ಇಳಕಲ್ಲ: ಮದುವೆ ಹಾಗೂ ಇತರೆ ಕೆಲವೊಂದು ಸಮಾರಂಭಗಳಲ್ಲಿ ಅಜಾಗರೂಕತೆ ತೋರಿದ ಪರಿಣಾಮ ಜಿಲ್ಲೆಯಲ್ಲಿ ಇಂದು ಕೋವಿಡ್ ಕೆನ್ನಾಲಿಗೆ ಚಾಚಿದೆ. ಆದ್ದರಿಂದ ಎಲ್ಲರೂ ಕೋವಿಡ್ ರೋಗ ನಿಯಂತ್ರಿಸಲು ಪಣ ತೊಡಬೇಕು ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ| ರಾಜೇಂದ್ರ ಹೇಳಿದರು.
ಶ್ರೀ ವಿಜಯಮಹಾಂತೇಶ ಅನುಭವ ಮಂಟಪದಲ್ಲಿ ಇಳಕಲ್ಲ ತಾಲೂಕಾಡಳಿತ ಹಾಗೂ ನಗರಸಭೆ ಸಹಯೋಗದಲ್ಲಿ ಕೋವಿಡ್-19 ನಿಯಂತ್ರಣ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಕೋವಿಡ್ ನಿಯಂತ್ರಣದಲ್ಲಿ ನಮ್ಮ ಸಂಪೂರ್ಣ ಬೆಂಬಲವಿದೆ. ಇನ್ನು ಮುಂದೆ ಯಾವುದೇ ಸಮಾರಂಭ- ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳುವಂತೆ ತಾಕೀತು ಮಾಡಬೇಕು. ಇಲ್ಲದಿದ್ದರೇ ದಂಡ ವಿಧಿಸಬೇಕು. ರೋಗದ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಕೊಡಿಸಬೇಕು ಎಂದು ಸಲಹೆ ನೀಡಿದರು.
ಇನ್ನು ಮುಂದೆ ನಿಮ್ಮ ಊರಿಗೆ ನೀವೇ ಎಸಿ- ಡಿಸಿಗಳು ಎಂದು ಕಾರ್ಯಕರ್ತೆಯರಿಗೆ ಸ್ಥೈರ್ಯ ತುಂಬಿದ ಜಿಲ್ಲಾಧಿಕಾರಿಗಳು ಆಶಾ- ಅಂಗನವಾಡಿ ಕಾರ್ಯಕರ್ತೆಯರ ಶ್ರಮದಿಂದ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸುವಲ್ಲಿ ಸಾಧ್ಯವಾಗಿದೆ ಎಂದ ಅವರು ಧನ್ಯವಾದ ತಿಳಿಸಿದರು.
ಜಿಪಂ ಸಿಇಒ ಗಂಗೂಬಾಯಿ ಮಾನಕರ ಮಾತನಾಡಿ, ಕೋವಿಡ್ ನಿಯಂತ್ರಣಕ್ಕಾಗಿ ಶ್ರಮಿಸಿದ ಕೋವಿಡ್ ವಾರಿಯರ್ಸ್ ಗಳಿಗೆ ಅಭಿನಂದನೆ ತಿಳಿಸಿ ಇನ್ನೆರಡು ತಿಂಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುವುದಾಗಿ ತಜ್ಞರು ಸಲಹೆ ನೀಡಿದ್ದು, ಇದಕ್ಕೆ ಎಲ್ಲರ ಸಹಕಾರ ಅವಶ್ಯ ಎಂದ ಅವರು, ಇದಕ್ಕೂ ಪೂಲ್ಲಿ ಪ್ರತಿಯೊಬ್ಬರೂ ಆರೋಗ್ಯ ಸೇತು ಆ್ಯಪ್ ಹಾಕಿಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಈ ವೇಳೆ ಬಾಗಲಕೋಟೆ ಉಪವಿಭಾಗಾಧಿಕಾರಿ ಎಂ. ಗಂಗಪ್ಪ, ಡಿಎಚ್‌ಒ ಡಾ| ಅನಂತ ದೇಸಾಯಿ, ಇಒಟಿಪಿ ಸಿ.ಬಿ. ಮ್ಯಾಗೇರಿ, ಟಿಎಚ್‌ಒ ಪ್ರಶಾಂತ ತುಂಬಗಿ, ನಗರಸಭೆ ಪೌರಾಯುಕ್ತ ಜಗದೀಶ ಹುಲಗೆಜ್ಜಿ, ಸಿಪಿಐ ಅಯ್ಯನಗೌಡ ಪಾಟೀಲ ಇತರರು ಇದ್ದರು.