Advertisement

ಯೌವನದ ಹೊಳೆಯಲ್ಲಿ ಈಜುವ ಮುನ್ನ…

06:01 PM May 03, 2017 | |

ಮಗಳೇ,
ನಿನ್ನೆ ರಾತ್ರಿ ದೂರವಾಣಿಯಲ್ಲಿ ನೀನು ಹೇಳಿದ ಮಾತು ಕೇಳಿ ದಿಗ್ಭ್ರಮೆಗೊಂಡೆ. ಆದರೆ ಆಗಲೇ ನಿನಗೆ ಉತ್ತರಿಸಲಾಗಲಿಲ್ಲ.
ಹೇಳಬೇಕಾದ ಎಷ್ಟೋ ಮಾತುಗಳು ನಾಲಗೆಗೆ ಬರದೆ ತಡವರಿಸಿದವು. ಹೀಗಾಗಿ ಅದನ್ನು ಪತ್ರ ರೂಪದಲ್ಲೇ ಬರೆದರೆ ನಿನ್ನ ಬಳಿ ಒಂದು ದಾಖಲೆಯಾಗಿ ಉಳಿಯುತ್ತದೆ.  ಎಂದಾದರೂ ಒಂದು ದಿನ ಅದನ್ನು ಮತ್ತೆ ಓದಿದಾಗ ಅಮ್ಮ ಹೇಳಿದ ಮಾತುಗಳು 
ಎಷ್ಟು ಸತ್ಯ ಅಲ್ಲವೆ ಎಂದು ನಿನಗನಿಸಿದರೂ ಅನಿಸಬಹುದು ಎನ್ನಿಸಿತು. ತಾಳ್ಮೆಯಿದ್ದರೆ ಬರೆದುದನ್ನು ವ್ಯವಧಾನದಿಂದ ಓದು. 
ನೀನೇನು ಹೇಳಿದೆ ಮಗಳೇ? “ಅಮ್ಮ, ನಾನು ಮತ್ತು ಸಂದೀಪ್‌ ಪ್ರೀತಿಸುತ್ತಿದ್ದೇವೆ. ಒಂದಾಗಿ ಬಾಳುವುದು ಅಂತ ನಿರ್ಧರಿಸಿದ್ದೇವೆ. ಮಡಿ, ಮೈಲಿಗೆ ಅಂತ ಯಾವಾಗಲೂ ಒದ್ದಾಡುವ ನೀನು, ಸಂಪ್ರದಾಯದ ಹೆಸರಿನಲ್ಲಿ ಚಾಚೂ ತಪ್ಪದೇ ಇದ್ದರೂ ಕೋಪದಿಂದ ಸಿಡಿದೇಳುವ ಅಪ್ಪ. ಇಬ್ಬರೂ ಇದಕ್ಕಾಗಿ ನನ್ನ ಮೇಲೆ ಮುನಿಸು ತಾಳುತ್ತೀರಿ ಅಂತ ನನಗೆ ಗೊತ್ತು. ಹಿಡಿ ಶಾಪವನ್ನೂ ಹಾಕುತ್ತೀರಿ ಅಂತಲೂ ಬಲ್ಲೆ. ಆದರೆ ನನ್ನದು ಅಚಲ ನಿರ್ಧಾರ. ನಿಮಗೆ ಕೋಪ ಯಾಕೆ ಅಂದರೆ ಸಂದೀಪ್‌ ಒಬ್ಬ ಬಸ್‌ ಕಂಡಕ್ಟರ್‌. ನಾನು ಇಂಜಿನಿಯರಿಂಗ್‌ ಕಡೆಯ ವರ್ಷದ ವಿದ್ಯಾರ್ಥಿನಿ. ಅದೂ ಅಲ್ಲದೆ, ಅವನಿಗೂ ನನಗೂ ಆಹಾರಕ್ರಮದಲ್ಲಿ ವ್ಯತ್ಯಾಸವಿದೆ, ಜಾತಿ ಒಂದೇ ಅಲ್ಲ ಅಂತ ನೀವು ಆರೋಪಿಸುತ್ತೀರಿ ಎಂದು ನನಗೂ ಗೊತ್ತಿದೆ. ಒಟ್ಟಾಗಿ ಬದುಕುವುದಕ್ಕೆ ಹೃದಯಗಳು ಹಾತೊರೆಯುತ್ತಿರುವಾಗ
ಇವೆಲ್ಲವೂ ಗೌಣವಲ್ಲವೆ ಅಮ್ಮ? ಇಷ್ಟಕ್ಕೂ ನಾನು ಸ್ವಂತ ನಿರ್ಧಾರ ತೆಗೆದುಕೊಳ್ಳುವಷ್ಟು ಪ್ರಬುದ್ಧಳಾಗಿದ್ದೇನೆ. ನನ್ನ ಭವಿಷ್ಯವನ್ನು ನಿರ್ಧರಿಸಲು ಸಮರ್ಥಳಿದ್ದೇನೆ ಎಂದು ನಿಮಗೆ ಗೊತ್ತು’ ಅಂತ ಹೇಳಿದ್ದೆಯಲ್ಲವೆ…? ಸಂತೋಷ ಮಗಳೇ… ನೀನು  ಪ್ರಬುದ್ಧಳಾಗಬೇಕೆಂಬುದೇ ನಮ್ಮ ಇಚ್ಛೆ. ಅಪ್ಪನಿಗೆ ಕೋಪ ಅಂದೆಯಲ್ಲ… ಎಂದಾದರೂ ನಿನಗೆ ಅಪ್ಪಒಂದೇಟು ಹೊಡೆದದ್ದುಂಟೇ? ಒಂದು ಸಲ ನಿನ್ನ ಯಾವುದೋ ತಪ್ಪಿಗೆ ತಾಳ್ಮೆ ಕಳೆದುಕೊಂಡು ನಾನು ಎರಡೇಟು ಹೊಡೆದುದಕ್ಕೆ, ಅಪ್ಪಅಳುತ್ತಿದ್ದ ನಿನ್ನನ್ನು ಬರಸೆಳೆದುಕೊಂಡರು.

Advertisement

“ಇದೇ ಮೊದಲು, ಇದೇ ಕೊನೆ. ಇನ್ನೊಮ್ಮೆ ಮಗಳ ಮೇಲೆ ನೀನು ಕೈ ಮಾಡಿದರೆ ನಾನು ಕ್ಷಮಿಸುವುದಿಲ್ಲ’ ಎಂದು ನನಗೆ ತಾಕೀತು ಮಾಡಿದ್ದರು. ನಿನ್ನಲ್ಲಿ ಮುನಿಸಿನಿಂದ ನಾನು ಮಾತನಾಡಿದರೂ ಅಪ್ಪ ಸಹಿಸುತ್ತಿರಲಿಲ್ಲ. ಯಾಕೆಂದರೆ ಒಬ್ಬಳೇ ಮಗಳ ಮೇಲೆ ಅವರು ಜೀವವಿರಿಸಿಕೊಂಡಿದ್ದರು ಎಂಬುದು ನಿನಗೆ ತಿಳಿಯಲಿಲ್ಲವೇ? ನಿನ್ನ ಅಪ್ಪ ಕಲಿತದ್ದು ಎರಡನೆಯ ತರಗತಿ. ನಾನೂ ಅಷ್ಟೇ. ಕಷ್ಟದಲ್ಲಿ ಓದು, ಬರಹ ಕಲಿತವಳು. ಆದರೆ ನಮ್ಮ ಮಗಳು ನಮ್ಮಂತಾಗಬಾರದು. ಹಟ್ಟಿಯ ಸೆಗಣಿ ಬಾಚಬಾರದು. ಯಾರದೋ ಮನೆಯ ಚಾಕರಿಗೆ ಹೋಗಬಾರದು. ಇನ್ನೊಬ್ಬರ ಲೆಕ್ಕ ಬರೆಯುವ ಬದಲು ತನ್ನ ಲೆಕ್ಕ ತಾನೇ ಬರೆಯಬೇಕು ಅನ್ನುವ ಮಾತನ್ನು ಅಪ್ಪಹೇಳುತ್ತಲೇ ಇದ್ದರು, ನೆನಪಿದೆಯಾ? ಅಪ್ಪ, ಬೇರೆಯವರ ಮನೆಯ ಸಮಾರಂಭಗಳಿಗೆ ಅಡುಗೆ ಮಾಡಲು ಹೋಗುತ್ತಿದ್ದರು. ಬೆವರಿಳಿಸಿ ದುಡಿದ ಪರಿಶ್ರಮಕ್ಕೆ ಬಂದ ಸಂಬಳವನ್ನು ಹಾಗೆಯೇ ಮನೆಗೆ ತರುತ್ತಿದ್ದರು. ಅಪ್ಪ ತೊಡುತ್ತಿದ್ದ ಮಾಸಿದ ಅಂಗಿಯನ್ನು ನೀನು ಮರೆತಿಲ್ಲವಷ್ಟೆ? ನೀನೇ ತಮಾಷೆ ಮಾಡಿದ್ದೆ: “ನನ್ನ ಬಳಿ ಎಷ್ಟೊಂದು ಉಡುಗೆಗಳಿವೆ. ಆದರೆ ಈ ಅಪ್ಪನಿಗೆ, ಮದುವೆಗೂ ಸಂತೆಗೂ ಹೋಗಲು ಇರುವುದು ಒಂದೇ ಅಂಗಿ’ ಅಂತ. ಅವರೂ ನಿನ್ನಂತೆ ದಿನಕ್ಕೆರಡು ಬಟ್ಟೆ ಹಾಕುತ್ತಿದ್ದರೆ ನಿನಗೆ ಇಂಜಿನಿಯರಿಂಗ್‌ ಓದಲು ಹಣ ಇರುತ್ತಿರಲಿಲ್ಲ ಅಲ್ಲವೆ? “ನನಗೆ ಇಂಜಿನಿಯರಿಂಗ್‌ ಮಾಡಲು ಆಶೆಯಿದೆ. ಆದರೆ ಬಡವಳಾಗಿ ಹುಟ್ಟಿದ್ದು ನನ್ನ ಕರ್ಮ. ಒಂದು ಶಾಲೆಯ ಟೀಚರ್‌ ಆದರೆ ಅದೇ ಪುಣ್ಯ’ ಎಂದು ನೀನು ನಿರಾಶೆಯಲ್ಲಿ ಹೇಳಿದಾಗ ಅಪ್ಪ ಏನು ಹೇಳಿದ್ದರು ಗೊತ್ತಾ? “ನನ್ನ ಉಸಿರೊಂದಿದ್ದರೆ ಯಾರ ಕೈ ಕಾಲು ಹಿಡಿದಾದರೂ ನಿನಗೆ ಇಂಜಿನಿಯರಿಂಗ್‌ ಮಾಡಿಸುತ್ತೇನೆ, ಅನುಮಾನವೇ ಬೇಡ. ಅಮ್ಮನಿಗೊಂದು ಕುತ್ತಿಗೆ ಸರ ತೆಗೆಯಬೇಕೆಂದು ಸ್ವಲ್ಪ ಹಣ ಕೂಡಿಟ್ಟಿದ್ದೆ. 

ಅವಳು, ಜೀವನದಲ್ಲಿ ಕೆಂಪು ಪಟ್ಟೆನೂಲಿನಲ್ಲಿ ಕಟ್ಟಿದ ಮಂಗಲಸೂತ್ರ ಬಿಟ್ಟರೆ ಬಂಗಾರದ ಮುಖ ನೋಡಿದವಳಲ್ಲ. ಹಾಗೆಯೇ ಸ್ವಂತ
ಮನೆ ಮಾಡಬೇಕೆಂದು ಒಂದು ಸೈಟು ತೆಗೆದುಕೊಂಡಿದ್ದೇನಲ್ಲ, ರಸ್ತೆ ಪಕ್ಕದ ಸೈಟು? ಆವಾಗಿನಿಂದ ಅಂಗಡಿ ಶೆಟ್ರಿಗೆ ಅದರ
ಮೇಲೆ ಕಣ್ಣು ಬಿದ್ದಿದೆ. ಮಾರಾಟ ಮಾಡುತ್ತೀರಾದರೆ ನನಗೇ ಕೊಡಿ ಅಂತ ಕೇಳುತ್ತಾ ಇದ್ದಾರೆ. ಸೈಟನ್ನು ಅವರಿಗೇ ಕೊಡುತ್ತೇನೆ.
ಅಮ್ಮನ ಸರದ ಹಣವನ್ನೂ ಉಪಯೋಗಿಸುತ್ತೇನೆ. ನಮಗೆ ನಿನ್ನ ಸುಖವೇ ಮುಖ್ಯ’ ಅಂತ ಹೇಳಿದ್ದುದು ನಿನ್ನ ಬಳಿಯೇ ತಾನೆ…
ನಿನಗೆ ದೂರದ ಊರಿನಲ್ಲಿ ಸೀಟು ಸಿಕ್ಕಿದಾಗ ಅಲ್ಲಿ ಬರುವ ಹೆಚ್ಚುವರಿ ಖರ್ಚು ವೆಚ್ಚಗಳ ಬಗ್ಗೆ ತಲೆ ಕೆಡಿಸಿಕೊಂಡವಳು 
ನೀನು. ಆಗಲೂ ಅಪ್ಪ ಸಮಾಧಾನ ಹೇಳಿದ್ದರು. “ಚಿಂತಿಸಬೇಡ.

ಏನಾದರೂ ಏರ್ಪಾಟು ಮಾಡುತ್ತೇನೆ’ ಅಂತ. ಹಗಲು ಬೇರೆಯವರ ಮನೆಗಳಿಗೆ ಅಡುಗೆಗೆ ಹೋದರು. ಸಂಜೆ ಮನೆಗೆ ಬಂದ ಮೇಲೂ ಹಾಯಾಗಿ ಮಲಗಲಿಲ್ಲ. ಬೇಕರಿಗಳಿಗೆ ಬೇಕಾಗುವ ಸಿಹಿ ತಿಂಡಿಗಳನ್ನು ನಾವಿಬ್ಬರೂ ರಾತ್ರಿಯಿಡೀ ಕುಳಿತು ಮಾಡಿ ಮುಗಿಸುವಾಗ ಬೆಳಗಿನ ಕೋಳಿ ಕೂಗುತ್ತಿತ್ತು. ಹಾಗೆ ಸಿಕ್ಕಿದ ಹಣದ ಒಂದೊಂದು ಪೈಸೆಯೂ ನಿನ್ನ ಬ್ಯಾಂಕ್‌ ಖಾತೆಗೆ ಜಮಾ ಆಗುತ್ತಿತ್ತೆಂಬುದು ನಿನಗೆ ಗೊತ್ತಿತ್ತು ಅಂತ ಬಾವಿಸುತ್ತೇನೆ. ನೀನು ಸ್ನೇಹಿತ, ಸ್ನೇಹಿತೆಯರ ಜೊತೆಗೂಡಿ ಯಾವ್ಯಾವುದೋ ಊರಿಗೆ ಪಿಕ್ನಿಕ್‌ ಹೋದೆ, ಅಲ್ಲಿ
ಖರ್ಚು ಮಾಡಿದೆ, ಪರ್ವತಗಳನ್ನು ಏರಿದೆ ಎಲ್ಲವನ್ನೂ ಹೇಳುತ್ತಿದ್ದೆಯಲ್ಲ. ಅದನ್ನು ಕೇಳಿ ನಾವು ಖುಷಿ ಪಡುತ್ತಿದ್ದೆವು ನಿಜ. ಆದರೆ ನಿನ್ನ ಸುಖ, ಸಂತೋಷಕ್ಕೆ ಈ ಜನ್ಮದಾತರು ಎಷ್ಟು ಶ್ರಮ ಪಡುತ್ತಿದ್ದರೆಂಬುದನ್ನು ಒಂದು ದಿನವಾದರೂ ಯೋಚಿಸಿದ್ದೀಯಾ ಮಗಳೇ? ಅಪ್ಪ
ಕಿಡ್ನಿ ಕಲ್ಲಿನಿಂದ ಬಳಲುತ್ತಿದ್ದವರು ಈ ತನಕ ಚಿಕಿತ್ಸೆ ಮಾಡಿಸಿಕೊಂಡಿಲ್ಲ. ನಿನಗಿದು ಕಡೆಯ ಸೆಮಿಸ್ಟರ್‌. ಇದೊಂದು ಮುಗಿದರೆ ಪದವಿ ಸಿಗುತ್ತದೆ.

ಈಗಾಗಲೇ ಕ್ಯಾಂಪಸ್‌ ಸಂದರ್ಶನದಲ್ಲಿ ಆಯ್ಕೆಯೂ ಆಗಿದ್ದೀಯಾ. ಕೈ ತುಂಬ ಸಂಬಳ ಬರುವ ನೌಕರಿಯೂ ನಿನಗಾಗಿ ಕಾದಿದೆ. “ನಾವಿಬ್ಬರೂ ಮದುವೆಯಾಗಿ ನಮ್ಮದೇ ಪುಟ್ಟ ಸಂಸಾರವನ್ನು ಕಟ್ಟಿಕೊಳ್ಳುತ್ತೇವೆ, ಗಂಡನಿಗೆ ಸಂಬಳ ಕಡಿಮೆಯಾದರೂ ನನಗಿರುವ
ಸಂಬಳದಲ್ಲಿ ಅವರನ್ನೂ ಸಾಕಬಲ್ಲೆ’ ಎಂದೆಲ್ಲಾ ಹೇಳಿಕೊಂಡಿದ್ದೀ. ಸಂತೋಷ ಮಗಳೇ. ನಿನ್ನ ದುಡಿಮೆಯ ಹಣ ನಮಗೆ ಖಂಡಿತ ಬೇಡ. ಆದರೆ ನಿನಗೊಂದು ಜನ್ಮ ನೀಡಿ, ನಿನ್ನ ಬದುಕು ನೀನಂದುಕೊಂಡ ಹಾದಿಯಲ್ಲಿಯೇ ಮುನ್ನಡೆಯುವಂತೆ ಅದಕ್ಕೊಂದು ರೂಪುರೇಷೆ ನೀಡಲು ನಾವಿಬ್ಬರೂ ಹಗಲಿರುಳೂ ಶ್ರಮಿಸಿದ್ದೇವೆ ಅಂತ ನಾವು ಭಾವಿಸಿದ್ದೇವೆ. ನೀನು ಅದನ್ನು ಎಷ್ಟರಮಟ್ಟಿಗೆ ಅರ್ಥ ಮಾಡಿಕೊಂಡಿದ್ದೀ ಎಂದು ಗೊತ್ತಿಲ್ಲ. ಹೀಗಿದ್ದರೂ ನೀನು ನಿತ್ಯ ಸಂಚರಿಸುವ ಒಂದು ಬಸ್ಸಿನ ನಿರ್ವಾಹಕನನ್ನೇ ಬಾಳ ಸಂಗಾತಿಯಾಗಿ ಆರಿಸಿಕೊಳ್ಳುವುದಾಗಿ ನಿರ್ಧಾರ ತೆಗೆದುಕೊಂಡಿರುವೆ. ಅವನನ್ನು ನೀನೆಷ್ಟು ಅರ್ಥ ಮಾಡಿಕೊಂಡಿರುವೆ ಎಂಬುದು ನಮಗೆ ತಿಳಿಯದು.
ಸಂಪ್ರದಾಯ, ಜಾತಿ, ಸಿರಿವಂತಿಕೆ ಈ ಯಾವ ಬಂಧನದಲ್ಲಿಯೂ ನಿನ್ನನ್ನು ಸಿಲುಕಿಸಲು ನನಗೆ ಇಷ್ಟವಿಲ್ಲ. ಆದರೆ ಪ್ರೀತಿಯ
ವಿಷಯದಲ್ಲಿ ನೀನು ವಯಸ್ಸಿನಲ್ಲಿ ಪ್ರಬುದ್ಧಳಾಗಿದ್ದರೂ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಮರ್ಥಳು ಅಂತ ನನಗನಿಸುವುದಿಲ್ಲ. ಇಂಥ ನಿರ್ಧಾರ ತೆಗೆದುಕೊಂಡು ದುಡುಕಿದ ಹಲವರ ಬಗೆಗೆ ನಿನಗೂ ಗೊತ್ತಿದೆ. ಮದುವೆಯಾಗಿ ಕೆಲವು ದಿನ ಸುಖವನ್ನು
ಸೂರೆಗೊಳ್ಳುವವರೆಗೂ ದಾಂಪತ್ಯದಲ್ಲಿ ಅನ್ಯೋನ್ಯವಿರುತ್ತದೆ. ಆದರೆ ಆಮೇಲೆ ಹಣದ ವಿಷಯದಲ್ಲಿ ತಕರಾರು
ಆರಂಭವಾಗುತ್ತದೆ. ಗಂಡ ಅನ್ನಿಸಿಕೊಂಡವನ ದೌರ್ಬಲ್ಯಗಳು, ಚಟಗಳು, ಪ್ರೇಮದಿಂದ ಕುರುಡಾದ ಕಣ್ಣುಗಳಿಗೆ ಗೊತ್ತಿರುವುದಿಲ್ಲ.
ಪೂರ್ತಿ ಕಣ್ತೆರೆದಾಗ ಇಡೀ ಜೀವನ ಹಾಳಾಗಿ ಹೋಗಿರುತ್ತದೆ. ಹೀಗಾಗಬಾರದು. ದುಡುಕಿ ನಿರ್ಧಾರಕ್ಕೆ ಬರಬೇಡ. ಒಂದು
ನಿರ್ಧಾರಕ್ಕೆ ಬರುವ ಮುನ್ನ ಹತ್ತು ಬಾರಿ ಯೋಚಿಸು. ನಿನ್ನ ಬದುಕಿನ ಪ್ರತಿಯೊಂದು ಹಂತದಲ್ಲಿ ನಿರ್ಧಾರ ಕೈಗೊಳ್ಳುವ 
ಮುನ್ನ ನಮ್ಮ ಸಲಹೆ ಕೇಳುತ್ತಿದ್ದೆಯಲ್ಲವೆ? ಈ ವಿಷಯದಲ್ಲಿ ಮಾತ್ರ ನಾವು ನಿನಗೆ ಬೇಡವಾದೆವೆ? ಹೇಳು ಮಗಳೇ… 
ನಿನ್ನ ಅಮ್ಮ

Advertisement

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next