ಮಂಗಳೂರು: ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಕಾಸರಗೋಡಿನ ಬೇಕಲ ಬೀಚ್ ಪಾರ್ಕ್‌ನಲ್ಲಿ ಡಿ. 24ರಿಂದ ಜ. 2ರ ವರೆಗೆ ಅಂತಾರಾಷ್ಟ್ರೀಯ ಬೀಚ್ ಉತ್ಸವ ಆಯೋಜಿಸಲಾಗಿದೆ ಎಂದು ಉದುಮ ಶಾಸಕ ಸಿ.ಎಚ್. ಕುಂಞಂಬು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬೇಕಲದ ಇತಿಹಾಸವನ್ನು ತಿಳಿಸುವುದರೊಂದಿಗೆ ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಈ ಉತ್ಸವ ಆಯೋಜಿಸಲಾಗಿದೆ. ಪ್ರತೀ ದಿನ ಸುಮಾರು 25 ಸಾವಿರದಂತೆ 4 ಲಕ್ಷ ಪ್ರವಾಸಿಗರು ಭಾಗವಹಿಸುವ ನಿರೀಕ್ಷೆ ಇದೆ. ಡಿ. 24ರಂದು ಬೆಳಗ್ಗೆ 10 ಗಂಟೆಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉತ್ಸವಕ್ಕೆ ಚಾಲನೆ ನೀಡುವರು. ಬಂದರು ಸಚಿವ ಅಹಮ್ಮದ್ ದೇವರ್ ಕೋವಿಲ್ ಅವರು “ರೋಬೋಟಿಕ್ ಶೋ’ ಮತ್ತು ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ “ಫ್ಲವರ್ ಶೋ’ಉದ್ಘಾಟಿಸುವರು ಎಂದರು.
ಸಂಸ್ಕೃತಿಯ ಪರಿಚಯ, ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಕೋಮು ಸೌಹಾರ್ದದ ನೆಲೆಯಲ್ಲಿ ಈ ಉತ್ಸವ ಆಯೋಜಿಸಲಾಗಿದೆ. ಪ್ರತೀ ದಿನ 3 ವೇದಿಕೆಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರಸಿದ್ಧ ಕಲಾವಿದರು ಭಾಗವಹಿಸುವರು. ರೋಬೊಟಿಕ್ ಶೋ, ಸ್ಪೀಡ್ ಬೋಟ್, ಫ್ಲೋಟಿಂಗ್ ಬ್ರಿಜ್, ಸಾಹಸ ಕ್ರೀಡೆಗಳು, ಜಾಯಿಂಟ್ ವೀಲ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜೋಡಿಸಲಾಗಿದೆ ಎಂದವರು ತಿಳಿಸಿದರು.
ಬಿಆರ್‌ಡಿಸಿ ಎಂಡಿ ಷಿಜಿನ್ ಪಿ., ಕಾಸರಗೋಡು ತುಳು ಅಕಾಡೆಮಿ ಅಧ್ಯಕ್ಷ ಜಯಾನಂದ, ಪ್ರಮುಖರಾದ ಉಮೇಶ್ ಸಾಲ್ಯಾನ್, ಯು.ಎಸ್.ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿದ್ದರು.