Advertisement

ಚಂದ್ರಯಾನ-3ರ ಯಶಸ್ಸಿನ ಹಿಂದೆ ಬೆಳಗಾವಿ!ಯುವ ವಿಜ್ಞಾನಿ ಪ್ರಕಾಶ ಪೇಡನೇಕರ

06:35 PM Jul 15, 2023 | Team Udayavani |

ಬೆಳಗಾವಿ: ತಮಿಳುನಾಡಿನ ಶ್ರೀಹರಿಕೋಟಾದಿಂದ ಚಂದ್ರಯಾನ-3 ಉಪಗ್ರಹ ಉಡಾವಣೆಯಾಗಿ ಇಡೀ ವಿಶ್ವವೇ ಭಾರತದೆಡೆಗೆ ತಿರುಗಿ ನೋಡುತ್ತಿರುವ ಈ ಯಶಸ್ಸಿನ ಹಿಂದೆ ಬೆಳಗಾವಿಯೂ ಇದೆ ಎಂಬುದು ಹೆಮ್ಮೆಯ ವಿಷಯವಾಗಿದ್ದು, ಉಪಗ್ರಹಕ್ಕಾಗಿ ಬೇಕಾದ ಉಪಕರಣಗಳು ಬೆಳಗಾವಿಯಿಂದ ಪೂರೈಕೆಯಾದರೆ, ಅನೇಕ ವಿಜ್ಞಾನಿಗಳ ಜತೆಗೆ ಖಾನಾಪುರದ ಯುವ ವಿಜ್ಞಾನಿಯೂ ಇರುವುದು ಹೆಮ್ಮೆಯ ಸಂಗತಿ. ಚಂದ್ರಯಾನ- 3 ಉಪಗ್ರಹ ಉಡಾವಣೆ ಹಿಂದೆ ಅಸಂಖ್ಯಾತ ವಿಜ್ಞಾನಿಗಳು ಹಾಗೂ ವಿವಿಧ ಅತ್ಯಾಧುನಿಕ ಎಲೆಕ್ಟ್ರಾನಿಕ್‌ ಉಪಕರಣಗಳು ಅಡಗಿವೆ.

Advertisement

ಇದರಲ್ಲಿ ಬೆಳಗಾವಿಯ ಸರ್ವೋ ಕಂಟ್ರೋಲ್ಸ್‌ ಏರೋಸ್ಪೇಸ್‌ ಮತ್ತು ಟೆಕ್ನಾಲಾಜಿ ಪ್ರೈವೆಟ್‌ ಲಿಮಿಟೆಡ್‌ ಕಂಪನಿ ತಯಾರಿಸಿದ ವಿವಿಧ ಎಲೆಕ್ಟ್ರಾನಿಕ್‌ ಉಪಕರಣಗಳು, ಬಿಡಿ ಭಾಗಗಳನ್ನು ಬಳಸಲಾಗಿದೆ. ಜತೆಗೆ ಖಾನಾಪುರ ತಾಲೂಕಿನ ಕಾಪೋಲಿ ಗ್ರಾಪಂ ವ್ಯಾಪ್ತಿಯ ಅನಗಡಿ ಗ್ರಾಮದ ಯುವ ವಿಜ್ಞಾನಿಕ ಪ್ರಕಾಶ ನಾರಾಯಣ ಪೇಡನೇಕರ ಎಂಬವರ ಶ್ರಮವೂ ಇದೆ.

ಬೆಳಗಾವಿಯ ಉದ್ಯಮಬಾಗ ಕೈಗಾರಿಕಾ ಪ್ರದೇಶದಲ್ಲಿ ಸರ್ವೋ ಕಂಟ್ರೋಲ್ಸ್‌ ಏರೋಸ್ಪೇಸ್‌ ಮತ್ತು ಟೆಕ್ನಾಲಾಜಿ ಪ್ರೈವೆಟ್‌
ಲಿಮಿಟೆಡ್‌ ಎಂಬ ಕಂಪನಿಯಲ್ಲಿ ತಯಾರಿಸಿದ ಬಿಡಿ ಭಾಗಗಳನ್ನು ಉಪ್ರಗಹದಲ್ಲಿ ಬಳಸಲಾಗಿದೆ. ಉದ್ಯಮಿ ದೀಪಕ ಧಡೋತಿ
ಮಾಲೀಕತ್ವದ ಈ ಕಂಪನಿ ಸುಮಾರು 15 ವರ್ಷಗಳಿಂದ ಇಸ್ರೋದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅನೇಕ ಉಪಕರಣಗಳು ಇಲ್ಲಿಂದಲೇ ಪೂರೈಕೆ ಆಗುತ್ತವೆ.

ಉಪಗ್ರಹದಲ್ಲಿ ಬಳಸಿರುವ ಹೈಡ್ರೋಲಿಕ್‌ ಉಪಕರಣಗಳು, ಎಲೆಕ್ಟ್ರಾನಿಕ್‌ ಟೂಲ್‌ ಗಳು, ಸೆನ್ಸರ್‌ ಮಷಿನ್‌ ಪೂರೈಸಲಾಗಿದೆ.
ಹೈಡ್ರೋಲಿಕ್‌ ಉಪಕರಣವು ಉಪಗ್ರಹ ಹಾರುವುದರಿಂದ ಹಿಡಿದು ಚಂದ್ರನ ಕಕ್ಷೆಗೆ ಹೋಗಿ ತಲುಪುವರೆಗೆ, ಚಂದ್ರನ ಸುತ್ತಲೂ
ಸುತ್ತುವಾಗ ಕಾರ್ಯನಿರ್ವಹಿಸುತ್ತದೆ. ಆಚೆ ಈಚೆ ಏನಾಗುತ್ತದೆ ಎಂಬುದು ಹೈಡ್ರೋಲಿಕ್‌ ಕೆಲಸ ಮಾಡುತ್ತದೆ. ಪಾಥ್‌ ಕಂಟ್ರೋಲರ್‌ ಆಗಿ ಕೆಲಸ ನಿರ್ವಹಿಸುತ್ತದೆ. ಸೆನ್ಸರ್‌ ಮಷಿನ್‌ ಎನ್ನುವುದು ಉಪಗ್ರಹ ತಿರುಗುವಾಗ ರೋವರ್‌ ಇಳಿಯುವ ಮಷಿನ್‌ ಜತೆಗೆ ಇದರ ಕಾರ್ಯನಿರ್ವಹಣೆ ಇರುತ್ತದೆ. ರಾಕೆಟ್‌ ಹಾರುವಾಗ, ಕಕ್ಷೆಯಲ್ಲಿ ತೇಲುವಾಗ ಸೆನ್ಸರ್‌ನ ಜವಾಬ್ದಾರಿ ಬಹಳಷ್ಟಿದೆ. ಇಂಥ ಮಹತ್ವಪೂರ್ಣ ಬಿಡಿ ಭಾಗಗಳನ್ನು ಬೆಳಗಾವಿಯ ಈ ಕಂಪನಿ ಪೂರೈಸಿದ್ದು ಹೆಮ್ಮೆಯ ವಿಷಯವಾಗಿದೆ.

ದೇಶದ ಹೆಮ್ಮೆಯ ವಿಜ್ಞಾನಿ ಡಾ|ಅಬ್ದುಲ್‌ ಕಲಾಂ ಅವರ ಪ್ರೇರಣೆಯಿಂದ 2002ರಲ್ಲಿ ಸಣ್ಣ ಮಧ್ಯಮ ಮತ್ತು ಸೂಕ್ಷ್ಮ ಕೈಗಾರಿಕೆ ಅಡಿಯಲ್ಲಿ ಈ ಸರ್ವೋ ಕಂಟ್ರೋಲ್ಸ್‌ ಏರೋಸ್ಪೇಸ್‌ ಮತ್ತು ಟೆಕ್ನಾಲಾಜಿ ಪ್ರೈವೆಟ್‌ ಲಿಮಿಟೆಡ್‌ ಎಂಬ ಕಂಪನಿ ಆರಂಭಿಸಲಾಗಿದೆ. ಇಸ್ರೊದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಈ ಕಂಪನಿ ಈ ಹಿಂದೆ ಉಡಾವಣೆಯಾಗಿದ್ದ ಮಂಗಳಯಾನ ಹಾಗೂ ಚಂದ್ರಯಾನ-2 ಉಪಗ್ರಹ ಉಡಾವಣೆ ವೇಳೆಯೂ ಬಿಡಿ ಭಾಗಗಳನ್ನು ಪೂರೈಸಿತ್ತು. ಈಗ ಚಂದ್ರಯಾನ-3 ಉಪಗ್ರಹ ಉಡಾವಣೆಗೆ ಉಪಕರಣಗಳು ಪೂರೈಕೆ ಆಗಿದ್ದು ಮತ್ತು ಉಪಗ್ರಹ ಉಡಾವಣೆ ಯಶಸ್ವಿ ಆಗಿದ್ದಕ್ಕೆ ಬೆಳಗಾವಿ ಸಂತಸದ ಹೊನಲಿನಲ್ಲಿ
ತೇಲಾಡುತ್ತಿದೆ.

Advertisement

ಅನಗಡಿಯ ಪ್ರಕಾಶ ಪೇಡನೇಕರ ಚಂದ್ರಯಾನ-3ರ ಯುವ ವಿಜ್ಞಾನಿ ಖಾನಾಪುರ ತಾಲೂಕಿನ ಕಾಪೋಲಿ ಗ್ರಾಪಂ ವ್ಯಾಪ್ತಿಯ ಕುಗ್ರಾಮ ಅನಗಡಿ ಗ್ರಾಮದ ಪ್ರಕಾಶ ನಾರಾಯಣ ಪೇಡನೇಕರ ಎಂಬ ಯುವ ವಿಜ್ಞಾನಿಯೂ ಚಂದ್ರಯಾನ-3 ಉಪಗ್ರಹ ಉಡಾವಣೆಯಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ.

2019ರಿಂದ ಇಸ್ರೋದಲ್ಲಿ ಸೇವೆ ಸಲ್ಲಿಸುತ್ತಿರುವ 32 ವರ್ಷದ ಪ್ರಕಾಶ ಪೇಡನೇಕರ ಅವರ ತಂದೆ ರೈತರು. ತಾಯಿ ಗೃಹಿಣಿ, ತಮಿಳುನಾಡಿನ ಶ್ರೀಹರಿಕೋಟಾ ಬಳಿ ವಾಸವಿರುವ ಪ್ರಕಾಶ ಕಳೆದ ವರ್ಷ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಅನಗಡಿ ಗ್ರಾಮದಲ್ಲಿ ಮರಾಠಿ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ, ಕಾಪೋಲಿಯ ಮರಾಠಾ ಮಂಡಳ ಪ್ರೌಢಶಾಲೆಯಲ್ಲಿ ಮಾಧ್ಯಮಿಕ
ಶಿಕ್ಷಣ ಪೂರೈಸಿ ಬೆಳಗಾವಿಯ ಜಿಎಸ್‌ಎಸ್‌ ಕಾಲೇಜಿನಲ್ಲಿ ಪಿಯು ವಿಜ್ಞಾನ ಮತ್ತು ಜಿಐಟಿಯಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌
ಪದವಿ ಪಡೆದು ಉನ್ನತ ಶ್ರೇಣಿಯೊಂದಿಗೆ ಪಾಸಾಗಿದ್ದರು. ಮುಂಬೈನ ವಿವಿಡಿಪಿ ವಿಶ್ವವಿದ್ಯಾಲಯದಲ್ಲಿ ಅಂತರಿಕ್ಷ ವಿಜ್ಞಾನದಲ್ಲಿ ಮಾಸ್ಟರ್‌ ಡಿಗ್ರಿ ಪಡೆದಿರುವ ಅವರು ಇಸ್ರೋದಲ್ಲಿ ಸೇವೆ ಸಲ್ಲಿಸಲು ಆರಂಭಿಸಿದ ದಿನಗಳಿಂದಲೂ ಮೂನ್‌ ಮಿಷನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಕಾಶ ಅವರು ಚಂದ್ರಯಾನ-2ರ ತಂಡದಲ್ಲೂ ಸೇವೆಯಲ್ಲಿದ್ದರು. ಚಂದ್ರಯಾನ-2ರ ಅಪಯಶದಿಂದ ಧೃತಿಗೆಡದ ಮೂನ್‌ ಮಿಷನ್‌ ತಂಡ ಚಂದ್ರಯಾನ-3ರ ಯಶಸ್ಸಿಗೆ ಶ್ರಮಿಸಿದ್ದು, ಎರಡರಲ್ಲೂ ಪ್ರಕಾಶ ಅವರ ಪಾಲು ಇರುವುದು ಖಾನಾಪುರಿಗರ ಹೆಮ್ಮೆಯ ಸಂಗತಿ. ಚಂದ್ರಯಾನ-3ರ ತಂಡದಲ್ಲಿ ನನ್ನ ಬಳಿ ವಿದ್ಯೆ ಕಲಿತ ವಿದ್ಯಾರ್ಥಿ ಪ್ರಕಾಶ ಪೇಡನೇಕರ ಇದ್ದಾರೆ ಎಂದು ಕೇಳಿ ಬಹಳ ಸಂತೋಷವಾಗಿದೆ. ಅನಗಡಿ ಗ್ರಾಮದ ಬಡ ಕೃಷಿ ಕುಟುಂಬದಲ್ಲಿ ಹುಟ್ಟಿ ಬೆಳೆದಿರುದ ಪ್ರಕಾಶ ಅವರಿಗೆ ಬಡತನದ ಬಗ್ಗೆ ಅರಿವಿದೆ. ಶಿಕ್ಷಣದ ಮಹತ್ವದ ಬಗ್ಗೆ ತಿಳಿದಿದ್ದಾರೆ. ಇದರ ಪರಿಣಾಮವೇ ಇಂದು ಅವರು ಇಡೀ ದೇಶವೇ ಗೌರವಿಸುವಂತೆ ಸಾಧನೆ ಮಾಡಿದ್ದಾರೆ ಎಂದು ಪ್ರಕಾಶ ಅವರ ಪ್ರೌಢಶಾಲಾ ಶಿಕ್ಷಕ ಸಂಜೀವ ವಾಟೂಪಕರ ಸಂತಸ ಹಂಚಿಕೊಂಡರು.

ಜಿ.ಎಸ್‌.ಎಸ್‌ ಪಿಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಎರಡು ವರ್ಷ ವ್ಯಾಸಂಗ ಮಾಡಿರುವ ಪ್ರಕಾಶ ಪ್ರತಿಭಾನ್ವಿತ ವಿದ್ಯಾರ್ಥಿ.
ಅದ್ಭುತ ಸಾಧನೆ ಮಾಡಿದ್ದಾರೆ. ಗ್ರಾಮೀಣ ಪ್ರತಿಭೆಯಾಗಿ ಮರಾಠಿ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿ ಪೂರೈಸಿ ವಿಜ್ಞಾನ ವಿಭಾಗದಲ್ಲಿ ಪಿಯು ಕಲಿಯಲು ನಮ್ಮ ಕಾಲೇಜಿಗೆ ಸೇರಿಕೊಂಡಿದ್ದರು, ಕಷ್ಟಪಟ್ಟು ಇಂಗ್ಲಿಷ್‌ ಕಲಿತು ಪಿಯು ಶಿಕ್ಷಣ ಪೂರೈಸಿದ್ದಾರೆ ಎಂದು ಪಿಯು ಕಾಲೇಜು ಉಪನ್ಯಾಸಕ ಭರತ ತೋಪಿನಕಟ್ಟಿ ಹೇಳುತ್ತಾರೆ.

*ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next