ಆಹಾರ ಸಾಮಗ್ರಿ: ತಾತ್ಕಾಲಿಕ ವ್ಯವಸ್ಥೆ :
ಪುತ್ತೂರು/ಸುಳ್ಯ: ತಾಲೂಕಿನಲ್ಲಿ ಎಲ್ಲ ಶಾಲೆಗಳಿಗೆ ಅಕ್ಕಿ, ಗೋಧಿ ಪೂರೈಕೆಯಾಗಿದ್ದು, ಉಳಿದ ಸಾಮಗ್ರಿಗಳ ಖರೀದಿಗೆ ಅಕ್ಷರ ದಾಸೋಹ ವಿಭಾಗ ಹಾಗೂ ಶಾಲಾ ಸಂಚಿತ ನಿಧಿಯಿಂದ ಹಣ ಬಳಕೆಗೆ ಅವಕಾಶ ನೀಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ತಿಳಿಸಿದ್ದಾರೆ.
ಸುಳ್ಯ ತಾಲೂಕಿನಲ್ಲಿ ಅಕ್ಕಿ ಕೊರತೆ ಇರುವ ಶಾಲೆಗಳು ಸನಿಹದ ಪಡಿತರ ಅಂಗಡಿ ಮೂಲಕ ಅಕ್ಕಿ ಪಡೆದುಕೊಳ್ಳುವಂತೆ ಮುಖ್ಯ ಗುರುಗಳಿಗೆ ಸೂಚನೆ ನೀಡಲಾಗಿದೆ. ಉಳಿದ ಸಾಮಗ್ರಿಗಳ ಖರೀದಿಗೆ ಸಂಚಿತ ನಿಧಿ ಬಳಸುವಂತೆ ತಿಳಿಸಲಾಗಿತ್ತು ಎಂದು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವ ತಿಳಿಸಿದ್ದಾರೆ.
ಶಾಲಾರಂಭಕ್ಕೆ ತೊಡಕಾಗದ ಬಿಸಿಯೂಟ :
ಬೆಳ್ತಂಗಡಿ: ತಾಲೂ ಕಿನ ಎಲ್ಲ ಶಾಲೆಗಳಿಗೆ ಅಕ್ಕಿ, ಗೋಧಿ ಪೂರೈಸಲಾಗಿದ್ದು, ಎಣ್ಣೆ, ಉಪ್ಪು, ಬೇಳೆ ಖರೀದಿಗೆ ಅಕ್ಷರ ದಾಸೋಹ ಇಲಾಖೆಯ ಖಾತೆಯಿಂದ ಖರೀದಿಸುವಂತೆ ಸೂಚಿಸಲಾಗಿದೆ.
6ರಿಂದ 8ನೇ ತರಗತಿವರೆಗಿನ 140 ಹಿ.ಪ್ರಾ. ಶಾಲೆಗಳಲ್ಲಿ 8,075 ಮಕ್ಕಳು, 43 ಪ್ರೌಢ ಶಾಲೆಗಳಲ್ಲಿ 5,945 ಮಕ್ಕಳು ಇದ್ದಾರೆ. ತರಕಾರಿಯನ್ನು ಸ್ಥಳೀಯವಾಗಿ ಶಿಕ್ಷಕರು ಹಾಗೂ ಶಾಲಾಡಳಿತ ಸಮಿತಿ ವತಿಯಿಂದ ಖರೀದಿಸಲಾಗಿದೆ. ಬಿಇಒ ವಿರೂಪಾಕ್ಷಪ್ಪ ಸೇರಿದಂತೆ ಬಿಆರ್‌ಸಿಗಳು ಬೆಳಗ್ಗೆಯಿಂದ ತಾಲೂಕಿನ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಎಲ್ಲ ಶಾಲೆಗಳಲ್ಲೂ ಬುಧವಾರವೇ ಸ್ವತ್ಛತೆ ಕೈಗೊಳ್ಳಲಾಗಿತ್ತು.
ಲಭ್ಯ ಅನುದಾನ ಬಳಕೆ :
ಕಡಬ: ಪರಿಸರದ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಸಂಬಂಧಪಟ್ಟ ಶಾಲೆಗಳ ಶಿಕ್ಷಕರು ಸಮರ್ಪಕವಾಗಿ ವ್ಯವಸ್ಥೆಗೊಳಿಸಿದ್ದು, ಗುರುವಾರ ಎಲ್ಲ ಶಾಲೆಗಳಲ್ಲಿ ಬಿಸಿಯೂಟ ನೀಡಲಾಗಿದೆ.
ಬಿಸಿಯೂಟಕ್ಕೆ ಅಕ್ಕಿ ಸರಬರಾಜಾಗಿದ್ದು, ಬೆಳೆಕಾಳು, ಎಣ್ಣೆ, ತರಕಾರಿ ಉಪ್ಪು ಇತ್ಯಾದಿಗಳನ್ನು ಲಭ್ಯ ಅನುದಾನ ಬಳಕೆ ಮಾಡಿ ಸ್ಥಳೀಯವಾಗಿ ಖರೀದಿ ಸಲಾಗಿದೆ. ಎಲ್ಲ ಶಾಲೆಗಳಲ್ಲಿ ಉತ್ತಮ ಹಾಜರಾತಿ ದಾಖ ಲಾಗಿದೆ. ಕೆಲವು ಶಾಲೆಗಳಲ್ಲಿ ಶಾಲಾಭಿವೃದ್ಧಿ ಸಮಿತಿಯ ನೆರವಿನಿಂದ ಪಾಯಸ ಸೇರಿದಂತೆ ಸಿಹಿ ತಿಂಡಿ ವಿತರಣೆ ಮಾಡಲಾಗಿದೆ.
ಶಾಲೆ ವತಿಯಿಂದ ಸೂಕ್ತ ವ್ಯವಸ್ಥೆ :
ಸುಬ್ರಹ್ಮಣ್ಯ: ದಸರಾ ರಜೆ ಬಳಿಕ ಶಾಲೆ ಆರಂಭಗೊಂಡಿದ್ದು, 6ರಿಂದ 10ನೇ ತರಗತಿಯ ಮಕ್ಕಳು ಶಾಲೆಗೆ ಆಗಮಿಸಿದರು. ಅವರಿಗೆ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆ ಮಾಡಲಾಗಿತ್ತು.
ನೂಜಿಬಾಳ್ತಿಲ ಕ್ಲಸ್ಟರ್ ವ್ಯಾಪ್ತಿಯ ನೂಜಿಬಾಳ್ತಿಲ ಉ.ಹಿ.ಪ್ರಾ.ಶಾಲೆ, ನೇರ್ಲ ಉ.ಹಿ.ಪ್ರಾ.ಶಾಲೆ, ಅಡೆಂಜ, ಹಿ.ಪ್ರಾ.ಶಾಲೆ, ರೆಂಜಿಲಾಡಿ ಹಿ.ಪ್ರಾ.ಶಾಲೆ, ಬೆಥನಿ ಪ್ರೌಢ ಶಾಲೆಯ ಒಟ್ಟು 295 ವಿದ್ಯಾರ್ಥಿಗಳು, ಬಂಟ್ರ ಕ್ಲಸ್ಟರ್ ವ್ಯಾಪ್ತಿಯ ಕೊಣಾಜೆ ಉ.ಹಿ.ಪ್ರಾ.ಶಾಲೆಯ 38 ವಿದ್ಯಾರ್ಥಿಗಳು ಬಿಸಿಯೂಟ ಸ್ವೀಕರಿಸಿದರು.
ಅಕ್ಷರ ದಾಸೋಹ ಇಲಾಖೆಯ ಸೂಚನೆಯಂತೆ ಅಗತ್ಯ ದಾಸ್ತಾನು ವ್ಯವಸ್ಥೆಯನ್ನು ಶಾಲೆಯ ವತಿಯಿಂದ ಮಾಡಲಾಗಿತ್ತು.
ಇಸ್ಕಾನ್‌ನಿಂದ ಪೂರೈಕೆ :
ಬಂಟ್ವಾಳ: ಉದಯವಾಣಿಯ ತಂಡ ಆಯ್ದ ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಎಲ್ಲ ಕಡೆಯೂ ಉತ್ತಮ ರೀತಿಯಲ್ಲಿ ಬಿಸಿಯೂಟ ಸಿದ್ಧತೆ ನಡೆಯುತ್ತಿತ್ತು. ತುಂಬೆ ಸರಕಾರಿ ಶಾಲೆಯಲ್ಲಿ ಅಕ್ಕಿ ಪೂರೈಕೆಯಾಗದೇ ಇದ್ದರೂ ಬಿಸಿಯೂಟ ನೀಡಲಾಗಿದೆ. ಕಳ್ಳಿಗೆ ಸರಕಾರಿ ಶಾಲೆಗೆ ಇಸ್ಕಾನ್‌ನಿಂದ ಬಿಸಿಯೂಟ ಪೂರೈಕೆಯಾಗುತ್ತಿದ್ದು, ಅಲ್ಲಿ ಅಡುಗೆ ತಯಾರಿಯ ಕೆಲಸವಿರಲಿಲ್ಲ. ಸುಜೀರು ಪ್ರಾ. ಶಾಲೆಯಲ್ಲಿ ಅಡುಗೆ ಸಿಬಂದಿ ಬಿಸಿಯೂಟ ತಯಾರಿಯಲ್ಲಿ ತೊಡ ಗಿದ್ದು, ಈ ಶಾಲೆಗೆ ಬುಧವಾರ ಬೆಳಗ್ಗೆ ಅಕ್ಕಿ ಪೂರೈಕೆಯಾಗಿತ್ತು.
ತಾಲೂಕಿನ ಎಲ್ಲ ಶಾಲೆಗಳಲ್ಲೂ ಮೊದಲ ದಿನ ಬಿಸಿಯೂಟ ವಿತರಣೆ ಸಮರ್ಪಕವಾಗಿ ನಡೆದಿದ್ದು, ಅಕ್ಕಿ-ದಿನಸಿ ಪೂರೈಕೆಯಾಗದ ಕಡೆ ಲಭ್ಯ ಅನುದಾನ ಬಳಸುವಂತೆ ಸೂಚನೆ ನೀಡಲಾಗಿತ್ತು. ಬಿಸಿಯೂಟ ತಯಾರಿ ಯಾವ ರೀತಿ ನಡೆದಿದೆ ಎಂಬುದರ ಕುರಿತು ಗೂಗಲ್ ಮೀಟ್ ಮೂಲಕ ಕ್ಲಸ್ಟರ್ ಮಟ್ಟದಲ್ಲಿ ಸಿಆರ್‌ಪಿಗಳ ಸಭೆ ಕರೆದು ಪರಿಶೀಲನೆಯನ್ನೂ ನಡೆಸಲಾಗಿದೆ.
–ನೋಣಯ್ಯ ನಾಯ್ಕ, ತಾಲೂಕು ಸಂಯೋಜಕರು, ಅಕ್ಷರ ದಾಸೋಹ, ಬಂಟ್ವಾಳ
ಜತೆಯಾಗಿ ಊಟ ಮಾಡಿದ ವಿದ್ಯಾರ್ಥಿಗಳು :
ವಿಟ್ಲ: ಸರಕಾರಿ ಪ್ರೌಢಶಾಲೆ ಮತ್ತು ದ.ಕ.ಜಿ.ಪಂ.ಮಾ.ಹಿ. ಪ್ರಾಥಮಿಕ ಶಾಲೆಯ ಒಟ್ಟು 310 ವಿದ್ಯಾರ್ಥಿಗಳಿಗೆ ಬಿಸಿಯೂಟ ವಿತರಿಸಲಾಗಿದೆ. ಸರಕಾರ ಅಕ್ಕಿಯನ್ನು ಒದಗಿಸಿದ್ದು ತರಕಾರಿ, ಬೇಳೆ, ಇತ್ಯಾದಿಗಳನ್ನು ದಿನಸಿ ಅಂಗಡಿಗಳಿಂದ ಖರೀದಿಸಲಾಗಿದೆ. ಮಕ್ಕಳು ಬಿಸಿಯೂಟ ಮಾಡಿದ್ದು ತುಂಬಾ ಸಮಯದ ಬಳಿಕ ಜತೆಯಾಗಿ ಊಟ ಮಾಡಿ ಸಂಭ್ರಮಿಸಿದ್ದಾರೆ. ಕನ್ಯಾನದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ 150 ವಿದ್ಯಾರ್ಥಿಗಳಿಗೆ ಬಿಸಿಯೂಟ ವಿತರಿಸಲಾಗಿದೆ. ಶಿಕ್ಷಕರ ವತಿಯಿಂದ ಪಾಯಸವನ್ನೂ ನೀಡಲಾಗಿದೆ. ಕರೋಪಾಡಿ ಗ್ರಾಮದ ಮಿತ್ತನಡ್ಕ ಶಾಲೆಯಲ್ಲಿ 40 ವಿದ್ಯಾರ್ಥಿಗಳಿಗೆ ಬಿಸಿಯೂಟ ವಿತರಿಸಲಾಗಿದೆ.
ಶಾಲೆಯ ನಿಧಿ ಬಳಕೆ :
ಉಪ್ಪಿನಂಗಡಿ: ಸರಕಾರಿ ಉನ್ನತೀಕರಿಸಿದ ಹಿರಿಯ ಮಾದರಿ ಶಾಲೆಯಲ್ಲಿ 110 ಮಕ್ಕಳು ಮಧ್ಯಾಹ್ನದ ಬಿಸಿಯೂಟ ಸವಿದರು.
ಸರಕಾರದ ಆದೇಶದಂತೆ ಈ ವ್ಯವಸ್ಥೆ ಆರಂಭಿಸಿದ್ದು, ತರಕಾರಿಗಾಗಿ ಶಾಲೆಯ ಸ್ವಂತ ನಿಧಿ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಮುಖ್ಯ ಶಿಕ್ಷಕಿ ದೇವಕಿ ತಿಳಿಸಿದ್ದಾರೆ. ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಮುಳಿಯ ಹಾಗೂ ಅಭಿವೃದ್ಧಿ ಅಧಿಕಾರಿ ವಿಲೆøàಡ್ ಲಾರೆನ್ಸ್ ರೋಡ್ರಿಗಸ್ ಮತ್ತು ಸದಸ್ಯರ ಸಹಕಾರದೊಂದಿಗೆ ಗ್ರಾಮ ಪಂಚಾಯತ್ ಅನುದಾನದಲ್ಲಿ ಮಕ್ಕಳಿಗೆ ಮಧ್ಯಾಹ್ನದ ಪಾಯಸ ಉಣಬಡಿಸಲಾಯಿತು.
ಕರಾಯ ಸ. ಮಾದರಿ ಶಾಲೆ :
ಕರಾಯ ಸರಕಾರಿ ಮಾದರಿ ಶಾಲೆಯ ಆರು ಮತ್ತು ಏಳನೇ ತರಗತಿಯ 23 ಮಕ್ಕಳು ಮಧ್ಯಾಹ್ನದ ಬಿಸಿಯೂಟ ಸವಿದರು. ಸರಕಾರದ ಸುತ್ತೋಲೆಯಲ್ಲಿ ಅಕ್ಕಿ ಬಿಡುಗಡೆಗೊಂಡರೂ ತರಕಾರಿಗೆ ಉಳಿಕೆ ಹಣ ವನ್ನು ಬಳಕೆ ಮಾಡಿ ಕೊಳ್ಳಲಾಗಿದೆ ಎಂದು ಮುಖ್ಯ ಶಿಕ್ಷಕ ಮಹಾಲಿಂಗ ಕೆ. ತಿಳಿಸಿದ್ದಾರೆ. ಪರಿಶೀಲಿ ಸಲು ಕ್ಷೇತ್ರ ಸಮನ್ವಯ ಅಧಿಕಾರಿ ಶಂಭು ಶಂಕರ ಹಾಗೂ ಸಂಪನ್ಮೂಲ ವ್ಯಕ್ತಿ ಮೋಹನ ಕುಮಾರ್ ದಿಢೀರ್ ಭೇಟಿ ನೀಡಿದರು.
ನಿಯಮ ಪಾಲನೆ :
ಪುಂಜಾಲಕಟ್ಟೆ: ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್, ಬಂಟ್ವಾಳ ತಾಲೂಕಿನ ಗ್ರಾಮಾಂತರ ಶಾಲೆಗಳಾದ ಸಿದ್ದಕಟ್ಟೆ, ಚೆನ್ನೈತ್ತೋಡಿ, ಮೂಡು ಪಡುಕೋಡಿ, ಮೂರ್ಜೆ, ಉಳಿ, ಸರಪಾಡಿ, ಕಾವಳಮೂಡೂರು, ಕಾವಳಪಡೂರು ಮತ್ತಿತರ ಶಾಲೆಗಳಲ್ಲಿ ವಿದ್ಯಾರ್ಥಿಗಳು ಬಿಸಿಯೂಟವನ್ನು ಸವಿದರು.
ಶಿಕ್ಷಣ ಇಲಾಖೆಯಿಂದ ಗುಣಮಟ್ಟ ಕಾರ್ಯನಿರ್ವಹಣೆಯ ಶಿಷ್ಟಾಚಾರದಂತೆ ಬಿಸಿಯೂಟದ ಪೂರ್ವ ತಯಾರಿಯಾಗಿ ಗ್ಯಾಸ್ ಸ್ಟೌ, ಪಾತ್ರೆ ಪರಿಕರಗಳನ್ನು ಪರಿಶೀಲಿಸಿ ಅಡುಗೆ ಕೇಂದ್ರಗಳಲ್ಲಿ ಸಿದ್ಧಪಡಿಸಲಾಗಿತ್ತು. ಅಕ್ಷರ ದಾಸೋಹದ ಸಿಬಂದಿ ಸರಕಾರದ ನಿಯಮಾನುಸಾರ 2 ಡೋಸ್ ಲಸಿಕೆ ಪಡೆದಿದ್ದರು. ಮುಖ್ಯ ಶಿಕ್ಷಕರು, ಶಿಕ್ಷಕರು, ಅಕ್ಷರ ದಾಸೋಹದ ಮುಖ್ಯ ಅಡುಗೆಯವರು, ಸಹಾಯಕರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು ಬಿಸಿಯೂಟ ಯಶಸ್ಸಿಗೆ ಸಹಕರಿಸಿದ್ದರು.