ಬೆಂಗಳೂರು: ಬಿಜೆಪಿ ನಾಯಕರ ಮಾತು, ಓಘವನ್ನು ನೋಡಿದರೆ ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಕೈವಾಡವಿರುವುದು ಸಹಜವಾಗಿಯೇ ಸ್ಪಷ್ಟವಾಗುತ್ತದೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆರೆಂಟು ತಿಂಗಳಿನಿಂದ ಇದೇ ನಡೆದಿದೆ. ರಾಜೀನಾಮೆ ಕೊಡುತ್ತೇವೆ, ಸರ್ಕಾರವನ್ನು ಬೀಳಿಸುತ್ತೇವೆ, ನಾಳೆ ರಾಜೀನಾಮೆ ಕೊಡುತ್ತೇನೆ, ಹುಣ್ಣಿಮೆವರೆಗೆ ತಡೆಯುತ್ತೇನೆಂಬ ಮಾತುಗಳು ಕೇಳುತ್ತಲೇ ಇದೆ. ಬಿಜೆಪಿಯು ಅರಾಜಕತೆ ಸೃಷ್ಟಿಸಿ, ಏನು ಮಾಡಬೇಕೆಂದಿದೆ ಎಂದು ಪ್ರಶ್ನಿಸಿದರು.
ವರದಿ ಸಲ್ಲಿಸುವವರೆಗೆ ತಾಳ್ಮೆಯಿಂದ ಕಾಯಬೇಕು: ಜಿಂದಾಲ್ ಸಂಸ್ಥೆಗೆ 3,666 ಎಕರೆ ಭೂಮಿ ಪರಭಾರೆ ನಿರ್ಣಯವನ್ನು ಸ್ಥಗಿತಗೊಳಿಸಿರುವ ಸರ್ಕಾರ ಸಂಪುಟ ಉಪಸಮಿತಿ ರಚಿಸಿದ್ದು, ಸಮಿತಿ ಶಿಫಾರಸು, ವರದಿ ಸಲ್ಲಿಸುವವರೆಗೆ ತಾಳ್ಮೆಯಿಂದ ಕಾಯಬೇಕು. ಇದೇ ವಿಚಾರಕ್ಕೆ ಶಾಸಕ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದರೆ ವಾಪಾಸ್ ಪಡೆಯಬೇಕು ಎಂದು ಎಚ್.ಕೆ.ಪಾಟೀಲ್ ಸಲಹೆ ನೀಡಿದರು.
ಜಿಂದಾಲ್ ಸಂಸ್ಥೆಗೆ ಭೂಮಿ ಮಾರಾಟ ಮಾಡುವುದನ್ನು ಸಂಪುಟ ನಿರ್ಣಯ ಕೈಗೊಳ್ಳುವ ಮೊದಲು ಹಾಗೂ ನಂತರವೂ ಆಕ್ಷೇಪಿಸಿ ಪತ್ರ ಬರೆದಿದ್ದೆ. ಈ ಬಗ್ಗೆ ಸಚಿವ ಕೆ.ಜೆ.ಜಾರ್ಜ್ ಅವರಿಗೂ ಪತ್ರ ಬರೆದಿದ್ದೆ. ಕೆಪಿಸಿಸಿ ಅಧ್ಯಕ್ಷರ ಸಮ್ಮುಖದಲ್ಲೂ ಜಾರ್ಜ್ ಅವರೊಂದಿಗೆ ಚರ್ಚಿಸಿ ಅಭಿಪ್ರಾಯ ತಿಳಿಸಿದ್ದೆ. ಬಳಿಕ ಮುಖ್ಯಮಂತ್ರಿಗಳು ನಿರ್ಧಾರವನ್ನು ಸ್ಥಗಿತಗೊಳಿಸಿ ಗೃಹ ಸಚಿವ ಎಂ.ಬಿ.ಪಾಟೀಲ್ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ರಚಿಸಿದ್ದಾರೆ.
ಆ ಹಿನ್ನೆಲೆಯಲ್ಲಿ ಸರ್ಕಾರ ತನ್ನ ನಿರ್ಣಯವನ್ನು ಪುನರ್ ಪರಿಶೀಲಿಸಲಿದೆ ಎಂದರು. ಸಂಪುಟ ಉಪಸಮಿತಿ ವರದಿ ನೀಡುವವರೆಗೆ ಕಾಯೋಣ. ರಾಜೀನಾಮೆ ಕೊಟ್ಟು ರಾಜ್ಯದಲ್ಲಿ ಅರಾಜಕತೆಗೆ ಅವಕಾಶ ನೀಡುವುದು ಸರಿಯಲ್ಲ. ಜನರ ಅಹವಾಲು ಆಲಿಸಿದ ಮೇಲೆ ಉಪಸಮಿತಿ ಸೂಕ್ತ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದರು.