ಬೇಸಗೆ ರಜೆ ಸಿಕ್ತು ಅಂದ್ರೆ ಸಾಕು; ಯಾವಾಗ ಅಜ್ಜಿ ಊರಿಗೆ ಹೋಗ್ತಿನೋ ಅಂತ ಕಾಯ್ತಾ ಕೂತ್ಕೊàತಿದ್ದ ವಯಸ್ಸು ಅದು. ಅಲ್ಲಿ ಹಲ್ಲು ಕಡಿಯೋ ಅಪ್ಪನ ಸಿಟ್ಟಿರಲ್ಲ, “ಮಣ್ಣಲ್ಲಿ ಆಡಬೇಡಾ’ ಅನ್ನೋ ಅಮ್ಮನ ಕೂಗಿರಲ್ಲ. ಚಾಡಿ ಹೇಳಿ ಬೈಸೋ ಅಣ್ಣನ ಕರಾಮತ್ತು ನಡೆಯಲ್ಲ. ಪ್ರತಿ ವರ್ಷ ಬಿಸಿಲ ಬೇಗೆಯಲ್ಲೂ ಅದೊಂಥರಾ ಹೊಸ ಹೊಸ ಅನುಭವಗಳ ಬುತ್ತಿಚೀಲದಂತಿರುತ್ತಿದ್ದ ಬೇಸಗೆ ದಿನಗಳವು.
ಅಜ್ಜಿ ಮನೆಯಲ್ಲಿ ಸಮಯಕ್ಕೆ ಸರಿಯಾಗಿ ಹೊಟ್ಟೆ ತುಂಬಾ ತಿಂಡಿ, ಊಟ ಮಾಡಿದರಾಯ್ತು.. “ಕೆಂಗ ನನ್ಮಗಂದು… ಚೆನ್ನಾಗಿ ಉಣ್ಣುತ್ತೆ. ಹೋಗ್ ಪಾಪಾ ಆಟಾ ಆಡ್ಕೊ… ಬಾವಿತಾಕೆಲ್ಲಾ ಹೋಗ್ಬೇಡಾ.. ಮಾವಿನಕಾಯೀನ ಮಾವಾನೆ ಕಿತ್ಕಂಡು ಬಂದು ಕೊಡ್ತಾನೆ. ಇಲ್ಲೇ ಆಡ್ಕೊ…’ ಅಂತ ಹೇಳಿ ಸ್ವಾತಂತ್ರ್ಯ ಕೊಟ್ಟು ಬಿಡೋಳು ನಮ್ಮಜ್ಜಿ. ಕೊಟ್ಟಿದ್ದನ್ನು ತಿಂದಾದ ಮೇಲೆ ಅಲ್ಲೇ ಕೂಗಳತೆಯಷ್ಟು ದೂರದಲ್ಲಿದ್ದ ದೊಡ್ಡಮ್ಮನ ಮನೆಯ ಕಡೆ ಒಟ ಕೀಳುತ್ತಿದ್ದೆ. ದೊಡ್ಡಮ್ಮನ ಕೊನೇ ಮಗ ನಮ್ಮ ಪಾಲಿಗೆ ಆ್ಯಕ್ಷನ್ ಕಿಂಗ್ ಆಗಿದ್ದ. ವಯಸ್ಸಿನಲ್ಲಿ ನಾಲ್ಕು ವರ್ಷ ದೊಡ್ಡವನಾದ್ರೂ ದಿನಕ್ಕೊಂದು ಹೊಸ ಹೊಸ ಆಟಗಳನ್ನು ಆಡುತ್ತಾ, ತುಂಬಾ ಚುರುಕಿನಿಂದ ಓಡಾಡುತ್ತಾ ಹತ್ತಿರದ ಓಣಿ ಹುಡುಗರಿಗೆ ನಾಯಕನೆನಿಸಿಕೊಂಡಿದ್ದ.
ಒಮ್ಮೆ ಅವನು ಮೂರ್ನಾಲ್ಕು ಹಸಿ ತೆಂಗಿನ ಗರಿಯ ಸೀಳುಗಳನ್ನೆಲ್ಲಾ ಸೀಳಿ ಉದ್ದನೆಯ ಕಡ್ಡಿಯ ಅಂಚಿಗೆ ಕುಣಿಕೆಯಂತೆ ಮಾಡಿಕೊಂಡ. ಆಮೇಲೆ ನಮ್ಮನ್ನೆಲ್ಲಾ ಕರೆದುಕೊಂಡು ಮನೆಯ ಪಕ್ಕದಲ್ಲೇ ಇದ್ದ ರೋಜಾ ಗಿಡಗಳ ಬಳಿಗೆ ಹೋಗಿ ನಿಲ್ಲಿಸಿ ಸದ್ದು ಮಾಡದಂತೆ ಎಚ್ಚರಿಕೆ ನೀಡಿದ. ಹತ್ತಾರು ನಿಮಿಷಗಳಾದರೂ ಏನು ನಡೀತಿದೆ ಅಂತಾನೇ ಗೊತ್ತಾಗಲಿಲ್ಲ ನಮಗೆ. ನಂತರ ರೋಜಾ ಗಿಡದೊಳಗೆ ಏನೋ ಸರಿದಾಡಿದಂತಾಯ್ತು. ನೋಡಿದರೆ ಅಲ್ಲೊಂದು ಓತೀಕ್ಯಾತ ಕತ್ತೆತ್ತಿ ನಮ್ಮತ್ತಲೇ ನೋಡುತ್ತಿತ್ತು. ಜಾಗೃತನಾದ ದೊಡ್ಡಮ್ಮನ ಮಗ ತನ್ನ ಬಳಿಯಿದ್ದ ಗರಿಯ ಕುಣಿಕೆಯನ್ನು ಸಂಧಿಯೊಳಗಿನಿಂದ ಅದಕ್ಕೆ ತಿಳಿಯದ ಹಾಗೆ ಅದರ ತಲೆಯೊಳಗೆ ನಿಧಾನವಾಗಿ ತೂರಿಸಿ ಎಳೆದಾಗ ಅದು ಅವನ ಬಲೆಯಲ್ಲಿ ಬಿದ್ದು ವಿಲವಿಲ ಒದ್ದಾಡತೊಡಗಿತು.
ಅವನ ಕ್ರಿಯಾತ್ಮಕ ತಂತ್ರಗಾರಿಕೆಗೆ ನಾವೆಲ್ಲಾ ಚಪ್ಪಾಳೆ ಹೊಡೆದು ಕೇಕೆಹಾಕುತ್ತಿದ್ದರೆ, ಅವನು ಮಾತ್ರ ಹಳೆ ಸಿನಿಮಾಗಳ ಖಳನಟನಂತೆ ಗಹಗಹಿಸಿ ನಗುತ್ತಿದ್ದ. ಓತಿಕ್ಯಾತವನ್ನು ಹಿಡಿದಾದ ಮೇಲೆ ಅಲ್ಲೇ ಸಮೀಪದಲ್ಲಿ ಬಿದ್ದಿರುತ್ತಿದ್ದ ಅರ್ಧ ಸೇದಿ ಬಿಸಾಡಿರುವ ತುಂಡು ಬೀಡಿಗಳನ್ನೆಲ್ಲಾ ಆಯ್ದುಕೊಂಡು ತರಲು ತಿಳಿಸಿದ. ಆಗಲೂ ನಮಗೆ ಅವನು ಏನು ಮಾಡುತ್ತಿದ್ದಾನೆಂದೇ ತಿಳಿಯಲಿಲ್ಲ. ಆದರೆ ಅವನ ಸೂಚನೆಯನ್ನು ಶಿರಸಾವಹಿಸಿ ಪಾಲಿಸಿದೆವು. ತುಂಡುಬೀಡಿಗಳನ್ನು ಸಂಗ್ರಹಿಸಿ ಅವನಿಗೆ ಕೊಟ್ಟೆವು. ಒಂದು ಕಾಗದವನ್ನು ಬೀಡಿಯಂತೆ ಸುರುಳಿ ಸುತ್ತಿ ಮೋಟು ಬೀಡಿಯಲ್ಲಿದ್ದ ಹೊಗೆಸೊಪ್ಪನ್ನೆಲ್ಲಾ ಆ ಸುರುಳಿಯೊಳಕ್ಕೆ ತುಂಬಿಸಿ, ಅದನ್ನು ಓತಿಕ್ಯಾತದ ಗಂಟಲಿನವರೆಗೂ ತುರುಕಿ ತುದಿಗೆ ಬೆಂಕಿ ಹಚ್ಚಿದ.
ಏನಾಶ್ಚರ್ಯ! ಓತಿಕ್ಯಾತ ಪ್ರಾಣಭಯದಿಂದ ಉಸಿರನ್ನು ಹಿಂದಕ್ಕೂ ಮುಂದಕ್ಕೂ ಎಳೆದುಕೊಳ್ಳುವಾಗ, ಬೀಡಿ ಸೇದುತ್ತಿದ್ದಂತೆ ಕಾಣುತ್ತಿತ್ತು. ಅವನೋ, ದೀರ್ಘಕಾಲದ ಸಂಶೋಧನೆಯೊಂದನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿದ ವಿಜಾnನಿಯಂತೆ “ನಮ್ಮ ರಾಜಾ ಬಿಡಿ ಸೇದಿ¤ದಾನೆ… ತಾಲೀ ಬಜಾ…’ ಎಂದು ಕೂಗುತ್ತಿದ್ದ. ಅವನು ತಾನು ಹಿಡಿದ ಯಾವುದೇ ಜೀವಿಯನ್ನು ತುಂಬಾ ಹೊತ್ತು ಗೋಳು ಹುಯ್ದುಕೊಳ್ಳುತ್ತಿರಲಿಲ್ಲ. ಹೀಗಾಗಿ ನಾಲ್ಕಾರು ದಮ್ಮು ಹೊಡೆಸಿ ಓತಿಕ್ಯಾತವನ್ನು ಬಿಟ್ಟುಬಿಟ್ಟ. ನಶೆ ಏರಿದಂತೆ ಕಂಡು ಬಂದ ಓತಿಕ್ಯಾತ ಕೆಲ ಕ್ಷಣಗಳ ಕಾಲ ನಿಂತಲ್ಲೇ ಪಿಳಿಪಿಳಿ ಕಣ್ಣು ಬಿಟ್ಟಿತು. ಆಮೇಲೆ ಪೊದೆಯೊಳಗೆ ಒಂದೇ ಓಟ. ಇತ್ತ ನಮ್ ನಾಯಕ ಮತ್ತೂಂದು ಓತಿ ಹಿಡಿಯಲು ಬೇರೊಂದೆಡೆ ಹೊಂಚು ಹಾಕಿ ಕುಳಿತುಬಿಡುತ್ತಿದ್ದ.
ಪ. ನಾ. ಹಳ್ಳಿ ಹರೀಶ್ ಕುಮಾರ್, ತುಮಕೂರು