Advertisement

ಡೆಂಗ್ಯೂ ನಿಯಂತ್ರಣಕ್ಕೆ ಲಾರ್ವಾ ಸರ್ವೆ ಆರಂಭ

11:15 PM May 16, 2020 | Sriram |

ವಿಶೇಷ ವರದಿ- ಮಂಗಳೂರು:ಕೆಲವು ದಿನಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಕೋವಿಡ್-19 ರೋಗದ ನಡುವೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಡೆಂಗ್ಯೂ ಜ್ವರದ ಮುನ್ನೆಚ್ಚರಿಕೆ ಕ್ರಮವಾಗಿ ದ.ಕ. ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯು ಲಾರ್ವಾ ಸರ್ವೆ ಆರಂಭಿಸಿದೆ.

Advertisement

ಜಿಲ್ಲೆಯಲ್ಲಿ ಕಳೆದ ವರ್ಷ ಸುಮಾರು 13 ಮಂದಿ ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದರು. ಈ ವರ್ಷ ಕೂಡ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಾಗಿದ್ದು, ಜನವರಿಯಿಂದ ಇಲ್ಲಿಯವರೆಗೆ ಸುಮಾರು 60 ಮಂದಿ ಡೆಂಗ್ಯೂ ಜ್ವರಕ್ಕೆ ತುತ್ತಾಗಿದ್ದಾರೆ.ಅದರಲ್ಲೂ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಪ್ರದೇಶದಲ್ಲಿ 7 ಮಂದಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ಗಂಭೀರವಾಗಿ ಪರಿಗಣಿಸಿದ ಆರೋಗ್ಯ ಇಲಾಖೆಯು ಮನೆ ಮನೆ ಭೇಟಿ ಹಮ್ಮಿಕೊಂಡಿದೆ.

ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಪ್ರತ್ಯೇಕ ತಂಡ ರಚಿಸಿದ್ದು ಆಶಾ ಕಾರ್ಯಕರ್ತೆಯರು ಮತ್ತು ಕಿರಿಯ ಆರೋಗ್ಯ ಸಹಾಯಕರು ಮನೆಗಳಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಡೆಂಗ್ಯೂ, ಮಲೇರಿಯಾ ಮತ್ತು ಕೊರೊನಾ ರೋಗದ ಬಗ್ಗೆ ಮನೆಮಂದಿಗೆ ಅರಿವು ಮೂಡಿಸಲಿದ್ದಾರೆ. ಜಿಲ್ಲೆಯಲ್ಲಿ ಶೇ. 50ರಷ್ಟು ಮನೆಗಳನ್ನು ಈಗಾಗಲೇ ಸಂಪರ್ಕಿಸಿದ್ದು, ವರ್ಷವಿಡೀ ಈ ಅಭಿಯಾನ ಮುಂದುವರಿಯಲಿದೆ.

ಜಿಲ್ಲೆಯಲ್ಲಿ ಸದ್ಯ 250ಕ್ಕೂ ಹೆಚ್ಚು ಕಾಮಗಾರಿ ನಡೆಯುತ್ತಿರುವ ಕಟ್ಟಡಗಳಿದ್ದು, ಮಳೆಗಾಲದಲ್ಲಿ ನೀರು ನಿಂತರೆ ಡೆಂಗ್ಯೂ ಸಹಿತ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಬಹುದು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮತ್ತು ಪಾಲಿಕೆ ವ್ಯಾಪ್ತಿಯಲ್ಲಿ ಪ್ರತ್ಯೇಕ ತಂಡ ರಚಿಸಲಾಗಿದೆ. ಈ ತಂಡ ಕಟ್ಟಡ ನಿರ್ಮಾಣ ಮತ್ತು ಅರ್ಧಕ್ಕೆ ನಿಂತ ಕಟ್ಟಡ ನಿರ್ಮಾಣ ಪ್ರದೇಶಗಳಿಗೆ ಭೇಟಿ ನೀಡಿ ಲಾರ್ವಾ ಉತ್ಪತ್ತಿ ಸೊಳ್ಳೆಗಳ ನಿರ್ಮೂಲನೆಗೆ ಬೇಕಾದ ಮುಂಜಾಗ್ರತೆ ಕ್ರಮ ಕೈಗೊಳ್ಳಲಿದೆ.

ಕಳೆದ ವರ್ಷ ಡೆಂಗ್ಯೂ ತೀವ್ರತೆ ಹೆಚ್ಚು
ಕಳೆದ ವರ್ಷ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರಕ್ಕೆ ಸುಮಾರು 13ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಕೆಲ ವರ್ಷಗಳಲ್ಲಿ ಮೊದಲ ಬಾರಿಗೆ ಇಷ್ಟೊಂದು ಸಂಖ್ಯೆಯಲ್ಲಿ ಡೆಂಗ್ಯೂವಿನಂಥ ಜ್ವರ ಬಾಧೆಯಿಂದ ಸಾವು ಸಂಭವಿಸಿತ್ತು. 2018ರಲ್ಲಿ ಸುಮಾರು ಏಳು ಮಂದಿ ಡೆಂಗ್ಯೂ ಜ್ವರ ಬಾಧೆಗೊಳಗಾಗಿ ಮೃತಪಟ್ಟಿದ್ದರು. ಕಳೆದ ತಿಂಗಳು ಉಳ್ಳಾಲ ಬಳಿ ಯುವತಿಯೊಬ್ಬಳು ಡೆಂಗ್ಯೂ ಜ್ವರಕ್ಕೆ ಮೃತಪಟ್ಟಿದ್ದರು.

Advertisement

ಮುನ್ನೆಚ್ಚರಿಕೆ ಕ್ರಮ ಅಗತ್ಯ
-ಸೀನುವಾಗ, ಕೆಮ್ಮುವಾಗ ಕರವಸ್ತ್ರಗಳನ್ನು ಮುಖಕ್ಕೆ ಅಡ್ಡಲಾಗಿ ಇಡಬೇಕು.
-ಮನೆಯ ಸುತ್ತ, ತಾರಸಿಯಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು.
-ಟಯರ್‌, ತೆಂಗಿನ ಚಿಪ್ಪು ಸಹಿತ ಇನ್ನಿತರ ತ್ಯಾಜ್ಯ ಸಮರ್ಪಕ ವಿಲೇವಾರಿ ಮಾಡಬೇಕು.
-ನೀರು ಶೇಖರಣೆ ಟ್ಯಾಂಕ್‌ ಮುಚ್ಚಳ ಹಾಕಬೇಕು.
-ಕಟ್ಟಡ ನಿರ್ಮಾಣ ತಾಣದಲ್ಲಿ ನೀರು ನಿಲ್ಲಲು ಅವಕಾಶ ನೀಡಬಾರದು.
– ಬಾವಿ, ಕೆರೆಗಳಲ್ಲಿ ಗಪ್ಪಿ ಮೀನು ಸಾಕಿ ಸೊಳ್ಳೆ ಉತ್ಪತ್ತಿ ತಡೆಯಬಹುದು.
-ಒಡೆದ ಪ್ಲಾಸ್ಟಿಕ್‌ ಬಕೆಟ್‌, ಪಾತ್ರೆಗಳನ್ನು ಕವುಚಿ ಹಾಕಬೇಕು.

ಅರಿವು ಮೂಡಿಸುವ ಕಾರ್ಯ
ಸಾಂಕ್ರಾಮಿಕ ರೋಗ ನಿರ್ಮೂಲನೆಯಲ್ಲಿ ಸಾರ್ವಜನಿಕರ ಪಾತ್ರವೂ ಮುಖ್ಯ. ಜಿಲ್ಲೆಯಲ್ಲಿ ಡೆಂಗ್ಯೂ ರೋಗ ನಿಯಂತ್ರಣದಲ್ಲಿದೆ. ಡೆಂಗ್ಯೂ ನಿರ್ಮೂಲನೆ ದೃಷ್ಟಿಯಿಂದ ಜಿಲ್ಲೆಯಲ್ಲಿ ಲಾರ್ವಾ ಸರ್ವೆ ಆರಂಭವಾಗಿದೆ. ಈಗಾಗಲೇ ಶೇ.50ರಷ್ಟು ಮನೆಗಳಿಗೆ ಭೇಟಿ ನೀಡಿ ಅರಿವು ಮೂಡಿಸಲಾಗಿದೆ.
– ಡಾ| ನವೀನ್‌ಚಂದ್ರ ಕುಲಾಲ್‌, ಜಿಲ್ಲಾ ಮಲೇರಿಯಾ, ಡೆಂಗ್ಯೂ ನಿಯಂತ್ರಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next