ಯಾದಗಿರಿ: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಏ.22ರಿಂದ ಮೇ 18ರ ವರೆಗೆ ನಡೆಯಲಿದ್ದು, 17 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 95 ಪಪೂ ಕಾಲೇಜುಗಳನ್ನು ಒಳಗೊಂಡಂತೆ 10,428 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್. ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದ್ವಿತೀಯ ಪಿಯು ಪರೀಕ್ಷೆ ಸಿದ್ಧತೆ ಕುರಿತಂತೆ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಪರೀಕ್ಷಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಪರೀಕ್ಷಾ ನಿಯಮಾವಳಿಗಳಂತೆ ಕಾರ್ಯನಿರ್ವಹಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿಯ ಮಾಹಿತಿಗಳನ್ನು ಚಿತ್ರೀಕರಿಸುವುದು, ಚಿತ್ರೀಕರಿಸಲು ಪ್ರಯತ್ನಿಸುವುದು ಮತ್ತು ಸಮೂಹ ಮಾಧ್ಯಮ, ಜಾಲತಾಣಗಳಲ್ಲಿ ಹರಿದಾಡುವಂತೆ ಮಾಡುವುದು ಅಪರಾಧವಾಗಿರುತ್ತದೆ. ಒಂದು ವೇಳೆ ಇಂತಹ ಕೃತ್ಯ ಕಂಡುಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಪರೀಕ್ಷಾ ಕೇಂದ್ರಗಳಲ್ಲಿ ವಾಟರ್ ಬಾಯ್‌ಗಳ ನೇಮಕ ರದ್ದುಪಡಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆಯನ್ನು ಕೊಠಡಿಗಳ ಅಂತರದಲ್ಲಿ ಕೊಠಡಿಯ ಹೊರಗೆ ವ್ಯವಸ್ಥೆ ಮಾಡಬೇಕು ಎಂದರು.
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಫೋನ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಕೇಂದ್ರದ ಮುಖ್ಯ ಅಧಿಕ್ಷಕರು “ಬೆಸಿಕ್ ಸೆಟ್’ ಫೋನ್ ಮಾತ್ರ ಬಳಸಬಹುದು. ಆದರೆ ಸ್ಮಾರ್ಟ್‌ಫೋನ್ ತರುವುದು ನಿಷೇಧಿಸಿದೆ ಎಂದು ಸೂಚಿಸಿದರು.
ಪರೀಕ್ಷಾ ಗೌಪ್ಯ ಕಾರ್ಯಗಳಿಗೆ ಬಳಸಲಾಗುವ ವಾಹನಗಳಿಗೆ ಪರೀಕ್ಷೆ ಮುಂಚಿತವಾಗಿ ಜಿ.ಪಿ.ಎಸ್ ಅಳವಡಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಕಾಂತ ಹಿಳ್ಳಿ, ಜಿಲ್ಲಾ ಖಜಾನೆ ಅಧಿಕಾರಿ ಮಾಲಿಂಗರಾಯ ಬಿ., ಪರೀಕ್ಷಾ ಕೇಂದ್ರದ ಮುಖ್ಯ ಅಧಿಧೀಕ್ಷಕರು ಮತ್ತು ಕಾಲೇಜಿನ ಉಪನ್ಯಾಸಕರು, ಜಿಲ್ಲೆಯ ಶಿಕ್ಷಣಾಧಿಕಾರಿಗಳು, ತಹಶೀಲ್ದಾರರು, ಪೊಲೀಸ್ ಸಿಬ್ಬಂದಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.