ಕೋಟೇಶ್ವರ: ಬೀಜಾಡಿ ಗ್ರಾ.ಪಂ.ನ ವಿಶೇಷ ಗ್ರಾಮಸಭೆ ದೊಡ್ಡೋಣಿಯ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಮಾ. 18ರಂದು ನಡೆಯಿತು.
ಬಿಪಿಎಲ್ ಹಾಗೂ ಎಪಿಎಲ್ ಕಾರ್ಡುಗಳ ಅರ್ಜಿ ಸ್ವೀಕರಿಸಲಾಗಿದ್ದು ಈ ವರೆಗೆ ಸರ್ವೆ ನಡೆದಿಲ್ಲ ಎಂಬ ಬಗ್ಗೆ ಗ್ರಾ.ಪಂ. ಸದಸ್ಯ ರವೀಂದ್ರ ದೊಡ್ಮನೆ ಅವರು ಸಭೆಯ ಗಮನ ಸೆಳೆದಾಗ ನೂತನ ಪಿಡಿಒ ಅವರು ಆ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಬೀಜಾಡಿ ನಿವಾಸಿ ಚಂದ್ರ ಹಾಗೂ ಶ್ರೀನಿಧಿ ಭಟ್ ಅವರು ಶಿಕ್ಷಣಾಧಿಕಾರಿ ಸೀತಾರಾಮ ಶೆಟ್ಟಿ ಅವರನ್ನು ತರಾಟೆಗೆ ತೆಗೆದುಕೊಂಡು ಮಿತ್ರಸಂಗಮ ಸಂಘಟನೆ ಹಾಗೂ ಬೀಜಾಡಿ ಮೂಡು ಶಾಲೆಯ ಮುಖ್ಯ ಶಿಕ್ಷಕ ಪದ್ಮನಾಭ ಅಡಿಗ ಅವರ ನಡುವಿನ ದೂರಿನ ವಿಚಾರದ ಬಗ್ಗೆ ಕ್ರಮ ಕೈಗೊಳ್ಳದಿರುವುದರ ಬಗ್ಗೆ ಗಮನ ಸೆಳೆದಾಗ ನಡೆದ ಘಟನೆಯಲ್ಲಿನ ಪರ ವಿರೋಧ ಅಭಿಪ್ರಾಯವನ್ನು ಬದಿಗಿರಿಸಿ ಸೌಹಾರ್ದಯುತವಾಗಿ ಬಗೆಹರಿಸುವುದು ಸೂಕ್ತವೆಂದು ಸೀತಾರಾಮ ಶೆಟ್ಟಿ ಅವರು ಅಭಿಪ್ರಾಯಪಟ್ಟರು.
ಈ ವಿಚಾರದ ಬಗ್ಗೆ ಅಶೋಕ ಪೂಜಾರಿ ಮಾತನಾಡಿ ಕಳೆದ 3 ಗ್ರಾ.ಪಂ. ಸಭೆಯಲ್ಲಿ ಈ ಒಂದು ವಿಚಾರವು ಸುದೀರ್ಘ ಚರ್ಚೆಗೆ ಗ್ರಾಸವಾಗುತ್ತಿರುವುದು ಸೂಕ್ತವಲ್ಲ. ಶಿಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ಎರಡು ಕಡೆಯವರನ್ನು ಕರೆಯಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದರು.
ಗೋಪಾಡಿ ಗ್ರಾ.ಪಂ. ವ್ಯಾಪ್ತಿ ಯಲ್ಲಿರುವ ಸ.ಪ್ರಾ. ಆರೋಗ್ಯ ಉಪ ಕೇಂದ್ರ ವನ್ನು ಬೀಜಾಡಿಗೆ ವರ್ಗಾ ಯಿಸಬೇಕು. ಆ ಮೂಲಕ ಅದನ್ನು ಸದು ಪಯೋಗಪಡಿಸಬೇಕೆಂದು ಗ್ರಾಮಸ್ಥರು ಸಭೆಯಲ್ಲಿ ಆಗ್ರಹಿಸಿದರು. ಬೀಜಾಡಿ ಗ್ರಾ.ಪಂ. ಗೆ ಈವರೆಗೆ ಸ್ವಂತ ಕಟ್ಟಡ ಇಲ್ಲದಿರುವುದರ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿ ಶೀಘ್ರದಲ್ಲೇ ಬೀಜಾಡಿಯಲ್ಲೊಂದು ಸ್ವಂತ ಕಟ್ಟಡ ನಿರ್ಮಿಸಿ ಅಲ್ಲೇ ಗ್ರಾಮಸಭೆಯನ್ನು ಕರೆಯಬೇಕೆಂದರು.
ಸಭಾಧ್ಯಕ್ಷತೆಯನ್ನು ಬೀಜಾಡಿ ಗ್ರಾ.ಪಂ. ಅಧ್ಯಕ್ಷೆ ಸಾಕು ವಹಿಸಿದ್ದರು. ಉಪಾಧ್ಯಕ್ಷೆ ಜಯಂತಿ ಗಾಣಿಗ, ನೋಡಲ್ ಅದಿಕಾರಿ ಸುಕುಮಾರ ಶೆಟ್ಟಿ, ಜಿ.ಪಂ. ಸದಸ್ಯೆ ಶ್ರೀಲತಾ ಶೆಟ್ಟಿ, ತಾ.ಪಂ. ಸದಸ್ಯೆ ವೈಲೆಟ್ ಬೆರೆಟ್ಟೋ, ವಿ.ಎ. ಡೇನಿಯಲ್, ಬೀಜಾಡಿ ಗ್ರಾ.ಪಂ. ಸದಸ್ಯರು ಉಪಸ್ಥಿತ ರಿದ್ದರು. ಪಿಡಿಒ ಗಣೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.