Advertisement

UV Fusion: ಆಯಸ್ಸು ಅಳಿಯುವ ಮುನ್ನ

03:19 PM May 19, 2024 | Team Udayavani |

ಈ ಮೇಣದ ಬತ್ತಿಯನ್ನು ಮನುಷ್ಯನ ಜೀವನಕ್ಕೆ ಉತ್ತಮವಾದ ಉದಾಹರಣೆಯನ್ನಾಗಿ ಕೊಡಬಹುದು. ಮೇಣದ ಬತ್ತಿ ಹೇಗೆ ಕ್ಷಣದಿಂದ ಕ್ಷಣಕ್ಕೆ ಕರಗುತ್ತಾ ಹೋಗುತ್ತದೆಯೋ ಹಾಗೆ ಮನುಷ್ಯನ ಜೀವನವೂ ದಿನದಿಂದ ದಿನಕ್ಕೆ ಬದುಕುವ ಆಯಸ್ಸಿನಲ್ಲಿನ ದಿನಗಳು ಕ್ಷೀಣಿಸುತ್ತಲೇ ಹೋಗುತ್ತವೆ. ಆ ಮೇಣದಬತ್ತಿ ತನ್ನ ಆಯಸ್ಸು ಇನ್ನೇನು ಮುಗಿದು ಹೋಗುವುದೆಂದು ಗೊತ್ತಿದ್ದರೂ ಅದರ ಆಯಸ್ಸು ಇರುವವರೆಗೂ ಇತರರಿಗೆ ದೀಪವಾಗಿ ಬೆಳಕು ನೀಡಿ, ಮನುಷ್ಯನಿಗೂ ವಾಸ್ತವದಲ್ಲಿ ಬದುಕುವ ಅಂಶವನ್ನು ತಿಳಿಸುತ್ತದೆ.

Advertisement

ಇದನ್ನು ಅರಿಯದ ನಾವು ನಮ್ಮ ಆಯಸ್ಸು ಕಡಿಮೆ ಆಗಿದೆ ಎಂದು ನಮ್ಮನ್ನು ಎಚ್ಚರಿಸುವ ದಿನವದು ವರ್ಷಕ್ಕೊಮ್ಮೆ ಬಂದಾಗ ಹುಟ್ಟಿದ ದಿನವೆಂದು ಸಂಭ್ರಮಿಸುತ್ತೇವೆ. ಸಾವಿಗೆ ಹತ್ತಿರವಾಗುವುದನ್ನು ಇಷ್ಟೊಂದು ಸಂಭ್ರಮಿಸುವ ನಾವು ಖಾಯಿಲೆ ಬಂದಾಗ, ಅಪಘಾತವಾದಾಗ ಏಕೆ ಭಯ ಪಡುತ್ತೇವೆ?  ಸಾವೆಂದರೆ ಭಯ ಪಡುವವರು ನಾವೇ.

ಸಾವಿನ ದಿನ ಸಮೀಪಿಸುವುದನ್ನು ಸಂಭ್ರಮಿಸುವುದು ನಾವೇ. ಇದರಲ್ಲಿ ಯಾವುದು ಸತ್ಯ? ಯಾವುದು ಸುಳ್ಳು?  ಮನುಷ್ಯರಾಗಿ ಹುಟ್ಟಿ ಬಂದಿದ್ದೇವೆ. ಮುಂದಿನ ಜನ್ಮಗಳು ಇರುವುದು ನಿಜವೋ, ಸುಳ್ಳೋ ನಾನಂತೂ ಕಂಡಿಲ್ಲ. ನನ್ನ ತಾಯಿ ನನಗೆ ನೀಡಿದ ಭಿಕ್ಷೆಯೇ ನನಗೆ ಸಿಕ್ಕಿರುವ ಈ ಒಂದು ಜನ್ಮ. ನಾನು ಹುಟ್ಟಿ 26 ವರ್ಷವಾಗಿದೆ. ಇದುವರೆಗೂ ನನ್ನ ಕುಟುಂಬಕ್ಕೆ, ಸಮಾಜಕ್ಕೆ ನಾನು ಕೊಡುಗೆಯಾಗಿ ಏನು ಕೊಟ್ಟಿದ್ದೇನೆ ಎಂದು ಯೋಚಿಸಿದೆ. ಉತ್ತರ ಶೂನ್ಯ. ನನ್ನ ಸಾಧನೆ ಏನು ಎಂದು ಯೋಚಿಸಿದೆ. ಅದಕ್ಕೂ ಉತ್ತರವಿಲ್ಲ.

ಒಂದು ಮೇಣದಬತ್ತಿ ತನ್ನ ಜೀವಿತಾವಧಿವರೆಗೂ ಒಬ್ಬರಿಗೆ ಬೆಳಕಾಗಿತ್ತು ಅಂದ ಮೇಲೆ ಮನುಷ್ಯರಾದ ನಾವೇಕೆ ನಾಳೆ ಎಂಬ ಚಿಂತೆಯಲ್ಲಿ ಯಾರೊಬ್ಬರಿಗೂ ಸಹಾಯ ಮಾಡದೇ, ನಮ್ಮದೇ ಆದ ನೂರಾರು ಸಮಸ್ಯೆ, ತೊಳಲಾಟಗಳಲ್ಲಿ ಜೀವನ ಸಾಗಿಸುತ್ತಿದ್ದೇವೆ. ನಾವೇಕೆ ಈ ಮೇಣದ ಬತ್ತಿಯಂತೆ ನಮ್ಮ ಜೀವಿತಾವಧಿಯನ್ನು ಸಾರ್ಥಕಗೊಳಿಸಿಕೊಳ್ಳಬಾರದು?

ಒಮ್ಮೆ ಯೋಚಿಸಿ! ಆಯಸ್ಸು ಅಳಿಯುವ ಮುನ್ನವೇ, ಜೀವನದ ಸಾರ್ಥಕತೆ ಹೊಂದುವ ಕಾರ್ಯಗಳನ್ನು ಕೈಗೊಂಡು, ಸಮಾಜಮುಖೀ, ಪರಹಿತವಾಗಿರುವ ಕೆಲಸಗಳನ್ನು ಮಾಡೋಣ.

Advertisement

-ವಿದ್ಯಾ ಹೊಸಮನಿ

ಉಪನ್ಯಾಸಕಿ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next