Advertisement

ಪ್ರತಿ ಹೆಣ್ಣಿನ ಹೋರಾಟದ ಹಿಂದಿದೆ ಈ ನೆಲದ ಸ್ವಾಭಿಮಾನ: ಪ್ರೊ. ತ್ಯಾಗರಾಜ

05:23 PM Oct 28, 2024 | Team Udayavani |

ಉದಯವಾಣಿ ಸಮಾಚಾರ
ಬೆಳಗಾವಿ: ಹೋರಾಟ ಎಂಬುದು ಬಾಹ್ಯಿಕ ಸ್ಫೂರ್ತಿಯಿಂದ ಬಂದಾಗ ಅದು ಆ ಕ್ಷಣದ ಹೋರಾಟವಾಗುತ್ತದೆ. ಅದೇ ಅಂತರಾಳದಿಂದ ಬಂದಾಗ ಸಮಸ್ತ ಪರಿಸರವನ್ನೇ ಬಡಿದೆಬ್ಬಿಸುತ್ತದೆ. ಇದಕ್ಕೆ ರಾಣಿ ಚನ್ನಮ್ಮನ ಹೋರಾಟವೇ ಸಾಕ್ಷಿ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಸಿ ಎಂ ತ್ಯಾಗರಾಜ ಅಭಿಪ್ರಾಯಪಟ್ಟರು.

Advertisement

ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಹಯೋಗದಲ್ಲಿ ರಾಣಿ ಚನ್ನಮ್ಮನ ಐತಿಹಾಸಿಕ ವಿಜಯದ 200ನೇ ವರ್ಷಾಚರಣೆ ಸಂಭ್ರಮದ ಕುರಿತು ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪುರುಷನ ಬಹುತೇಕ ಹೋರಾಟವು ಅಧಿಕಾರದ ಪ್ರತೀಕವಾದರೆ, ಅದೇ ಪ್ರತಿ ಹೆಣ್ಣಿನ ಹೋರಾಟದ ಹಿಂದೆ ಈ ನೆಲದ ಸಂಸ್ಕೃತಿ,
ಸ್ವಾಭಿಮಾನ ಅಡಗಿರುತ್ತದೆ ಎಂದರು.

ಈ ನೆಲದ ಸಂಸ್ಕೃತಿಯ ಅಳಿವು ಉಳಿವಿನ ಪ್ರಶ್ನೆ ಬಂದಾಗ ಪ್ರತಿ ಹೆಣ್ಣು ಶತ್ರುಗಳ ವಿರುದ್ಧ ರಣಾಂಗಣದಲ್ಲಿ ಹೋರಾಡಿರುವುದು ನಾಡಿನ ಚರಿತ್ರೆಯುದ್ದಕ್ಕೂ ದಾಖಲಾಗಿದೆ. ಕನ್ನಡ ನಾಡು ಕ್ಷಾತ್ರತೇಜದ ದೊಡ್ಡ ಪರಂಪರೆಯೇ ಹೊಂದಿದೆ.

ಚನ್ನಮ್ಮನ ಕ್ಷಾತ್ರತೇಜದ ಪರಂಪರೆಯಿಂದಾಗಿ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದವರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಹೆಚ್ಚು ಸ್ಫೂರ್ತಿ ನೀಡಿತು ಎಂದು ಹೇಳಿದರು. ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯರಾದ ಮಹಾಂತೇಶ ಕಂಬಾರ ಮಾತನಾಡಿ, ರಾಣಿ ಚನ್ನಮ್ಮ ಈ ನಾಡಿನ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಕ್ರಾಂತಿಯ ಕಹಳೆ ಮೊಳಗಿಸಿದಳು. ಅವಳ ಸಾಹಸ ಮತ್ತು ಹೋರಾಟಗಳು ಸಮಾಜಕ್ಕೆ ಸ್ಫೂರ್ತಿ ಎಂದರು.

ವಿವಿಯ ವಿದ್ಯಾವಿಧೇಯಕ ಪರಿಷತ್ತಿನ ಸದಸ್ಯರಾದ ಡಾ| ನಿರ್ಮಲಾ ಬಟ್ಟಲ ಅವರು ಕಿತ್ತೂರು ಚನ್ನಮ್ಮನ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕುಲಸಚಿವ ಸಂತೋಷ ಕಾಮಗೌಡ, ಹಣಕಾಸು ಅಧಿಕಾರಿ ಎಂ. ಎ. ಸಪ್ನಾ, ಅಧ್ಯಯನ ಪೀಠದ ನಿರ್ದೇಶಕಿ ಪ್ರೊ. ನಾಗರತ್ನ ಪರಾಂಡೆ, ಪ್ರಾಚಾರ್ಯ ಎಂ ಜಿ ಹೆಗಡೆ, ಹಿರಿಯ ಸಾಹಿತಿಯರು ಪಾಟೀಲ ಉಪಸ್ಥಿತರಿದ್ದರು.

Advertisement

ಪ್ರಿಯಾಂಕಾ ತಿಲಗಾರ ಪ್ರಾರ್ಥಿಸಿದರು. ಶಾಂಭವಿ ಥೋರ್ಲಿ ನಿರೂಪಿಸಿದರು, ಗಾಯತ್ರಿ ಹಲಗಿ ಸ್ವಾಗತಿಸಿದರು. ಡಾ. ಪ್ರೀತಿ ಪದಪ್ಪಗೋಳ ಪರಿಚಯಿಸಿದರು. ಅಧ್ಯಯನ ಪೀಠದ ಸಂಯೋಜಕ ಡಾ| ಮಹೇಶ ಗಾಜಪ್ಪನರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next