ಬೆಂಗಳೂರು: ಮಲ್ಲತ್ತಹಳ್ಳಿಯ ಬಳಿಯ ಬಾಲಾಜಿ ಲೇಔಟ್‌ನ ಶೆಡ್‌ವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್‌ವೊಬ್ಬರ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮುತ್ತುರಾಜ್ (30) ಮೃತ ಭದ್ರತಾ ಸಿಬ್ಬಂದಿ. ಮದ್ಯ ಸೇವಿಸಲು ಪತ್ನಿ ಹಣ ನೀಡಲು ನಿರಾಕರಿಸಿದರು ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ, ನಿಖರ ಕಾರಣ ತಿಳಿದು ಬಂದಿಲ್ಲ.
ಮೈಸೂರು ಮೂಲದ ಮುತ್ತುರಾಜ್ ಮತ್ತು ಲಕ್ಷ್ಮಿ ಎಂಬುವವರನ್ನು 2 ವರ್ಷಗಳ ಹಿಂದೆ ಮದುವೆಯಾಗಿದ್ದರು. ಮಂಗ ಳವಾರ ರಾತ್ರಿ ಮುತ್ತರಾಜ್ ಮದ್ಯ ಸೇವಿಸಲು ಪತ್ನಿ ಬಳಿ ಹಣ ಕೇಳಿದ್ದ. ಪತ್ನಿ ಲಕ್ಷ್ಮಿ ಹಣ ನೀಡಲು ನಿರಾಕರಿಸಿದ್ದರು. ಇದಕ್ಕೆ ಕೋಪಗೊಂಡ ಮುತ್ತುರಾಜ್ ಹಣ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ.
ನಿತ್ಯ ಇದೇ ರೀತಿ ಹೇಳುತ್ತಿದ್ದಿರಿ ಏನಾದರೂ ಮಾಡಿಕೊಳ್ಳಿ ಎಂದು ಪತ್ನಿ ನಿರ್ಲಕ್ಷಿಸಿದ್ದರು. ಇದರಿಂದ ಬೇಸತ್ತ ಸೆಕ್ಯೂರಿಟಿ ಗಾರ್ಡ್ ಇತರೆ ಭದ್ರತಾ ಸಿಬ್ಬಂದಿ ವಾಸಿಸುವ ಶೆಡ್‌ಗೆ ತೆರಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಬುಧವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮದ್ಯಪಾನ ಮಾಡಲು ಹಣ ನೀಡುವಂತೆ ಪ್ರತಿ ನಿತ್ಯ ಪತಿ ಜಗಳ ಮಾಡುತ್ತಿದ್ದರು. ದುಡಿದ ಹಣವನ್ನು ಕುಟುಂಬ ನಿರ್ವಹಣೆಗೆ ನೀಡುತ್ತಿರಲಿಲ್ಲ. ಹೀಗಾಗಿ, ನಾನೇ ಕೂಲಿ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದೆ ಎಂದು ಲಕ್ಷ್ಮೀ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪೋಷಕರಿಂದ ದೂರು: ಒಂದು ತಿಂಗಳ ಹಿಂದೆ ಮೃತನ ಪತ್ನಿ ಲಕ್ಷ್ಮಿ ಪತಿ ನಿತ್ಯ ಮದ್ಯ ಸೇವಿಸಿ ಹಲ್ಲೆ, ಜಗಳ ಕಿರುಕುಳು ನೀಡುತ್ತಿದ್ದಾರೆ ಎಂದು ಆರೋಪಿಸಿ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮತ್ತುರಾಜ್ ಮತ್ತು ಲಕ್ಷ್ಮಿಯನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು. ಈ ನಡುವೆ ಮಂಗಳವಾರ ಮುತ್ತುರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ, ಈ ಬಗ್ಗೆ ಮತ್ತುರಾಜ್‌ನ ಪೋಷಕರು ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ.