ಸ್ಯಾಕ್ರಮೆಂಟೊ: ಸತತ ಮೂರು ವರ್ಷಗಳಿಂದ ಬರದಿಂದ ಬಳಲುತ್ತಿದ್ದ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಈ ವರ್ಷ ಉತ್ತಮ ಮಳೆಯಾಗಿದೆ. ಕ್ಯಾಲಿಫೋರ್ನಿಯಾದ 17 ಪ್ರಮುಖ ಜಲಾಶಯಗಳ ಪೈಕಿ 12 ಜಲಾಶಯಗಳು ತುಂಬಿವೆ.
ಕಳೆದ ಮೂರು ವರ್ಷಗಳಿಂದ ಕ್ಯಾಲಿಫೋರ್ನಿಯಾ ಅಕ್ಷರಶಃ ಬರಗಾಲದಿಂದ ತತ್ತರಿಸಿತ್ತು. ಫೋಲ್ಸಮ್ ಸರೋವರದಲ್ಲಿ ಹಡಗುಗಳು ಸ್ಥಗಿತಗೊಂಡಿತ್ತು. ಸರೋವರದ ನೀರು ಹರಿಯುತ್ತಿದ್ದ ಸ್ಥಳದಲ್ಲಿ ಕಾರುಗಳು ಚಲಿಸುತ್ತಿದ್ದವು.
ಆದರೆ, ಈ ವರ್ಷ ಕ್ಯಾಲಿಫೋರ್ನಿಯಾದಲ್ಲಿ ಒಳ್ಳೆಯ ಮಳೆಯಾಗಿವೆ. ರಾಜ್ಯದ ಉತ್ತರ ಭಾಗದಲ್ಲಿ ಸಾಧಾರಣದಿಂದ ಉತ್ತಮ ಮಳೆಯಾಗಿದೆ. ಕೆಲವೆಡೆ ಹಿಮ ಮಳೆ ಸುರಿದಿದೆ. ಇದರಿಂದ ಬರಿದಾಗಿದ್ದ ಜಲಾಶಯಗಳು ಮರುಪೂರಣಗೊಂಡಿವೆ.
ಕೆಲವು ತಿಂಗಳ ಹಿಂದೆ, ಕ್ಯಾಲಿಫೋರ್ನಿಯಾದಲ್ಲಿ ಹಿಮಪಾತ ಅಧಿಕವಾಗಿ, ಅನೇಕರು ವಸತಿರಹಿತರಾದರು. ಅಮೆರಿಕ ಸರ್ಕಾರ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವ ನಿಟ್ಟಿನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿತ್ತು.
ಪ್ರಸ್ತುತ, ಫೋಲ್ಸಮ್ ಜಲಾಶಯ ತುಂಬಿದೆ. ಒರೊವಿಲ್ಲೆ ಸರೋವರಕ್ಕೆ ಅಡ್ಡಲಾಗಿ ಕಟ್ಟಿರುವ ಅಮೆರಿಕದ ಎರಡನೇ ಅತಿ ದೊಡ್ಡ ಜಲಾಶಯ ತುಂಬಿದೆ. ಅದೇ ರೀತಿ ರಾಜ್ಯದ ಹಲವು ಸರೋವರಗಳಲ್ಲಿ ನೀರು ತುಂಬಿ ಹರಿಯುತ್ತಿದೆ.