Advertisement

ಮತದಾರ ದೇಶದ ಪ್ರಗತಿಯ ಹರಿಕಾರ

12:37 PM Jan 19, 2017 | |

ದಾವಣಗೆರೆ: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಉತ್ತಮ ನಾಯಕರ ಆಯ್ಕೆ ಮೂಲಕ ಅತ್ಯುತ್ತಮ ರಾಷ್ಟ್ರ ನಿರ್ಮಿಸುವ ಸದಾವಕಾಶ ಮತದಾರರಿಗೆ ಇದೆ ಎಂದು ಜಿಲ್ಲಾಧಿಕಾರಿ ಡಿ. ಎಸ್‌. ರಮೇಶ್‌ ತಿಳಿಸಿದ್ದಾರೆ. 7ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಬುಧವಾರ ಶ್ರೀ ಸಿದ್ದಗಂಗಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಯುವ ಮತ್ತು ಭಾವಿ ಮತದಾರರ ಸಬಲೀಕರಣ… ಎಂಬ ಧ್ಯೇಯ ವಾಕ್ಯದಡಿ ಹಮ್ಮಿಕೊಳ್ಳಲಾಗಿದ್ದ ಪ್ರತಿ ಕ್ರಿಯಾತ್ಮಕ ಶಾಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಸಮಾಜದ ದಿನನಿತ್ಯದ ಆಗುಹೋಗು, ವಿದ್ಯಮಾನ ಅರಿವು ಎಲ್ಲ ಯುವರಿಕರಿಗೂ ಅವಶ್ಯ ಹಾಗೂ ಅದಕ್ಕೆ ಪ್ರತಿಕ್ರಿಯೆ ತೋರಿಸುವ ಬದ್ಧತೆ ಇರಬೇಕು ಎಂದರು. ಸಮಾಜದಲ್ಲಿ ಯುವಜನತೆ ಸೇರಿದಂತೆ ಎಲ್ಲರ ಪಾತ್ರ ಮುಖ್ಯ. ಸಾಮಾಜಿಕತೆ, ಆರ್ಥಿಕತೆ ಮುಖ್ಯವಾಗಿ ಆಡಳಿತ ಸೇರಿದಂತೆ ದೇಶದ ಏಳಿಗೆ ಯುವಜನತೆ ಮೇಲೆ ಅವಲಂಬಿತವಾಗಿದೆ. 

ಹೇಗೆಂದರೆ ಯುವ ಜನತೆ ಚುನಾವಣೆ, ಆಡಳಿತ ಇತ್ಯಾದಿ ಕುರಿತು ಜ್ಞಾನ ಹೊಂದಿ ಉತ್ತಮ ನಾಯಕರನ್ನು ಆಯ್ಕೆ ಮಾಡಿ ಕಳುಹಿಸಿದಲ್ಲಿ, ಸಂಸತ್ತು, ವಿಧಾನ ಸಭೆಯಲ್ಲಿ ಉತ್ತಮ ಶಾಸನ ರೂಪುಗೊಳ್ಳಲು ಸಾಧ್ಯ. 2008 ರ ರಾಜಸ್ಥಾನದ ವಿಧಾನ ಸಭಾ ಚುನಾವಣೆಯಲ್ಲಿ ಒಂದು ಮತದ ಅಂತರದಿಂದ ಅಭ್ಯರ್ಥಿಯೋರ್ವರು ಸೋತ ಉದಾಹರಣೆಯೊಂದಿಗೆ ಒಂದು ಮತ ಕೂಡ ಪ್ರಮುಖ ಎಂಬುದನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. 

ಭಾವಿ ಮತದಾರರಾದ ಯುವ ಜನಾಂಗ, ವಿದ್ಯಾರ್ಥಿಗಳು ಚುನಾವಣೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಅರಿತು, ತಮ್ಮ ಮನೆಯವರು, ಸುತ್ತಮುತ್ತಲಿನವರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು. ಭಾರತದಲ್ಲಿ 85 ಕೋಟಿ ಮತದಾರರು, 70 ಲಕ್ಷದಷ್ಟು ಮತಗಟ್ಟೆ ಅಧಿಕಾರಿಗಳಿದ್ದಾರೆ, 9 ಲಕ್ಷಕ್ಕಿಂತಲೂ ಹೆಚ್ಚು ಮತಗಟ್ಟೆಗಳಿವೆ. ಇಷ್ಟು ದೊಡ್ಡ ಮಟ್ಟದ ಮತದಾನ ಪ್ರಕ್ರಿಯೆಯ ತಾವು ತಿಳಿಯುವ ಜೊತೆಗೆ ಇತರರಿಗೂ ತಿಳಿಸುವ ಕೆಲಸ ಮಾಡಬೇಕು. 

ಉತ್ತಮ ನಾಯಕರನ್ನು ಆರಿಸುವ ಅವಕಾಶ ಮತ್ತು ಜವಾಬ್ದಾರಿ ಮತದಾರರ ಮೇಲಿದೆ ಎಂದು ತಿಳಿಸಿದರು. ಚುನಾವಣಾ ತಹಶೀಲ್ದಾರ್‌ ಎಸ್‌. ಎ. ಪ್ರಸಾದ್‌ ಪಿಪಿಟಿ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ಮತದಾರರಾಗಿ ನೊಂದಾಯಿಸಿಕೊಳ್ಳುವ ಹಾಗೂ ಮತ ಚಲಾಯಿಸುವ ಬಗ್ಗೆ ವಿವರಿಸಿ ಮಾತನಾಡಿ, ಪ್ರತಿ ವರ್ಷ ಜನವರಿ 1 ಕ್ಕೆ 18 ವರ್ಷ ತುಂಬುವ ಪ್ರತಿಯೊಬ್ಬರೂ ನಮೂನೆ-6 ಅರ್ಜಿ ತುಂಬಿ, 

Advertisement

ಅರ್ಜಿಯೊಂದಿಗೆ ವಾಸ, ಜನ್ಮ ದಿನಾಂಕ ದೃಢೀಕರಣ ಮತ್ತು ಭಾವಚಿತ್ರ ನೀಡಿ ಸಮೀಪದ ಮತಗಟ್ಟೆಯ ಬಿಎಲ್‌ಓ ಅಥವಾ ನಗರ ವ್ಯಾಪ್ತಿಯಲ್ಲಾದರೆ ನಗರಪಾಲಿಕೆ ಅಥವಾ ತಹಶೀಲ್ದಾರ್‌ ಕಚೇರಿಯಲ್ಲಿ ಸಲ್ಲಿಸಬಹುದು ಎಂದು ತಿಳಿಸಿದರು. ಅರ್ಜಿದಾರರು ಭಾರತ ಚುನಾವಣಾ ಆಯೋಗದ ವೆಬ್‌ಸೈಟ್‌ www.Nvsp. in ನಮೂನೆ-6 ರ ಅರ್ಜಿಯಲ್ಲಿ ಅಗತ್ಯ ಮಾಹಿತಿ ಮತ್ತು ದಾಖಲಾತಿಗಳನ್ನು ಅಪ್‌ ಲೋಡ್‌ ಮಾಡುವ ಮೂಲಕವೂ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಬಹುದು. 

ಸೇರ್ಪಡೆಗೊಂಡ ತಮ್ಮ ಹೆಸರನ್ನು // eci.nic.in ರಲ್ಲಿ ಪರಿಶೀಲಿಸಬಹುದು. ಹೊಸದಾಗಿ  ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದವರಿಗೆ ಉಚಿತವಾಗಿ ಮತದಾರರ ಗುರುತಿನ ಚೀಟಿ ನೀಡಲಾಗುತ್ತದೆ. ಹೀಗೆ ಗುರುತಿನ ಚೀಟಿ ಪಡೆದು ಮತದಾರರ  ಪಟ್ಟಿಯಲ್ಲಿ ಹೆಸರು ಹೊಂದಿದ್ದಲ್ಲಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಹಕ್ಕು ಉಳ್ಳವರಾಗುತ್ತಾರೆ ಎಂದು ತಿಳಿಸಿದರು.

ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸ,  ಭಾವಚಿತ್ರ ಬದಲಾವಣೆಗಳಂತಹ ತಿದ್ದುಪಡಿಗೆ ನಮೂನೆ-8, ಮರಣ, ಗೈರು, ವರ್ಗಾವಣೆ, ಹೆಸರು ಒಂದಕ್ಕಿಂತ ಹೆಚ್ಚುಕಡೆ ಇರುವುದನ್ನು  ಸರಿಪಡಿಸಲು ನಮೂನೆ-7, ಮತದಾರ ಇರುವ ಕ್ಷೇತ್ರದಲ್ಲೇ ವಿಳಾಸ ಬದಲಾವಣೆಗೆ 8ಎ, ಕ್ಷೇತ್ರ ಬದಲಾವಣೆಗೆ ನಮೂನೆ 6ಅನ್ನು ಬಳಸಿ ಸರಿಪಡಿಸಿಕೊಳ್ಳಬಹುದು ಎಂದು  ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಪ್ರಸಾದ್‌ ಎಸ್‌. ಬಂಗೇರಾ ಸ್ವಾಗತಿಸಿದರು. ಜಿಲ್ಲಾಧಿಕಾರಿ ರಮೇಶ್‌ ವಿದ್ಯಾರ್ಥಿಗಳೊಂದಿಗೆ ಮತದಾರರ ಸಬಲೀಕರಣ ಕುರಿತು ಸಂವಾದ ನಡೆಸಿದರು.   

Advertisement

Udayavani is now on Telegram. Click here to join our channel and stay updated with the latest news.

Next