ಶಹಾಬಾದ: ದೇಶದ ಸ್ಥಾನಮಾನ,ಐಕ್ಯತೆ, ಘನತೆ ಎತ್ತಿ ಹಿಡಿಯುವ ಕೆಲಸ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಇಂದಿನ ಯುವ ಪ್ರಜೆಗಳು ಮೌಲ್ಯಯುತ ಶಿಕ್ಷಣ ಪಡೆದು ಸದೃಢ ದೇಶ, ಸಮಾಜ ಕಟ್ಟಲು ಮುಂದಾಗೋಣ ಎಂದು ಡಿವೈಎಸ್‌ಪಿ ಕೆ.ಬಸವರಾಜ ಹೇಳಿದರು.
ನಗರದ ಎಂಸಿಸಿ ಆಂಗ್ಲ್ ಮಾಧ್ಯಮ ಶಾಲೆಯಿಂದ ಆಯೋಜಿಸಲಾಗಿದ್ದ ಕೋಮು ಸಾಮರಸ್ಯ ಹಾಗೂ ರಾಷ್ಟ್ರೀಯ ಏಕೀಕರಣ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನೂರಾರು ಜಾತಿ, ಧರ್ಮ ಹೊಂದಿದ್ದರೂ ನಾವೆಲ್ಲರೂ ಒಂದೇ ಎಂಬ ಭಾವನೆ ಎಲ್ಲರಲ್ಲೂ ಬರಬೇಕು. ಎಲ್ಲ ವ್ಯಕ್ತಿಗಳನ್ನು ಎಲ್ಲ ಕಾಲಕ್ಕೂ ಗೌರವಿಸಬೇಕು. ದೇಶ ಕಾಡುವ ಭ್ರಷ್ಟಾಚಾರ, ಅತ್ಯಾಚಾರ, ಜಾತೀಯತೆ ಮುಂತಾದವುಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮಗಳು ಉಂಟಾಗುತ್ತಿವೆ. ಇದರಿಂದ ಹೊರಬರಲು ವಿಫಲರಾಗುತ್ತಿದ್ದೇವೆ. ಈ ನಿಟ್ಟಿನಲ್ಲಿ ಯುವ ಜನರು ದೇಶದ ಐಕ್ಯತೆ ಕಾಪಾಡುವುದನ್ನು ಗಮನದಲ್ಲಿಟ್ಟಕೊಂಡು ನಾವು ಬೆಳೆಯಬೇಕು.
ದೇಶವನ್ನು ಶಾಂತಿ ರಾಷ್ಟ್ರವಾಗಿ ಬೆಳೆಸಬೇಕು. ದೇಶದ ಐಕ್ಯತೆ ಕಾಪಾಡಲು ಗಾಂಧಿಧೀಜಿ, ಡಾ| ಬಿ.ಆರ್. ಅಂಬೇಡ್ಕರ್ ಅವರಂತಹ ಅನೇಕರು ತಮ್ಮ ಪ್ರಾಣವನ್ನೇ ಬಲಿ ಕೊಟ್ಟಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ ಎಂದು ಹೇಳಿದರು.
ಸಿಪಿಐ ಕಪಿಲ್‌ದೇವ ಮಾತನಾಡಿ, ನಮ್ಮ ದೇಶದಲ್ಲಿ ವಿವಿಧ ಭಾಷೆಗಳು, ಧರ್ಮಗಳು ಇದ್ದರೂ ನಾವೆಲ್ಲರೂ ಒಂದೇ. ವಿವಿಧತೆಯಲ್ಲಿ ಏಕತೆ ಹೊಂದಿರುವ ನಮ್ಮ ದೇಶದಲ್ಲಿ ಇನ್ನೂ ಜಾತಿವಾದಿಗಳಿಂದ ಕಲುಷಿತ ವಾತಾವರಣ ಉಂಟಾಗುತ್ತಿದೆ. ಸಮಾಜದಲ್ಲಿ ಸಾಮರಸ್ಯ ಹಾಳಾಗುತ್ತಿದೆ. ಇದರಿಂದ ದೇಶದಲ್ಲಿ ದುಷ್ಟ ಶಕ್ತಿಗಳು ಬೆಳೆಯುತ್ತಿವೆ. ಇದಕ್ಕೆ ನಮ್ಮಲ್ಲಿಯ ರಾಷ್ಟ್ರಾಭಿಮಾನ, ದೇಶ ಭಕ್ತಿ ಕೊರತೆಯೇ ಕಾರಣ. ದೇಶವನ್ನು ಶಾಂತಿ, ಸಾಮರಸ್ಯದಿಂದ ಪ್ರಗತಿದತ್ತ ಕೊಂಡೋಯ್ಯಲು ಪಣ ತೊಡಬೇಕು ಎಂದು ಹೇಳಿದರು.
ಎಂಸಿಸಿ ಶಾಲೆ ಮುಖ್ಯಾಧಿಕಾರಿ ಸಿಸ್ಟರ್ ರೋಚನಾ, ಸಿಸ್ಟರ್ ಹೆಲೇನ್ ಮೇರಿ, ಪಿಎಸ್‌ಐ ಸುವರ್ಣಾ ಬಿರಾದಾರ, ದೈಹಿಕ ಶಿಕ್ಷಕರಾದ ಭಾಸ್ಕರ್, ನಾಗರಾಜ ದಂಡಾವತಿ, ಶಿಕ್ಷಕರಾದ ಅನಿತಾ ಕುಲಕರ್ಣಿ, ಮಾಸ್ಟರ್ ಸಾಲೋಮನ್, ಗೌಡಪ್ಪಗೌಡ, ಸಾಹೇಬಗೌಡ ಪಾಟೀಲ, ಸಬ್ರಿನಾ, ಅಂಜನಾ ಕಾರ್ಗಿ, ಭಾಗ್ಯಲಕ್ಷ್ಮೀ, ಮೇರಿ,ರಜನಿ, ಬಿಸ್ಮಿಲ್ಲಾ, ಪರಿಮಳ, ನಮ್ರತಾ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.