Advertisement

ಉಡುಪಿ ಜಿಲ್ಲೆ: ರಜತೋತ್ಸವ ವರ್ಷ ಆರಂಭ

09:00 PM Aug 25, 2021 | Team Udayavani |

ಉಡುಪಿ: ಉಡುಪಿ ಜಿಲ್ಲೆ 1997 ಆಗಸ್ಟ್‌ 25ರಂದು ಶ್ರೀಕೃಷ್ಣಜನ್ಮಾಷ್ಟಮಿಯ ಮರು ದಿನ ವಿಟ್ಲಪಿಂಡಿಯಂದು ಉದಯಿಸಿತು. ಜಿಲ್ಲೆಯು 25ರ ಏರುಜವ್ವನದ ವರ್ಷಕ್ಕೆ 2021ರ ಆ. 25ರಂದು ಪಾದಾರ್ಪಣೆ ಮಾಡಿದೆ.

Advertisement

ಅಜ್ಜರಕಾಡು ಕ್ರೀಡಾಂಗಣದಲ್ಲಿ  ಆಗಿನ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಅವರು ಜಿಲ್ಲೆಯನ್ನು ಉದ್ಘಾಟಿಸಿದ್ದರು. ಆಗ ಕೆ.ಜಯಪ್ರಕಾಶ ಹೆಗ್ಡೆ ಅವಿಭಜಿತ ದ.ಕ. ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ಸಂಸದರಾಗಿ ಆಸ್ಕರ್‌ ಫೆರ್ನಾಂಡಿಸ್‌, ಶಾಸಕರಾಗಿ ಯು.ಆರ್‌.ಸಭಾಪತಿ, ವಿಧಾನ ಪರಿಷತ್‌ ಸದಸ್ಯರಾಗಿ ಡಾ|ವಿ.ಎಸ್‌.ಆಚಾರ್ಯ ಪಾಲ್ಗೊಂಡಿದ್ದರು. ಪ್ರಥಮ ಜಿಲ್ಲಾಧಿಕಾರಿಯಾಗಿ ಜಿ.ಕಲ್ಪನಾ, ಪ್ರಥಮ ಎಸ್ಪಿಯಾಗಿ ಸವಿತಾ ಹಂಡೆ, ಪ್ರಥಮ ಜಿ.ಪಂ. ಅಧ್ಯಕ್ಷರಾಗಿ ರೆಮಿಡಿಯಾ ಡಿ’ಸೋಜಾ, ಪ್ರಥಮ ಸಿಇಒ ಆಗಿ ಬಿ.ಎಚ್‌.ಅನಿಲ್‌ಕುಮಾರ್‌ ಸೇವೆ ಸಲ್ಲಿಸಿದ್ದರು. ಆಗಲೂ ಈಗಲೂ ಯುವಕರು ಸಚಿವರಾಗಿದ್ದಾರೆ.

ಆಗಿನ ಮುಖ್ಯಮಂತ್ರಿಯ ಒಡನಾಟದಲ್ಲಿದ್ದ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದು ಈಗ ಮುಖ್ಯಮಂತ್ರಿಯಾಗಿದ್ದಾರೆ. ಆಗಿನ ಉಸ್ತುವಾರಿ ಸಚಿವ ಜಯಪ್ರಕಾಶ್‌ ಹೆಗ್ಡೆ ಅವರು ಈಗ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು. ಇತ್ತೀಚಿಗಷ್ಟೇ ಸುನಿಲ್‌ಕುಮಾರ್‌ ಸಚಿವರಾಗಿ ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜಾರೋಹಣ ಮಾಡಿ ಜಿಲ್ಲೆಯ ಚುಕ್ಕಾಣಿ ಹಿಡಿದಿದ್ದಾರೆ. ಈಗ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರದ ಸಚಿವೆ, ಆಸ್ಕರ್‌ ಫೆರ್ನಾಂಡಿಸ್‌ ರಾಜ್ಯಸಭಾ ಸದಸ್ಯರು, ಶಾಸಕರಾಗಿ ಕೆ.ರಘುಪತಿ ಭಟ್‌, ಜಿಲ್ಲಾಧಿಕಾರಿಯಾಗಿ ಜಿ.ಜಗದೀಶ್‌, ಎಸ್‌ಪಿಯಾಗಿ ವಿಷ್ಣುವರ್ಧನ್‌, ಜಿ.ಪಂ. ಸಿಇಒ ಆಗಿ ಡಾ|ನವೀನ್‌ ಭಟ್‌ ಕಾರ್ಯನಿರ್ವಹಿಸುತ್ತಿದ್ದಾರೆ.

ಜಿಲ್ಲಾ ಪುನರ್ವಿಂಗಡಣೆ:

1985ರವರೆಗೆ ರಾಜ್ಯದಲ್ಲಿದ್ದ 19 ಜಿಲ್ಲೆ 1985ರಲ್ಲಿ 21 ಆಯಿತು. 1997ರಲ್ಲಿ ಮತ್ತೆ ಉಡುಪಿ ಸಹಿತ ಏಳು ಜಿಲ್ಲೆಗಳಾದವು. 1998, 2007, 2010ರಲ್ಲಿ ಹೊಸ ಹೊಸ ಜಿಲ್ಲೆಗಳಾದವು. 2020ರಲ್ಲಿ ಅಸ್ತಿತ್ವಕ್ಕೆ ಬಂದ ವಿಜಯನಗರ ಜಿಲ್ಲೆ 31ನೇ ಜಿಲ್ಲೆ.

Advertisement

1983ರಲ್ಲಿ ಡಾ|ವಿ.ಎಸ್‌.ಆಚಾರ್ಯ ಉಡುಪಿ ಶಾಸಕರಾಗಿ ವಿಧಾನಸಭೆಯಲ್ಲಿ ಆಡಿದ ಸಣ್ಣ ಸಣ್ಣ ಜಿಲ್ಲೆಗಳ ಸೃಷ್ಟಿಯ ಅಗತ್ಯದ ಭಾಷಣದಿಂದ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಟಿ.ಎಂ.ಹುಂಡೇಕರ್‌ ನೇತೃತ್ವದಲ್ಲಿ ಜಿಲ್ಲಾ ಪುನರ್ವಿಂಗಡಣ ಸಮಿತಿ ರಚಿಸಿದರು. ಈ ಸಮಿತಿಯ ಶಿಫಾರಸಿನಂತೆ ಉಡುಪಿ ಜಿಲ್ಲೆಯ ಉಗಮವಾಯಿತು.

ತಾಲೂಕು ಪುನರ್ವಿಂಗಡಣೆ : 

1956ರಲ್ಲಿ ಅಖಂಡ ಕರ್ನಾಟಕ ಉದಯವಾಗು ವಾಗ ಇದ್ದ ತಾಲೂಕು 175. ಅನಂತರ ಹೊಸದಾಗಿ ಆದ ತಾಲೂಕು ಒಂದೇ ಒಂದು. ಅದು ಬೆಂಗಳೂರು ದಕ್ಷಿಣ. ಹಿಂದೆ ಜಗದೀಶ ಶೆಟ್ಟರ್‌ ಅವರ ಸರಕಾರವಿದ್ದಾಗ 43 ತಾಲೂಕುಗಳು, ಸಿದ್ದರಾಮಯ್ಯ ನವರ ಸರಕಾರವಿದ್ದಾಗ 49 ಹೊಸ ತಾಲೂಕುಗಳನ್ನು ಘೋಷಿಸಲಾಯಿತು. ಈ ಪೈಕಿ ಉಡುಪಿ ಜಿಲ್ಲೆಯಲ್ಲಿ ಕಾಪು, ಬ್ರಹ್ಮಾವರ, ಬೈಂದೂರು, ಹೆಬ್ರಿ ಸೇರಿವೆ.

ಹೊಸ ಹೊಸ ನಿರೀಕ್ಷೆಗಳು :

ಜಿಲ್ಲೆ ಉಗಮವಾಗಿ 14 ವರ್ಷಗಳ ಬಳಿಕ 2011ರಲ್ಲಿ ಜಿಲ್ಲಾಧಿಕಾರಿ ಕಚೇರಿ ಸ್ವಂತ ಕಟ್ಟಡದಲ್ಲಿ ಉದ್ಘಾಟನೆ ಯಾಯಿತು. ಜಿಲ್ಲೆಯಾಗಿ ರಜತೋತ್ಸವ ವರ್ಷದಲ್ಲಿ ಕೊರೊನಾ ಸೋಂಕು ಆವರಿಸಿಕೊಂಡಿರುವಾಗಲೇ ಹತ್ತು ಹಲವು ಆಶಯಗಳನ್ನು ಹೊತ್ತು ಸಾಗುತ್ತಿದೆ. ಜಿಲ್ಲೆ ಉದಯಿಸುವಾಗ ಇದ್ದ ಒಂದು ಉಪವಿಭಾಗ, ಒಂದು ಅರಣ್ಯ ಇಲಾಖೆ ಉಪವಿಭಾಗ ಹಾಗೆಯೇ ಮುಂದುವರಿಯುತ್ತಿದೆ. ಜಿಲ್ಲೆಗೊಂದು ಸರಕಾರಿ ವೈದ್ಯಕೀಯ ಕಾಲೇಜು, ವಿಮಾನ ನಿಲ್ದಾಣದಂತಹ ಬೇಡಿಕೆಗಳು ಈಡೇರಬೇಕಾಗಿದೆ.

ರಜತೋತ್ಸವ ವರ್ಷದಲ್ಲಿ 2 ಸಚಿವರು:

ಈ ವರ್ಷ ಇದುವರೆಗೆ ಲಭ್ಯವಿಲ್ಲದ ಜಿಲ್ಲೆಯ ಇಬ್ಬರಿಗೆ ಸಚಿವ ಪದವಿ ಸಿಕ್ಕಿದೆ. ಕೋಟ ಶ್ರೀನಿವಾಸ ಪೂಜಾರಿ ಅವರು ಹಿರಿಯ ಅನುಭವಿಯಾದರೆ ವಿ.ಸುನಿಲ್‌ಕುಮಾರ್‌ ಕ್ರಿಯಾಶೀಲ ಯುವಕರು.

1799ರಿಂದ… :

ಕರ್ನಾಟಕದ ಕರಾವಳಿಗೆ ಅಧಿಕೃತವಾಗಿ ಜಿಲ್ಲೆಯ ಸ್ಥಾನಮಾನ ಗೋಚರವಾಗುವುದು ಟಿಪ್ಪುವಿನ ಕಾಲಾನಂತರ 1799ರಿಂದ ಬ್ರಿಟಿಷರ ಸುಪರ್ದಿಗೆ ಬಂದಾಗ. ಆಗ ಕಾಸರಗೋಡಿನಿಂದ ಕಾರವಾರದವರೆಗೆ ಒಂದೇ ಕೆನರಾ ಜಿಲ್ಲೆ. 1862ರಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಎಂದು ವಿಭಜನೆ ಮಾಡಿದಾಗ ದ.ಕ. ಮದ್ರಾಸ್‌ ಪ್ರಾಂತ್ಯದ ಅಧೀನಕ್ಕೂ ಉ.ಕ. ಜಿಲ್ಲೆ ಮುಂಬಯಿ ಪ್ರಾಂತ್ಯದ ಅಧೀನಕ್ಕೂ ಹೋಯಿತು. ಕುಂದಾಪುರ ತಾಲೂಕು ಮೊದಲು ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿದ್ದದ್ದು ಮತ್ತೆ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಸೇರಿತು. 1956ರಲ್ಲಿ ರಾಜ್ಯ ಪುನರ್ವಿಂಗಡಣೆಯಾಗುವಾಗ ಕಾಸರಗೋಡು ದ.ಕ. ಜಿಲ್ಲೆಯ ವ್ಯಾಪ್ತಿಯಿಂದ ತಪ್ಪಿ ಕೇರಳಕ್ಕೆ ಹೋಯಿತು. 1997ರಲ್ಲಿ ಉಡುಪಿ ಜಿಲ್ಲೆ ದ.ಕ. ಜಿಲ್ಲೆಯಿಂದ ಬೇರ್ಪಟ್ಟು ಹೊಸ ಜಿಲ್ಲೆಯಾಯಿತು. ಆಗ ಉಡುಪಿ, ಕುಂದಾಪುರ ಪೂರ್ಣ ತಾಲೂಕು ಮತ್ತು ಮೂಡುಬಿದಿರೆ ಭಾಗವನ್ನು ದ.ಕ. ಜಿಲ್ಲೆಗೆ ಸೇರಿಸಿ ಉಳಿದ ಕಾರ್ಕಳ ತಾಲೂಕನ್ನು ಉಡುಪಿ ಜಿಲ್ಲೆಗೆ ಸೇರಿಸಲಾಯಿತು.

 

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next