Advertisement

ಸೇವೆ ಆರಂಭದ ಹುಮ್ಮಸ್ಸು ನಿವೃತ್ತಿವರೆಗೂ ಇರಲಿ

06:24 PM Mar 18, 2021 | Team Udayavani |

ಕಲಬುರಗಿ: ಸೇವೆಗೆ ಪಾದಾರ್ಪಣೆ ಹುಮ್ಮಸ್ಸು ಸೇವೆಯುದ್ದಕೂ ಇರಲಿ. ಬಹು ಮುಖ್ಯವಾಗಿ ನೀವು ನಿಮ್ಮದೆ ಆದ ಪರಿಣಿತಿ ಬೆಳೆಸಿಕೊಳ್ಳುವ ಮೂಲಕ ಪೊಲೀಸ್‌ ಠಾಣೆಯಲ್ಲಿ ನಿಮ್ಮದೇ ಆದ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದು ಐಜಿ ಮತ್ತು ನಗರ ಪೊಲೀಸ್‌ ಆಯುಕ್ತ ಎನ್‌.ಸತೀಶಕುಮಾರ ಕರೆ ನೀಡಿದರು.

Advertisement

ನಗರದ ಪೊಲೀಸ್‌ ಮೈದಾನದಲ್ಲಿ ಬುಧವಾರ ಜಿಲ್ಲಾ ಪೊಲೀಸ್‌ ಇಲಾಖೆಯ ತಾತ್ಕಾಲಿಕ ಪೊಲೀಸ್‌ ತರಬೇತಿ ಶಾಲೆಯಲ್ಲಿ ಬುನಾದಿ ತರಬೇತಿ ಪೂರ್ಣಗೊಳಿಸಿದ 19ನೇ ತಂಡದ ನಾಗರಿಕ ಪೊಲೀಸ್‌ ಕಾನ್‌ಸ್ಟೆಬಲ್‌ಗ‌ಳ ನಿರ್ಗಮನ ಪಥ ಸಂಚಲನ ಸಮಾರಂಭದಲ್ಲಿ ಗೌರವ ವಂದನೆ ಸ್ವೀಕರಿಸಿ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ದಕ್ಷತೆ, ಶಿಸ್ತು ಮತ್ತು ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಇಲಾಖೆಯ ಕೀರ್ತಿ ಹೆಚ್ಚಿಸಿ ಮಾದರಿ ಪೊಲೀಸರು ಎಂದು ಜನಾಭಿಪ್ರಾಯ ಮೂಡುವಂತೆ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು. ಸಮಸ್ಯೆ ಹೊತ್ತುಕೊಂಡು ಬಂದವರಿಗೆ ಸ್ಪಂದಿಸಿ, ಅವರ ನೋವು ಆಲಿಸಿ ಪರಿಹರಿಸಲು ಪ್ರಾಮಾಣಿಕ ಪ್ರಯತ್ನಿಸಿ. ಅದರಿಂದ ನಿಮ್ಮ ಮತ್ತು ಇಲಾಖೆ ಗೌರವ ಹೆಚ್ಚುತ್ತದೆ. ಒಟ್ಟಾರೆ ಎಲ್ಲ ಪೊಲೀಸರಲ್ಲಿ ನೀವು ಒಬ್ಬರಾಗಿ ಇರಬೇಡಿ. ಸ್ಮಾರ್ಟ್‌ ಆಗಿ ಯೋಚಿಸಿ, ಹಾಗೆ ಕೆಲಸ ಮಾಡಿ
ಎಂದರು.

ಸಾಮಾಜಿಕ ಜಾಲ ತಾಣಗಳ ಬಗ್ಗೆ ಅರಿವು ಇಟ್ಟುಕೊಂಡು ಪರಿಸ್ಥಿತಿ ಅರಿತು ಉತ್ತಮವಾಗಿ ಕೆಲಸ ಮಾಡಬೇಕು. ಸರ್ಕಾರ ನಿಮಗೆ ಎಲ್ಲ ಸೌಕರ್ಯ ಕಲ್ಪಿಸುತ್ತದೆ. ಪ್ರಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವುದರ ಜತೆಗೆ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳಿ. ಮಕ್ಕಳು ಮತ್ತು ಮನೆಯ ಕಾಳಜಿ ವಹಿಸಿ ಎಂದು ಸಲಹೆ ನೀಡಿದರು.

ತಾತ್ಕಾಲಿಕ ತರಬೇತಿ ಶಾಲೆ ಪ್ರಾಚಾರ್ಯರು ಆಗಿರುವ ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ ವರದಿ ವಾಚನ ಮಾಡಿ, ಜಿಲ್ಲಾ ಪೊಲೀಸ್ ಇಲಾಖೆಯ ತಾತ್ಕಾಲಿಕ ಪೊಲೀಸ್‌ ತರಬೇತಿ ಶಾಲೆಯಲ್ಲಿ ಇದುವರೆಗೂ 10 ನಾಗರಿಕ ಪೇದೆಗಳು, ಏಳು ಸಶಸ್ತ್ರ ಪೇದೆಗಳು, ಒಂದು ಕಾರಾಗೃಹ ವಾರ್ಡರ್‌ ತಂಡ, ಒಂದು ಮಹಿಳಾ ಪೊಲೀಸ್‌ ಕಾನ್‌ಸ್ಟೆàಬಲ್‌ ತಂಡ ಸೇರಿದಂತೆ ಒಟ್ಟು 2353 ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

Advertisement

ಎಸ್ಪಿ ಡಾ| ಸಿಮಿ ಮರಿಯಮ್ ಜಾರ್ಜ್‌, ನಾಗನಹಳ್ಳಿ ಪೊಲೀಸ್‌ ತರಬೇತಿ ಮಹಾವಿದ್ಯಾಲಯ ಪ್ರಾಚಾರ್ಯ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಉಪ ಪ್ರಾಚಾರ್ಯರಾದ ಅರುಣ ರಂಗರಾಜನ್‌, ಎಸಿಬಿ ಎಸ್ಪಿ ಮಹೇಶ ಮೇಘಣ್ಣನವರ, ಕೆಎಸ್ ಆರ್‌ಪಿ ಕಮಾಂಡೆಂಟ್‌ ಬಸವರಾಜ ಜಿಳ್ಳೆ, ಎಫ್ಎಸ್‌ಎಲ್‌ ಉಪ ನಿರ್ದೇಶಕ ಪ್ರವೀಣ ಸಂಗನಾಳಮಠ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next