Advertisement

ಕುಡಿವ ನೀರು-ರಸ್ತೆಗೆ ಮೊದಲ ಆದ್ಯತೆ

01:41 PM Feb 13, 2020 | Naveen |

ಬೀಳಗಿ: ಸಾರ್ವಜನಿಕ ಮೂಲಸೌಕರ್ಯಗಳಲ್ಲಿ ಕುಡಿವ ನೀರು ಮತ್ತು ರಸ್ತೆ ಪ್ರಮುಖ. ಮತಕ್ಷೇತ್ರದ ಪ್ರತಿ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಉತ್ತಮ ರಸ್ತೆಗಳ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಹನುಮಂತ ನಿರಾಣಿ ಹೇಳಿದರು.

Advertisement

ತಾಲೂಕಿನ ಅನಗವಾಡಿ ಗ್ರಾಮದಲ್ಲಿ ಎಸ್ಸಿ, ಎಸ್ಟಿ ಕಾಲೋನಿಯಲ್ಲಿ 40 ಲಕ್ಷ ವೆಚ್ಚದ ಕುಡಿಯುವ ನೀರು ಸರಬರಾಜು ಯೋಜನೆಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲೋನಿಯಲ್ಲಿನ ಜನತೆ ದೂರಿನಿಂದ ಹೊತ್ತು ನೀರು ತರುವ ಪರಿಸ್ಥಿತಿಯಿತ್ತು. ಇದನ್ನು ಗಮನಿಸಿಯೇ ಕುಡಿವ ನೀರು ಸರಬರಾಜು ಯೋಜನೆ ಹಾಕಿಕೊಳ್ಳಲಾಗಿದೆ. ಈ ಯೋಜನೆಯಿಂದ ಪ್ರತಿ ಮನೆಗಳಿಗೆ ನಳದ ಸಂಪರ್ಕದ ಜತೆಗೆ ನಳಗಳಿಗೆ ಮೀಟರ್‌ ಅಳವಡಿಕೆ ಮಾಡಲಾಗುವುದು. ಇನ್ನುಮುಂದೆ ನಿತ್ಯವೂ ಮನೆಗೆ ನೀರು ಸಿಗಲಿದೆ. ಅಲ್ಲದೆ, ಗ್ರಾಮದ ರಸ್ತೆಗಳು ಹಾಗೂ ಹೊಲದ ರಸ್ತೆಗಳು ಗುಣಮಟ್ಟದಿಂದ ಇದ್ದರೆ ರೈತರ ಕೃಷಿ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ರೈತರು ಬೆಳೆದ ಕಬ್ಬು ಸರಬರಾಜಿಗೆ ಉತ್ತಮ ರಸ್ತೆಗಳು ಅಗತ್ಯ. ಈ ನಿಟ್ಟಿನಲ್ಲಿ ವಿಶೇಷ ಕಾಳಜಿ ವಹಿಸಿ ಗ್ರಾಮದ ಹೊಲದ ರಸ್ತೆಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗಿದೆ. ಗ್ರಾಮಸ್ಥರು ಸರಕಾರದ ಯೋಜನೆಗಳ ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದರು.

ನಂತರ, ಅನಗವಾಡಿ ಗ್ರಾಮದ ಬಸವೇಶ್ವರ ದೇವಸ್ಥಾನ ಸಮುದಾಯ ಭವನ ಪೂರ್ಣಗೊಳಿಸುವ, ಗ್ರಾಮದ ವ್ಯಾಪ್ತಿಯ ರಸ್ತೆ ಸುಧಾರಣೆ, ಎನ್‌ಎಚ್‌ 218 ರಿಂದ ಬೂದಿಹಾಳ ಆರ್ಸಿ ರಸ್ತೆ ಸುಧಾರಣೆ ಸೇರಿದಂತೆ ಸುಮಾರು 35 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

ಗ್ರಾಪಂ ಅಧ್ಯಕ್ಷೆ ಗೀತಾ ಹೊಸಕೋಟಿ, ಉಪಾಧ್ಯಕ್ಷ ಎಂ.ಐ.ಮೇಟಿ, ತಾಪಂ ಸದಸ್ಯರಾದ ಮಿಥುನ್‌ ನಾಯಿಕ, ಸಾವಿತ್ರಿ ಹೊಸಮನಿ, ವಿಲಾಸ ರಾಠೊಡ, ಎಇ ಮಾರುತಿ ಹೊನಕೇರಿ, ಪಿಆರ್‌ಎ ಎಇಇ ಜಿ.ಎಚ್‌. ಅರಳಿಕಟ್ಟಿ, ಎಇ ಜಿ.ಆರ್‌.ದೇಶಪಾಂಡೆ, ಆರ್‌.ಎಚ್‌. ಮೇಟಿ, ರವಿ ಕುಂಚನೂರ, ಮುತ್ತಣ್ಣ ಅಂಗಡಿ, ರಜಾಕ್‌ ದಳವಾಯಿ, ಗುತ್ತಿಗೆದಾರ ಪುಂಡಲೀಕ ದಳವಾಯಿ, ಶಂಕರ ರಾಠೊಡ, ಮಹೇಶ ಮಾದರ, ಮಾರುದ್ರಯ್ಯ ಕಂಬಿ, ಫಕೀರಯ್ಯ ಮಠಪತಿ, ಹುಚ್ಚವ್ವ ಮಾದರ, ಗೌರವ್ವ ಮಾದರ, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next