Advertisement

ಬದುಕು ಸುಂದರವಾಗಿಸುವತ್ತ ಇರಲಿ ಎಲ್ಲರ ಚಿತ್ತ

01:36 PM Apr 01, 2019 | Naveen |

ಹಂಸಕ್ಷೀರನ್ಯಾಯ ಎಂಬುದು ಬದುಕಿನಲ್ಲಿ ಇರಬೇಕಾದ ಉತ್ತಮ ಗುಣಗಳಲ್ಲೊಂದು. ಹಂಸವು ನೀರು ಬೆರೆಸಿದ ಹಾಲಿನಲ್ಲಿ ಹಾಲನ್ನಷ್ಟೇ ಸ್ವೀಕರಿಸಿ ನೀರನ್ನು ಬಿಟ್ಟುಬಿಡುವಂತೆ ಜೀವನದಲ್ಲಿ ನಾವು ಒಳಿತು-ಕೆಡುಕುಗಳ ನಡುವೆ ಕೇವಲ ಒಳಿತನ್ನೇ ಸ್ವೀಕರಿಸಬೇಕು ಎನ್ನುವುದು ಇದರ ತಾತ್ಪರ್ಯ. ಇನ್ನೊಂದು ರೀತಿಯ ನ್ಯಾಯವಿದೆ. ಅದು ‘ಅಪಸಾರಿತಾಗ್ನಿ ಭೂತಲನ್ಯಾಯ.

Advertisement

ಉತ್ತಮ ವ್ಯಕ್ತಿ ತಾನು ಕೆಲಸ ಮಾಡುತ್ತಿದ್ದ ಸ್ಥಳವನ್ನು ಬಿಟ್ಟು ಹೋದ ಅನಂತರವೂ ಆ ವ್ಯಕ್ತಿಯ ಆದರ್ಶ, ಗುಣಗಳ ಪ್ರಭಾವ ಆ ಸ್ಥಳದಲ್ಲಿ ಉಳಿದರೆ ಅದು ಅಪಸಾರಿತಾಗ್ನಿ ಭೂತಲನ್ಯಾಯ ಎನಿಸುವುದಂತೆ.

ಬದುಕಿನಲ್ಲಿ ಸಾಕಷ್ಟು ಬಾರಿ ಅಂಥಹ ಸನ್ನಿವೇಶಗಳಿಗೆ ನಾವು ಸಾಕ್ಷಿಗಳಾಗುತ್ತೇವೆ. ಅಂಥ ಸಂದರ್ಭಗಳಲ್ಲಿ ಆ ವ್ಯಕ್ತಿಗಳ ಆದರ್ಶದ ಪ್ರಭಾವ ಇನ್ನೂ ಅಲ್ಲಿ ಇರುತ್ತದೆ. ಅದು
ಅಲ್ಲಿನ ಇತರರಲ್ಲಿ ಪ್ರತಿಫ‌ಲಿಸ ಬಹುದು. ಆ ಆದರ್ಶದ ಫ‌ಲವಾಗಿಯೇ
ಸಂಸ್ಥೆಯ ಚಟುವಟಿಕೆಗಳು ಎಂದಿನಂತೆ ನಡೆಯಬಹುದು. ಕೆಲವು ಕಾಲದವರೆಗೆ ಇದು ಮುಂದುವರಿಯಬಹುದು.

ಎಲ್ಲ ಗುಣಗಳೂ ಪ್ರಭಾವಿಸುವುದಿಲ್ಲ
ಎಲ್ಲ ಗುಣಗಳೂ ಎಲ್ಲರನ್ನು ಪ್ರಭಾವಿಸುವುದಿಲ್ಲ. ಇದಕ್ಕೆ ಪುರಾಣದ ಒಂದು ಪ್ರಸಂಗವನ್ನು ಇಲ್ಲಿ ಉಲ್ಲೇಖಿಸಬಹುದು. ಯಾಗಗಳ ಹವಿಸ್ಸನ್ನು ಸ್ವೀಕರಿಸಲು ತ್ರಿಮೂರ್ತಿಗಳಲ್ಲಿ ಯಾರು ಆದ್ಯರು ಎಂಬುದನ್ನು ಪರೀಕ್ಷಿಸಲು ದೇವಸಭೆಯಲ್ಲಿ ಭೃಗು ಮಹರ್ಷಿಗಳು ನಿಯೋಜಿತರಾಗುತ್ತಾರೆ. ಅವರು ಸತ್ಯಲೋಕಕ್ಕೆ ಹೋದಾಗ ಭೃಗುವಿನಲ್ಲಿ ಬ್ರಹ್ಮನ ರಜೋಗುಣದ ಆವಿರ್ಭಾವವಾಯಿತು. ಕೈಲಾಸಕ್ಕೆ ಹೋದಾಗ ತಮೋಗುಣ ಪ್ರಭಾವಿಸಿತಂತೆ. ಆದರೆ ವೈಕುಂಠಕ್ಕೆ ಬಂದಾಗ ವಿಷ್ಣುವಿನ ಸತ್ವ ಗುಣ ಪ್ರಭಾವಿಸಲಿಲ್ಲ. ವಿಷ್ಣುವಿನ ಒಳಗಾಗುವುದು ಅಥವಾ ಆತನ ಪ್ರಭಾವಲಯಕ್ಕೆ ಒಳಗಾಗುವುದು ಅಷ್ಟೊಂದು ಸುಲಭವಲ್ಲ ಎಂಬುದು ಭೃಗುವಿಗೆ ಅರ್ಥವಾಯಿತು. ಪರೀಕ್ಷಿಸಲು ಬಂದ ಭೃಗುವನ್ನೇ ಪರೀಕ್ಷಿಸಿ ಅರಿವು ಮೂಡಿಸಿ ಕಳುಹಿಸಿದ ವಿಷ್ಣು.

ಇಲ್ಲಿ ನಾವು ಗುಣಗಳು ಹೇಗೆ ಪ್ರಭಾವಿಸುತ್ತವೆ ಎಂಬುದರ ಕುರಿತಂತೆ ಆಲೋಚಿಸಬೇಕಾಗುತ್ತದೆ. ರಜೋಗುಣ, ತಮೋಗುಣಗಳು ಭೃಗುವನ್ನು ಪ್ರಭಾವಿಸಿದರೆ, ಸತ್ವ ಗುಣ ಏಕೆ ಪ್ರಭಾವಿಸಲಿಲ್ಲ ಎಂಬುದು ಜಿಜ್ಞಾಸೆ. ಲೋಕ ಲೋಕಗಳ ನಿಯಮಗಳೇನಿವೆಯೋ. ಆದರೆ ನಮ್ಮ ಜೀವನದಲ್ಲೂ ಹಾಗೆಯೇ. ಕೆಲವೊಂದು ಗುಣಗಳು ಬೇಗನೇ ಪ್ರಭಾವಿಸಿಬಿಡುತ್ತವೆ. ಕೆಲವೊಂದು ನಮ್ಮ ಸಮೀಪವೂ ಸುಳಿಯುವುದಿಲ್ಲ. ಏನೇ ಇರಲಿ, ಹಂಸಕ್ಷೀರನ್ಯಾಯ, ಅಪಸಾರಿತಾಗ್ನಿ ಭೂತಲನ್ಯಾಯಾದಿಗಳನ್ನು ಮಾದರಿಯಾಗಿರಿಸಿ ನಮ್ಮ ಬದುಕನ್ನು ಸುಂದರವಾಗಿಸುವತ್ತ ನಮ್ಮ ಚಿತ್ತ ಇರುವುದು ಅಗತ್ಯವಾಗಿದೆ.

Advertisement

ಕುದ್ಯಾಡಿ ಸಂದೇಶ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next