋಚಿಸಿ ಎಚ್ಚರಿಕೆಯ ಹೆಜ್ಜೆ ಇಡುವಂತೆ ಮಾಡಿದೆ. ಸತೀಶ ಜಾರಕಿಹೊಳಿ ಅವರ ಸೋಲಿಗೆ ಕಾಂಗ್ರೆಸ್ ಪಕ್ಷದಲ್ಲಿ ಸಂತಸ ಪಟ್ಟವರೂ ಇದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇದೇ ರೀತಿ ಸಾಕಷ್ಟು ಅತಂಕ ಎದುರಿಸಿ ಕೊನೆಗೆ ಅಲ್ಪಮತಗಳ ಅಂತರದಿಂದ ಗೆದ್ದಿದ್ದ ಸತೀಶ ನಂತರ ಎಚ್ಚರಿಕೆಯ ಮಾತುಗಳನ್ನು ಆಡಿದ್ದರು.
ಈಗ ಮತ್ತೂಮ್ಮೆ ಈ ಮಾತುಗಳನ್ನು ನೆನಪಿಸಿಕೊಳ್ಳುವ ಪ್ರಸಂಗ ಬಂದಿದೆ. ಚುನಾವಣೆಯ ಫಲಿತಾಂಶ ನೋಡಿದರೆ ಸತೀಶ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್‌ದಲ್ಲಿ ಕೆಲವರು ಜಾತಿ ರಾಜಕಾರಣ ಮಾಡಿರುವ ಅನುಮಾನ ಮೂಡಿದೆ. ಪಕ್ಷದ ಕೆಲ ನಾಯಕರು ಸತೀಶ ಅವರನ್ನು ಸೋಲಿಸಲೇಬೇಕು ಎಂಬ ಉದ್ದೇಶದಿಂದ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಲಿಲ್ಲ ಎಂಬ ಮಾತುಗಳೂ ಕೇಳಿಬಂದಿವೆ. ಇದಕ್ಕೆಲ್ಲ ಸತೀಶ ಜಾರಕಿಹೊಳಿ ಅವರೇ ಉತ್ತರ ನೀಡಬೇಕು. ಆದರೆ ಜಾತಿ ರಾಜಕಾರಣ ಇಲ್ಲಿ ಬಹಳ ಕೆಲಸ ಮಾಡಿದ್ದಂತೂ ಅಲ್ಲಗೆಳೆಯುವಂತಿಲ್ಲ. ಸತೀಶ ಅವರ ಹಿನ್ನಡೆಗೆ ಮುಖ್ಯ ಕಾರಣವಾಗಿದ್ದು ಗೋಕಾಕ ಕ್ಷೇತ್ರ. ಇಲ್ಲಿ ಸತೀಶ ಅವರ ಲೆಕ್ಕಾಚಾರ ಸರಿಯಾಗಿ ಕೆಲಸ ಮಾಡಲಿಲ್ಲ. ತಮ್ಮ ಕುಟುಂಬದವರು ತಮ್ಮ ಪರವಾಗಿ ಬರುತ್ತಾರೆ ಎಂಬ ಅವರ ಊಹೆ ಸುಳ್ಳಾಯಿತು.
ಮೇಲಾಗಿ ರಮೇಶ ಜಾರಕಿಹೊಳಿ ಅವರಿಗೆ ಇದು ಅಳಿವು-ಉಳಿವಿನ ಪ್ರಶ್ನೆಯಾಗಿದ್ದರಿಂದ ಅವರು ಅನಿವಾರ್ಯವಾಗಿ ಬಿಜೆಪಿ ಪರ ಕೆಲಸ ಮಾಡಲೇಬೇಕಾಯಿತು. ಮೇಲಾಗಿ ಕ್ಷೇತ್ರದ ಬಹುತೇಕ ಲಿಂಗಾಯತ ಮತಗಳು ಬಿಜೆಪಿಗೆ ಹೋದವು. ಇದು ಸತೀಶ ಅವರ ಹಿನ್ನಡೆಗೆ ಮುಖ್ಯ ಕಾರಣ. ಇನ್ನು ನನಗೆ ಲೋಕಸಭೆಯ ಬಗ್ಗೆ ಆಸಕ್ತಿ ಇಲ್ಲ ಎಂದು ಹೇಳುತ್ತಲೇ ಒಲ್ಲದ ಮನಸ್ಸಿನಿಂದ ಲೋಕಸಭೆ ಆಖಾಡಕ್ಕೆ ಪ್ರವೇಶ ಮಾಡಿದ ಸತೀಶ ಜಾರಕಿಹೊಳಿ ದೂರದೃಷ್ಟಿಯ ಲೆಕ್ಕಾಚಾರ ಮಾಡಿಯೇ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಈ ಲೆಕ್ಕಾಚಾರಕ್ಕೆ ಜಾರಕಿಹೊಳಿ ಸಹೋದರರ ಬೆಂಬಲ ಸಹ ಇತ್ತು. ಈ ಲೋಕಸಭೆ ಉಪಚುನಾವಣೆಯ ಮೂಲಕ ರಾಷ್ಟ್ರ ರಾಜಕಾರಣ ಪ್ರವೇಶ ಮಾಡುವದು ಸಹೋದರರ ಆಲೋಚನೆಯಾಗಿತ್ತು.
ಸತೀಶ ಜಾರಕಿಹೊಳಿ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳಿಸಿ ಅಲ್ಲಿಂದ ರಾಜ್ಯ ರಾಜಕಾರಣದ ಮೇಲೆ ತಮ್ಮ ಪ್ರಭಾವ ಬೀರುವದು. ಜಿಲ್ಲಾ ರಾಜಕಾರಣದ ಮೇಲೆ ಮತ್ತಷ್ಟು ಹಿಡಿತ ಸಾಧಿಸುವುದು ಹಾಗೂ ಯಮಕನಮರಡಿ ಕ್ಷೇತ್ರಕ್ಕೆ ತಮ್ಮ ಮಕ್ಕಳು ಇಲ್ಲವೇ ತಮ್ಮ ಲಖನ್ ಅವರನ್ನು ಕಳಿಸುವದು ಸಹೋದರರ ಆಲೋಚನೆಯಾಗಿತ್ತು. ಆದರೆ ಈ ಎಲ್ಲ ಲೆಕ್ಕಾಚಾರಗಳಿಗೆ ಸದ್ಯ ವಿರಾಮ ಹಾಕಬೇಕಾಗಿದೆ ಎಂಬುದು ಅವರ ಬೆಂಬಲಿಗರ ಮಾತು.