ಗಾಂಧೀಜಿಯವರ ವಿಚಾರಧಾರೆಗಳನ್ನು ಮರೆಯುತ್ತಿರುವ ಇಂದಿನ ಯುವ ಜನಾಂಗ ಮತ್ತು ವಿದ್ಯಾರ್ಥಿಗಳಲ್ಲಿ ಗಾಂಧೀಜಿಯವರ ಜೀವನ ಮೌಲ್ಯಗಳನ್ನು ನೆನಪಿಸುವ ಕೆಲಸ ಮಾಡುತ್ತಿದೆ ಮಂಗಳೂರಿನ ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನ.
1975ರಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಲೋಕಸಭಾ ಸದಸ್ಯ ಕೆ.ಕೆ. ಶೆಟ್ಟಿ ಅವರ ನೇತೃತ್ವ ಠಾಗೋರ್ ಪಾರ್ಕ್‌ನಲ್ಲಿ ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನ ಆರಂಭವಾಯಿತು. ಆಗಿನ ನಗರಾಡಳಿತವು ಪ್ರತಿಷ್ಠಾನಕ್ಕೆ ಪಾರ್ಕ್‌ನಲ್ಲಿ ಕಟ್ಟಡವನ್ನು ನೀಡಿತ್ತು. ಕಾರ್ಯಕಾರಿ ಸಮಿತಿ ಸದಸ್ಯರೇ ವಂತಿಗೆ ಹಾಕಿ ಪ್ರತಿಷ್ಠಾನವನ್ನು ಮುನ್ನಡೆಸುತ್ತಿದ್ದು, ಸರಕಾರದಿಂದ ಯಾವುದೇ ಅನುದಾನ ಬರುವುದಿಲ್ಲ. ಕಟ್ಟಡದ ದುರಸ್ತಿ ಕಾರ್ಯ ಇದ್ದಾಗ ಪಾಲಿಕೆ ಯವರು ಆದ್ಯತೆಯಲ್ಲಿ ಮಾಡಿಕೊಡುತ್ತಾರೆ ಎನ್ನುವುದು ಸಮಾಧಾನಕರ ಸಂಗತಿ.
ಕ್ವಿಟ್ ಇಂಡಿಯಾ ದಿನವನ್ನು ಮಕ್ಕಳ ಸ್ಪರ್ಧಾ ದಿನವಾಗಿ, ಜಿಲ್ಲೆಯ ಪ್ರೌಢಶಾಲಾ ಮಕ್ಕಳಿಗೆ ಗಾಂಧೀಜಿ ಕುರಿತಾದ ಭಾಷಣ ಸ್ಪರ್ಧೆ ಮತ್ತು ದೇಶ ಭಕ್ತಿ ಗೀತೆಗಳ ಸ್ಪರ್ಧೆ ಗಳನ್ನು ಆಯೋಜಿಸಲಾಗುತ್ತದೆ. ಸಾತಂತ್ರ್ಯೋತ್ಸವ, ಗಾಂಧಿ ಜಯಂತಿ ಆಚರಿಸಲಾಗುತ್ತದೆ. ಗಾಂಧಿ ಜಯಂತಿಯಂದು “ವರ್ಷದ ವ್ಯಕ್ತಿ’ ಎಂದು ಒಬ್ಬರನ್ನು ಆಯ್ಕೆ ಮಾಡಿ ಪ್ರಶಸ್ತಿ ಪ್ರದಾನ ನಡೆಯುತ್ತದೆ. ಜಿಲ್ಲೆಯಲ್ಲಿ ಶಾಂತಿ ಕದಡುವಂತಹ ಘಟನೆಗಳಾದಾಗ ಸೌಹಾರ್ದತಾ ಶಾಂತಿ ಯಾತ್ರೆ ನಡೆಸುತ್ತ ಬಂದಿ ರು ವುದು ಇನ್ನೊಂದು ಪ್ರಮುಖ ಅಂಶ.
ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಗಾಂಧಿ ವಿಚಾರವಾಗಿ ಅಧ್ಯಯನ ಮಾಡುವ ಸಂಶೋಧನ ವಿದ್ಯಾರ್ಥಿಗಳು ಪ್ರತಿಷ್ಠಾನ ದಲ್ಲಿರುವ ವಾಚನಾಲಯದ ಸೌಲಭ್ಯವನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಗಾಂಧೀಜಿ ಯವರು ಬರೆದ ಮತ್ತು ಅವರ ಬಗ್ಗೆ ಇತರರು ಬರೆದ ಸುಮಾರು 500 ಕ್ಕೂ ಹೆಚ್ಚು ಪುಸ್ತಕಗಳು ಇಲ್ಲಿವೆ.
ಸ್ವಾತಂತ್ರ್ಯ ಹೋರಾಟಗಾರ, ವಿಧಾನ ಪರಿಷತ್ ಸದಸ್ಯರಾಗಿದ್ದ ಬಂಟ್ವಾಳ ನಾರಾಯಣ ನಾಯಕ್, ಇನ್ನೋರ್ವ ಅಮೃತ ಕೃಷ್ಣ ರಾಯರು, ಮಾಲತಿ ರಾವ್ ಪೇಜಾವರ, ಪರಿಷತ್ ಸದಸ್ಯೆಯಾಗಿದ್ದ ಒಕ್ಟೇವಿಯಾ ಅಲುºಕರ್ಕ್, ಪುರುಷೋತ್ತಮ ಶೆಟ್ಟಿ, ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದ ಕರುಣಾಕರ ಕೆ.ಉಚ್ಚಿಲ ಅಧ್ಯಕ್ಷ ರಾಗಿದ್ದರು. ಪ್ರಸ್ತುತ ಡಾ| ಎ. ಸದಾನಂದ ಶೆಟ್ಟಿ ಅವರು ಅಧ್ಯಕ್ಷರಾಗಿದ್ದಾರೆ.
ಗಾಂಧೀಜಿಯವರ ಮೌಲ್ಯಗಳನ್ನು ಸಾರುವ ಹಲವು ಕಾರ್ಯಕ್ರಮಗಳನ್ನು ಪ್ರತಿಷ್ಠಾನದಿಂದ ಆಯೋಜಿಸಲಾಗುತ್ತಿದೆ. ಕೆ.ಕೆ. ಶೆಟ್ಟಿಯರ ನೇತೃತ್ವದಲ್ಲಿ ಆರಂಭವಾಗಿ ಸಂಸ್ಥೆ ಅವರ ಆಶಯದಂತೆ ಯಶಸ್ವಿಯಾಗಿ ಮುಂದುವರಿಯುತ್ತಿದೆ. ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ, ಸ್ವಾತಂತ್ರÂದ ಅಮೃತ ಮಹೋತ್ಸವವನ್ನು ವಿಶೇಷವಾಗಿ ಆಚರಿಸಲಾಗಿದೆ.
-ಡಾ| ಎ.ಸದಾನಂದ ಶೆಟ್ಟಿ ,ಅಧ್ಯಕ್ಷರು