ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಈ ಭಾಗದ ಏಳು ಜಿಲ್ಲೆಗಳ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಅನುದಾನ ನೀಡಬೇಕೆಂದು ಆಗ್ರಹಿಸಿ ಫೆ.9ರಂದು ನಗರದ ಮಂಡಳಿಯ ಕಚೇರಿ ಎದುರು “ಅನುದಾನಕ್ಕಾಗಿ ಭಿಕ್ಷಾಟನೆ’ ಎನ್ನುವ ಉದ್ಘೋಷದೊಂದಿಗೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ವಿಭಾಗೀಯ ಅಧ್ಯಕ್ಷ ಸುನೀಲ ಹುಡಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ಈ ಭಾಗದ ಶೈಕ್ಷಣಿಕ, ಔದ್ಯೋಗಿಕ ಅಭಿವೃದ್ಧಿಗಾಗಿ 371 (ಜೆ)ನೇ ಕಲಂನಡಿ ಕೆಕೆಆರ್‌ಡಿಬಿಗೆ ಕೋಟ್ಯಂತರ ರೂ. ಅನುದಾನ ಬರುತ್ತದೆ. ಆದರೆ, ಏಳು ವರ್ಷ ಕಳೆದರೂ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಮಕ್ಕಳಿಗೆ ಬಿಡಿಗಾಸಿನ ಸಹಾಯವೂ ಕೆಕೆಆರ್‌ಡಿಬಿಯಿಂದ ದೊರೆತಿಲ್ಲ. ಆದ್ದರಿಂದ ಸಂಕಷ್ಟದಲ್ಲಿ ಸಿಲುಕಿರುವ ಖಾಸಗಿ ಶಾಲೆಗಳಿಗೆ ಅನುದಾನ ನೀಡಬೇಕೆಂದು ಒತ್ತಾಯಿಸಿ ಹೋರಾಟ ನಡೆಯಲಿದೆ ಎಂದರು.
ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದಿಂದ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಲಾಗುವುದು. ಈ ಭಾಗದ ಎಲ್ಲ ಜಿಲ್ಲೆಗಳಿಂದ ಸುಮಾರು ಐದು ಸಾವಿರ ಶಾಲಾ ಆಡಳಿತಮಂಡಳಿಯವರು ಮತ್ತು ಸಿಬ್ಬಂದಿ ಪಾಲ್ಗೊಳ್ಳುವರು ಎಂದು ಹೇಳಿದರು. ಈ ಭಾಗದ ಶೈಕ್ಷಣಿಕ ಪ್ರಗತಿಗೆ ಕೇವಲ ಸರ್ಕಾರಿ ಶಾಲೆಗಳಿಗೆ ವಿಶೇಷ ಅನುದಾನ ನೀಡಿದರೆ ಸಾಲದು, ಖಾಸಗಿ ಶಾಲೆಗಳಿಗೂ ಅನುದಾನ ಕಲ್ಪಿಸಬೇಕು. ನಮಗೆಪ್ರತ್ಯೇಕವಾದ ಅನುದಾನ ಬೇಕಾಗಿಲ್ಲ.
ಪ್ರತಿ ವರ್ಷ ಖರ್ಚಾಗದೇ ಉಳಿಯುವ ಅನುದಾನದಲ್ಲಿ ಪಾಲು ನೀಡಬೇಕು. ಇದರಿಂದ ಸಂಕಷ್ಟದಲ್ಲಿರುವ ಖಾಸಗಿ ಶಾಲೆಗಳಿಗೆ ಆರ್ಥಿಕ ಬಲ ತುಂಬಿದಂತೆ ಆಗುತ್ತದೆ. ಶೈಕ್ಷಣಿಕ ಅಭಿವೃದ್ಧಿಗೂ ಇದು ಸಹಕಾರಿಯಾಗಲಿದೆ ಎಂದರು. 1995ರಿಂದ 2015ರೊಳಗೆ ನೋಂದಣಿಯಾದ ಖಾಸಗಿ ಕನ್ನಡ ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸುವಂತೆ ಸರ್ಕಾರದ ಮುಂದೆ ಬೇಡಿಕೆ ಇಟ್ಟು, ಇದೇ ಬಜೆಟ್‌ನಲ್ಲಿ ಘೋಷಿಸಬೇಕೆಂದು ಒತ್ತಾಯಿಸಿದ್ದೇವೆ.
ಇದನ್ನೂ ಓದಿ:ಉಲ್ಲಾಸ್ ಯುವ ಕಾಂಗ್ರೆಸ್·ಗೆ ಅಧ್ಯಕ
ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಫೆ.15ರ ವರೆಗೆ ಸರ್ಕಾರಕ್ಕೆ ಗಡುವು ನೀಡಿದ್ದೇವೆ. ಅಷ್ಟರೊಳಗೆ ಸ್ಪಂದಿಸದಿದ್ದರೆ ಶಾಲೆಗಳನ್ನು ಮುಚ್ಚುವ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡಿದ್ದೇವೆ ಎಂದು ವಿವರಿಸಿದರು. ಜತೆಗೆ ಸರ್ಕಾರದ ನವೋದಯ ಮತ್ತು ಸೈನಿಕ ಶಾಲೆಗಳಲ್ಲಿ ಈ ಭಾಗದ ಮಕ್ಕಳಿಗೆ ಶೇ.10ರಷ್ಟು ಮೀಸಲಾತಿ ನೀಡಬೇಕು. ಕೇಂದ್ರ ಸರ್ಕಾರ ಮತ್ತೆ 100 ಸೈನಿಕ ಶಾಲೆಗಳನ್ನು ಘೋಷಿಸಿದ್ದು, ಇದರಲ್ಲಿ ಒಂದನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸ್ಥಾಪಿಸಬೇಕೆಂದು ಒತ್ತಾಯಿಸಿದರು. ಒಕ್ಕೂಟದ ಪದಾಧಿಕಾರಿಗಳಾದ ಅರುಣಕುಮಾರ ಪೋಚಾಲ, ಚನ್ನಬಸಪ್ಪ ಗಾರಂಪಳ್ಳಿ. ಶಾಹೀದ್ ಹುಸೇನ್ ತಹಶೀಲ್ದಾರ್ ಇದ್ದರು.