Advertisement

ಬೀರಪ್ಪ ಸಾಧನೆ ನೋಡ್ರಪ್ಪ

02:18 PM May 13, 2017 | |

ಶಿಕ್ಷಕರು ಮನಸ್ಸು ಮಾಡಿದ್ರೆ ಕಲ್ಲಿನಂತಿರುವ ಮಕ್ಕಳ ಮನಸನ್ನು ಬೆಣ್ಣೆಯಂತೆ ಕರಗಿಸಿ ಉತ್ತಮ ಶಾಲೆಯನ್ನಾಗಿ ನಿರ್ಮಾಣ ಮಾಡಿ ಸಮಾಜಕ್ಕೆ ಪರಿಚಯಿಸುತ್ತಾರೆ ಎನ್ನುವುದಕ್ಕೆ ಬೀದರ್‌ ಜಿಲ್ಲೆ ಔರಾದದ ಎಕಲಾರ ಗ್ರಾಮದಲ್ಲಿನ ಸರ್ಕಾರಿ ಪ್ರೌಢಶಾಲೆಯ ಆಂಗ್ಲ ಶಿಕ್ಷಕ ಬೀರಪ್ಪ ಕಡ್ಲೀಮಟಿ 
ಅವರ ಕಾರ್ಯವೇ ಮಾದರಿ. 

Advertisement

ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳು ಕಲಿತರೆ ಫಲಿತಾಂಶ ಕುಸಿತವಾಗುತ್ತದೆ. ಅಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವುದಿಲ್ಲ ಎನ್ನುವುದನ್ನು ಇವರು ಸುಳ್ಳಾಗಿಸಿ ಖಾಸಗಿ ಶಾಲೆಯಲ್ಲಿನ ಮಕ್ಕಳು ಸರ್ಕಾರಿ ಶಾಲೆಗಳಿಗೆ ಸೇರುವಂತೆ ಮಾಡಿದ್ದಾರೆ.

2008ರ ಮುಂಚೆ ಔರಾದದ ಎಕಲಾರ ಗ್ರಾಮದಲ್ಲಿನ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕೇವಲ 37 ಇತ್ತು.  ಎಸ್ಸೆಸ್ಸೆಲ್ಸಿ ಫಲಿತಾಂಶವೂ ನಾಮಕಾವಾಸ್ತೆ ಎಂಬಂತೆ ಶೇ. 47 ಎಂದು ಶಿಕ್ಷಣ ಇಲಾಖೆ ಫಲಕದಲ್ಲಿ ರಾರಾಜಿಸುತ್ತಿತ್ತು. ನೂತನವಾಗಿ ಶಾಲೆಗೆ ಬಂದ ಶಿಕ್ಷಕ ಬೀರಪ್ಪ ಮಾಸ್ತರ್‌ ಅಲ್ಲಿನ ಅವ್ಯವಸ್ಥೆ ಸರಿಪಡಿಸಿ, ಮಕ್ಕಳಿಗೆ ವಿನೂತನ ಶೈಲಿಯಲ್ಲಿ ಬೋಧಿಸುವ ಮೂಲಕ ವರ್ಷದಿಂದ ವರ್ಷಕ್ಕೆ ಶಾಲೆಯ ಫಲಿತಾಂಶ ಸುಧಾರಿಸುವಂತೆ ಮಾಡಿದರು.  ಆನಂತರದ ಫ‌ಲಿತಾಂಶ ಪಟ್ಟಿ ನೋಡಿ.  2008ರಲ್ಲಿ ಶೇ. 47, 2009ರಲ್ಲಿ ಶೇ. 67, 2010ರಲ್ಲಿ ಶೇ. 85, 2011ರಿಂದ 2016ರ ವರೆಗೆ ಶೇ.100 ಫಲಿತಾಂಶ.  “ಈ ವರ್ಷ ಕೂಡ ಇಷ್ಟೇ ಫ‌ಲಿತಾಂಶ ನೋಡ್ರೀ’ ಅಂತಾರೆ ಬೀರಪ್ಪ. 

 ಇವರ ಫ‌ಲಿತಾಂಶದಿಂದಾಗಿ ಎಕಲಾರ ಶಾಲೆಯ ಸಾಧನೆ ಔರಾದ ಜಿಲ್ಲೆಯಲ್ಲಿರುವ ಪ್ರೌಢಶಾಲೆಗಳಿಗೆ ಮಾದರಿಯಾಗಿದೆ.  ಬೀರಪ್ಪ ಶಾಲೆಗೆ ಕಾಲಿಟ್ಟಾಗ ಅಂದರೆ 2008ರಲ್ಲಿ ವಿದ್ಯಾರ್ಥಿಗಳ ಸಂಖ್ಯೆ 37ಇದ್ದದ್ದು ಇದೀಗ 137 ಏರಿದೆ.  ಇಲ್ಲಿನ ಶಿಕ್ಷಕರ ಬೋಧನಾ ಪದ್ಧತಿ, ಮಕ್ಕಳ ಮೇಲಿನ ಕಾಳಜಿ ಕಂಡು ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಿಂದ ಕರೆತಂದು ಈ ಶಾಲೆಗೆ ದಾಖಲಾತಿ ಮಾಡಿಸುತ್ತಿದ್ದಾರೆ. 

ಬೀರಪ್ಪ ಏನು ಮಾಡಿದರು?
ಬೀರಪ್ಪ ಬಾಗಲಕೋಟೆ ಜಿಲ್ಲೆಯ ಸಂಗಾವಿಯವರು. ರೈತ ಕುಟುಂಬದ ಕುಡಿ.  ಎಂ.ಎ ಇಂಗ್ಲೀಷ್‌ ಪೂರೈಸಿ ಶಿಕ್ಷಕ ವೃತ್ತಿಗೆ ಬಂದರು.  ಎಕಲಾರ ಶಾಲೆ ಪರಿಸ್ಥಿತಿ ಹಾಗೂ ಮಕ್ಕಳ ಕಲಿಕೆ ಸ್ಥಿತಿ ನೋಡಿದಾಗ ಸ್ವಲ್ಪ ಆತಂಕವೇ ಆಯಿತಂತೆ.  ಅದಕ್ಕೆ  ನಿತ್ಯ ಬೆಳಗ್ಗೆ 8:00 ಗಂಟೆಯಿಂದ 9:30, ಸಂಜೆ 4:30ಗಂಟೆಯಿಂದ 6:00ಗಂಟೆ ವರೆಗೆ ಹೆಚ್ಚುವರಿ ತರಗತಿ ತೆಗೆದುಕೊಂಡು ಮಕ್ಕಳಿಗೆ ಬೋಧನೆ ಮಾಡಿದರು.  ಈ ಪರಿಶ್ರಮದ ಫಲವೇ ಶಾಲೆಯ ಫಲಿತಾಂಶ ಸುಧಾರಣೆಗೆ ಕಾರಣವಾಯ್ತು.   

Advertisement

ಇಷ್ಟೇ ಅಲ್ಲ, ಮಕ್ಕಳಿಗೆ ಕೇವಲ ಪಠ್ಯ ಬೋಧನೆ ಮಾತ್ರ ಸಿಮೀತಗೊಳಿಸದೆ ಕಥೆ, ಕಾದಂಬರಿ, ಸ್ವಂತ ನಾಟಕಗಳನ್ನು ಬರೆದು ಅವರನ್ನು ಪಾತ್ರದಲ್ಲಿ ತೊಡಗಿಸುವಂತೆ ಮಾಡಿದ್ದಾರೆ. ತಾಲೂಕು, ಜಿಲ್ಲಾ, ವಿಭಾಗ ಹಾಗೂ ರಾಜ್ಯ ಮಟ್ಟದಲ್ಲಿ ನಾಟಕಗಳನ್ನು ಪ್ರದರ್ಶಿಸಿ ಹಲವಾರು ಸನ್ಮಾನಗಳನ್ನು ಪಡೆದುಕೊಂಡಿದ್ದಾರೆ. ಮಕ್ಕಳಿಗೆ ಸಾಮಾಜಿಕ, ಧಾರ್ಮಿಕ ಹಾಗೂ ದೇಶದ ಇತಿಹಾಸ, ಪರಂಪರೆ ಪರಿಚಯಿಸುವ ನಿಟ್ಟಿನಲ್ಲಿ ಆರು ನಾಟಕಗಳನ್ನು ರಚಿಸಿದ್ದಾರೆ.  ಮಾದರಿ ಶಿಕ್ಷಕ ಎಂದರೆ ಇವರೇ ಅಲ್ಲವೇ?

ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next