Advertisement

ಬಲ್ಲವನೇ ಬಲ್ಲ ಈ ಬೇವು-ಬೆಲ್ಲ

09:59 AM Mar 28, 2020 | mahesh |

ಬದುಕಿನಲ್ಲಿ ಸಿಹಿ-ಕಹಿಗಳು ಸಮಾನವಾಗಿ ಬರಲಿ, ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುವ ಮನೋಭಾವ ಬೆಳೆಯಲಿ ಎಂಬುದರ ಸಂಕೇತವಾಗಿ ಯುಗಾದಿ ದಿನ, ಬೇವು-ಬೆಲ್ಲ ತಿನ್ನುತ್ತೇವೆ. ಆದರೆ, ಇವೆರಡರ ಮಹತ್ವ ಅಷ್ಟಕ್ಕೇ ಮುಗಿಯುವುದಿಲ್ಲ. ಬೇವು ಮತ್ತು ಬೆಲ್ಲದ ಸೇವನೆಯಿಂದ ಅದೆಷ್ಟೋ ಆರೋಗ್ಯ ಸಮಸ್ಯೆಗಳು ದೂರಾಗುತ್ತವೆ ಎನ್ನುತ್ತದೆ ಆಯುರ್ವೇದ.

Advertisement

ಬೆಲ್ಲದ ಮಹಿಮೆ ಬಲ್ಲಿರಾ?
-ಶೀತಕ್ಕೆ ಉಪಶಮನ
ಹಿಂದೆಲ್ಲಾ ಮನೆಗೆ ಬಂದವರಿಗೆ ನೀರಿನ ಜೊತೆಗೆ ಒಂದು ತುಂಡು ಬೆಲ್ಲ ನೀಡುವ ಪದ್ಧತಿಯಿತ್ತು. ಯಾಕಂದ್ರೆ, ತಣ್ಣೀರು ಕುಡಿದವರಿಗೆ ಶೀತವಾಗದಿರಲಿ ಎಂಬ ಕಾರಣಕ್ಕೆ. ಬೆಲ್ಲದ ಸೇವನೆಯಿಂದ ಶೀತವನ್ನು ಕಡಿಮೆ ಮಾಡಬಹುದು. ಬೆಲ್ಲವನ್ನು ನೀರಿನಲ್ಲಿ ಕುದಿಸಿ, ಅದಕ್ಕೆ ಶುಂಠಿ ರಸ ಸೇರಿಸಿ, ದಿನಕ್ಕೆ 2-3 ಬಾರಿ ಕುಡಿದರೆ ಶೀತ-ಕೆಮ್ಮು ಗುಣವಾಗುತ್ತದೆ.

-ಮುಟ್ಟಿನ ನೋವು
ಬಿಸಿ ಹಾಲಿನಲ್ಲಿ ಬೆಲ್ಲವನ್ನು ಕರಗಿಸಿ, ದಿನಕ್ಕೆ ಎರಡು ಬಾರಿ ಕುಡಿದರೆ, ಮುಟ್ಟಿನ ದಿನಗಳಲ್ಲಿ ನೋವು ಕಾಡುವುದಿಲ್ಲ. ಋತುಸ್ರಾವಕ್ಕೂ ಎರಡು ದಿನ ಮುಂಚೆಯಿಂದಲೇ ಇದನ್ನು ಕುಡಿಯುತ್ತಿದ್ದರೆ ಉತ್ತಮ.

-ಹೊಟ್ಟೆಯ ಸಮಸ್ಯೆಗೆ
ಊಟವಾದ ನಂತರ ಒಂದು ತುಣುಕು ಬೆಲ್ಲ ತಿಂದರೆ, ಅಜೀರ್ಣ, ಆ್ಯಸಿಡಿಟಿ, ಮಲಬದ್ಧತೆ ಮುಂತಾದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

-ಜ್ವರ, ಕೆಮ್ಮು, ಗಂಟಲುನೋವು
ತುಳಸಿ ಎಲೆಯ ರಸವನ್ನು ಬೆಲ್ಲದಲ್ಲಿ ಬೆರೆಸಿ, ದಿನಕ್ಕೆ ಮೂರು ಬಾರಿ ಒಂದು ಚಮಚ ಸೇವಿಸಿದರೆ ಕೆಮ್ಮು, ಗಂಟಲು ನೋವು ಉಪಶಮನಗೊಳ್ಳುತ್ತದೆ. ಈರುಳ್ಳಿಯನ್ನು ಸುಟ್ಟು, ಬೆಲ್ಲದ ಜೊತೆ ಸೇವಿಸಿದರೂ ಕೆಮ್ಮು, ಗಂಟಲುನೋವು ಕಡಿಮೆಯಾಗುತ್ತದೆ.

Advertisement

-ರಕ್ತಕ್ಕೆ ಒಳ್ಳೆಯದು
ಬೆಲ್ಲದಲ್ಲಿ ಕಬ್ಬಿಣಾಂಶ ಅಧಿಕವಾಗಿರುವುದರಿಂದ, ರಕ್ತಹೀನತೆಯುಳ್ಳವರು ಸೇವಿಸಿದರೆ ಉತ್ತಮ. ಅಷ್ಟೇ ಅಲ್ಲ, ರಕ್ತ ಶುದ್ಧಿಗೂ ಇದು ಸಹಕರಿಸುತ್ತದೆ.

ಬೇವು ಕಹಿ ಎನ್ನಬೇಡಿ
-ಚರ್ಮದ ಸಮಸ್ಯೆಗಳಿಗೆ
ಬೇವಿನ ಎಲೆ ಅಥವಾ ಬೇವಿನ ಸೊಪ್ಪಿನ ಕಷಾಯದ ಸೇವನೆಯಿಂದ ತುರಿಕೆ, ಕಜ್ಜಿ, ಮೊಡವೆ ಮುಂತಾದ ಚರ್ಮದ ಸಮಸ್ಯೆಗಳನ್ನು ತಡೆಯಬಹುದು.

-ರೋಗ ನಿರೋಧಕ ಶಕ್ತಿ
ಬೇವಿನ ಕಷಾಯವನ್ನು ನಿಯಮಿತವಾಗಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಬ್ಯಾಕ್ಟೀರಿಯಾ, ವೈರಸ್‌ನಿಂದ ಹರಡುವ ಸಾಂಕ್ರಾಮಿಕ ರೋಗಗಳು ಅತಿ ಸುಲಭದಲ್ಲಿ ದೇಹಕ್ಕೆ ಹಾನಿ ಮಾಡುವುದಿಲ್ಲ.

-ಬಾಯಿಯ ಸಮಸ್ಯೆಗಳಿಗೆ
ಬಾಯಿಯ ದುರ್ಗಂಧ, ಹುಳುಕು ಹಲ್ಲು, ಒಸಡಿನಲ್ಲಿ ರಕ್ತಸ್ರಾವ ಮುಂತಾದ ಬಾಯಿಯ ಸಮಸ್ಯೆಗಳಿಗೆ ಬೇವು ರಾಮಬಾಣ. ಬೇವಿನ ಕಷಾಯದಿಂದ ಬಾಯಿ ಮುಕ್ಕಳಿಸಿದರೆ, ಬೇವಿನ ಕಡ್ಡಿಯಿಂದ ಹಲ್ಲು ಉಜ್ಜಿದರೆ ಸಮಸ್ಯೆ ಶಮನವಾಗುತ್ತದೆ.

-ಹೊಟ್ಟೆಹುಳು ಶಮನ
ಪ್ರತಿನಿತ್ಯ ಎರಡೂರು ಬೇವಿನ ಎಲೆ ತಿಂದರೆ, ಹೊಟ್ಟೆಹುಳದ ಸಮಸ್ಯೆ ಕಾಡುವುದಿಲ್ಲ. ಅಷ್ಟೇ ಅಲ್ಲ, ಕರುಳು ಮತ್ತು ಜೀರ್ಣಾಂಗ ವ್ಯೂಹದ ಸೋಂಕು ತಡೆಯಲು, ಸಹಕಾರಿ.

Advertisement

Udayavani is now on Telegram. Click here to join our channel and stay updated with the latest news.

Next