Advertisement

ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ

03:24 PM Feb 27, 2020 | Naveen |

ಬೀದರ: ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಮೂಲಕ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು ಎಂದು ಸಂಸದ ಭಗವಂತ ಖೂಬಾ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಬುಧವಾರ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಕುರಿತು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಲಮೂಲ ಹೊಂದಿರುವ ಗ್ರಾಮಗಳಲ್ಲಿ ನೀರು ಪೂರೈಕೆಗೆ ಇರುವ ಸಮಸ್ಯೆ ಪರಿಹರಿಸಬೇಕು. ನೀರಿನ ಮೂಲಗಳು ಲಭ್ಯವಿಲ್ಲದ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಟ್ಯಾಂಕರ್‌ಗಾಗಿ ಟೆಂಡರ್‌ ಕರೆಯಿರಿ: ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ ಮಾತನಾಡಿ, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆಗಳಿರುವುದರಿಂದ ಮುಂಚಿತವಾಗಿ ಎಲ್ಲ ತಾಲೂಕುಗಳಲ್ಲಿ ಟ್ಯಾಂಕರ್‌ಗಳನ್ನು ಪಡೆಯಲು ಟೆಂಡರ್‌ ಕರೆಯಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಬ್ರಿಮ್ಸ್‌ ಆಸ್ಪತ್ರೆ ಕುರಿತಂತೆ ಸುದೀರ್ಘ‌ ಚರ್ಚೆ ನಡೆಯಿತು. ಬ್ರಿಮ್ಸ್‌ ನಿರ್ದೇಶಕ ಡಾ| ಶಿವಕುಮಾರ ಬ್ರಿಮ್ಸ್‌ ಆಸ್ಪತ್ರೆ ಪ್ರಗತಿ ವಿವರಗಳ ಬಗ್ಗೆ ಮಾಹಿತಿ ನೀಡಿದರು. ಈ ಆಸ್ಪತ್ರೆಯಲ್ಲಿರುವ ಲಿಫ್ಟ್‌ಗಳಲ್ಲಿ ಒಂದು ಮಾತ್ರ ಕಾರ್ಯ ನಿರ್ವವಹಿಸುತ್ತಿದೆ. ಎಲ್ಲ ಲಿಫ್ಟ್‌ಗಳನ್ನು ಸರಿಪಡಿಸಿದಲ್ಲಿ ರೋಗಿಗಳಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಲಿಫ್ಟ್‌ಗಳ ಆರಂಭ, ವಿದ್ಯುತ್‌ ಸಂಪರ್ಕ ಕಲ್ಪಿಸುವುದು ಸೇರಿದಂತೆ ಆಸ್ಪತ್ರೆಯಲ್ಲಿ ಬಾಕಿ ಉಳಿದಿರುವ ಎಲ್ಲ ಕೆಲಸ ಶೀಘ್ರ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಬ್ರಿಮ್ಸ್‌ ಮೇಲೆ ನಿಗಾವಹಿಸಿ: ಹೊಸ ನಿರ್ದೇಶಕರು ಬಂದ ನಂತರ ಬ್ರಿಮ್ಸ್‌ ಆಸ್ಪತ್ರೆಯಲ್ಲಿ ಸಾಕಷ್ಟು ಸುಧಾರಣೆಗಳು ಕಾಣಿಸಿವೆ. ಇವರು ಸಂಯಮದಿಂದ ಇದ್ದು, ಯಾವುದೇ ರೀತಿಯ ಅವ್ಯವಹಾರಗಳಿಗೆ ಅವಕಾಶ ನೀಡದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು. ಬ್ರಿಮ್ಸ್‌ ಆಸ್ಪತ್ರೆ ಸಿಇಒ ಆಗಿರುವ ಅಪರ ಜಿಲ್ಲಾಧಿಕಾರಿ ಪ್ರತಿದಿನ ಆಸ್ಪತ್ರೆಗೆ ಭೇಟಿ ನೀಡಿ, ಎಲ್ಲ ಕಾರ್ಯಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು. ಸಣ್ಣ ಪುಟ್ಟ ಸಮಸ್ಯೆಗಳು ಕಾಣಿಸಿದಲ್ಲಿ ಸ್ಥಳದಲ್ಲಿಯೇ ಇತ್ಯರ್ಥವಾಗುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ವಿ.ಜಿ. ರೆಡ್ಡಿ ಮಾತನಾಡಿ, ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆಯ ಪ್ರಗತಿ ವಿವರಗಳನ್ನು ಸಭೆಯ ಗಮನಕ್ಕೆ ತಂದರು. ಎಲ್ಲ ಬಡವರಿಗೆ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ವಿಶ್ವದಲ್ಲಿಯೇ ಮಾದರಿ ಯೋಜನೆ ಜಾರಿಗೆ ತಂದಿದೆ. ಇದರ ಸಮರ್ಪಕ ಅನುಷ್ಠಾನವಾಗಬೇಕು. ಯೋಜನೆ ಬಗ್ಗೆ ಇನ್ನಷ್ಟು ಪ್ರಚಾರ ನೀಡಿ ಜಿಲ್ಲೆಯ ಪ್ರತಿ ಕುಟುಂಬದವರು ಆರೋಗ್ಯ ಕಾರ್ಡ್‌ ಪಡೆಯುವಂತಾಗಬೇಕು ಎಂದು ಸಂಸದರು ತಿಳಿಸಿದರು.

ರೈತರ ಆ್ಯಪ್‌ ಕುರಿತು ಪ್ರಚಾರ: ಕೃಷಿ ಇಲಾಖೆ ರೈತರ ಅನುಕೂಲಕ್ಕಾಗಿ ರಚಿಸಿರುವ ಆ್ಯಪ್‌ ಕುರಿತಂತೆ ಎಲ್ಲ ರೈತರಿಗೆ ಮಾಹಿತಿ ಸಿಗಬೇಕು. ಅದರ ಸದುಪಯೋಗ ಪಡೆಯುವಂತಾಗಲು ಪತ್ರಿಕಾ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನೀಡುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚಿಸಿದರು. ಅದರಂತೆ ಫಸಲು ವಿಮೆ ಯೋಜನೆಗೆ ಸಂಬಂ ಧಿಸಿದಂತೆ ರೈತರ ನೋಂದಣಿ, ಪರಿಹಾರ ವಿತರಣೆ ಕುರಿತು ವಿಶೇಷ ಕಾಳಜಿ ವಹಿಸಿ ರೈತರಿಗೆ ನೆರವಾಗಬೇಕು ಎಂದರು.

ಆಹಾರ ಇಲಾಖೆ, ತೋಟಗಾರಿಕೆ ಇಲಾಖೆ, ಲೋಕೋಪಯೋಗಿ ಇಲಾಖೆ, ಜೆಸ್ಕಾಂ, ಬಿಸಿಎಂ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ಸಭೆಯಲ್ಲಿ ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್‌, ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ್‌, ಎಸ್‌ಪಿ ನಾಗೇಶ ಡಿ.ಎಲ್‌, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಸಹಾಯಕ ಆಯುಕ್ತ ಅಕ್ಷಯ್‌ ಶ್ರೀಧರ್‌ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next