Advertisement

ವಿಮಾನಯಾನ ಸಮೀಕ್ಷೆಗೆ ಸಿದ್ಧರಾಗಿ

11:55 AM Jan 15, 2020 | Naveen |

ಬೀದರ: ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಪಿಲ್‌ ಮೋಹನ್‌ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಗರದಲ್ಲಿ ಉದ್ದೇಶಿತ ವಿಮಾನ ನಿಲ್ದಾಣ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.

Advertisement

ವಿಮಾನ ನಿಲ್ದಾಣ ಆರಂಭಿಸಲು ಅತ್ಯವಶ್ಯಕವಿರುವ ಕೆಲಸಗಳನ್ನು ಬೇಗ ಪೂರ್ಣಗೊಳಿಸಿ, ವಿಮಾನಯಾನ ಪರೀಕ್ಷೆ ನಡೆಸಲು ಸಿದ್ಧರಾಗಬೇಕು. ಕುಡಿಯುವ ನೀರು ಪೂರೈಕೆ, ರಸ್ತೆ, ವಿದ್ಯುತ್‌ ಸಂಪರ್ಕ, ಇಂಟರ್‌ನೆಟ್‌ ಒದಗಿಸುವುದು, ತಾತ್ಕಾಲಿಕವಾಗಿ ರಕ್ಷಣಾ ಸಿಬ್ಬಂದಿ ನಿಯೋಜಿಸುವುದು ಹೀಗೆ ಅವಶ್ಯಕವಿರುವ ಸೌಲಭ್ಯ ಒದಗಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬೀದರ ವಿಮಾನ ನಿಲ್ದಾಣ ಆರಂಭವಾದ ನಂತರ ಕೇವಲ ವಿಮಾನಗಳಷ್ಟೇ
ಹಾರದೇ, ಜಿಲ್ಲೆಯಲ್ಲಿ ಕೈಗಾರಿಕೆಗಳ ಅಭಿವೃದ್ಧಿ ಸೇರಿದಂತೆ ವಿವಿಧ ರೀತಿಯ ಬದಲಾವಣೆಗಳ ನಿರೀಕ್ಷೆಯಿರುತ್ತದೆ. ಹಾಗಾಗಿ ರಾಜ್ಯ ಸರ್ಕಾರದಿಂದ ವಿಮಾನಯಾನ ಆರಂಭಿಸಲು ಅಗತ್ಯ ನೆರವು ನೀಡಲಾಗುವುದು. ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಪೂರೈಕೆ ಸೇರಿದಂತೆ ಇನ್ನು ಏನೇನು ಅಗತ್ಯವಿದೆ ಎನ್ನುವ ಬಗ್ಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ್‌ ಮಾತನಾಡಿ, ಏರ್‌
ಟರ್ಮಿನಲ್‌ ಕಟ್ಟಡ ನಿರ್ಮಾಣ ಹಾಗೂ ಮೂಲ ಸೌಕರ್ಯ ಒದಗಿಸಲು ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ವಿವರಣೆ ನೀಡಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್‌, ಸಹಾಯಕ ಆಯುಕ್ತ ಅಕ್ಷಯ್‌ ಶ್ರೀಧರ್‌, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶರಣಬಸಪ್ಪ ಕೋಟೆಪ್ಪಗೋಳ, ನಗರಸಭೆ ಪೌರಾಯುಕ್ತ ಬಿ.ಬಸಪ್ಪ, ಭಾರತೀಯ ವಿಮಾನ ನಿಲ್ದಾಣದ ಪ್ರಾಧಿಕಾರದ ಸಿ.ಪಟ್ಟಾಭಿ, ಕೆಎಸ್‌ಐಐಡಿಸಿ ಶಾಮಂತ.ಎನ್‌, ಪರಿಸರ ಅಧಿಕಾರಿ ಎಂ.ಎ. ಮಣಿಯಾರ್‌, ಲೋಕೋಪಯೋಗಿ ಇಲಾಖೆ ಎಇಇ ರಾಜೇಂದ್ರ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next