Advertisement

ಮಕ್ಕಳ ಗ್ರಾಮಸಭೆ ಕಡ್ಡಾಯ ನಡೆಸಿ

12:28 PM Jan 17, 2020 | |

ಬೀದರ: ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಮಕ್ಕಳ ಗ್ರಾಮ ಸಭೆಗಳನ್ನು ಕಡ್ಡಾಯವಾಗಿ ನಡೆಸಿ, ಮಕ್ಕಳ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಬೇಕು ಎಂದು ಜಿಲ್ಲಾಧಿಕಾರಿ ಡಾ|ಎಚ್‌.ಆರ್‌. ಮಹಾದೇವ ಅವರು ಅಧಿ ಕಾರಿಗಳಿಗೆ ಸೂಚಿಸಿದರು.

Advertisement

ನಗರದಲ್ಲಿ ನಡೆದ ಚೈಲ್ಡ್‌ಲೈನ್‌-1098 ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳ ಗ್ರಾಮ ಸಭೆಗಳಲ್ಲಿ ಶಾಲೆಗಳ ಮಕ್ಕಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿರುವಂತೆ ನೋಡಿಕೊಳ್ಳಬೇಕು. ಸಭೆಯಲ್ಲಿ ಮಕ್ಕಳು ತಿಳಿಸುವ ಸಮಸ್ಯೆಗಳನ್ನು ಕ್ರೋಢೀಕರಿಸಿ ಜಿಪಂಗೆ ವರದಿ ಸಲ್ಲಿಸಿ, ಪರಿಹಾರ ಕಂಡುಕೊಳ್ಳಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತು ಚೈಲ್ಡ್‌ಲೈನ್‌ ಸಹಾಯವಾಣಿ ಕೇಂದ್ರಗಳ ಪದಾಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾ ಮಟ್ಟದಲ್ಲಿ ಇರುವಂತೆ ತಾಲೂಕು ಮಟ್ಟದಲ್ಲಿಯೂ ಸಮಿತಿ ಇರುತ್ತದೆ. ಈ ಸಮಿತಿಗಳ ಸಭೆಯೂ ನಡೆಯುತ್ತಿವೆ. ಆದರೆ ಪರಿಣಾಮಕಾರಿಯಾಗಿ ಆಗುತ್ತಿಲ್ಲ ಎಂದು ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ್‌ ಪರ್ತಾಪೂರೆ ಸಭೆಗೆ ಮಾಹಿತಿ ನೀಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ನಿಯಮದಂತೆ ಸಭೆ ನಡೆಸಿ, ಅನುಪಾಲನಾ ವರದಿ ಸಿದ್ಧಪಡಿಸಿ, ವರದಿ ಸಲ್ಲಿಸುವಂತೆ ಜಿಲ್ಲಾ ಧಿಕಾರಿಯವರು ನಿರ್ದೇಶನ ನೀಡಿದರು.

ಎಲ್ಲ ತಾಲೂಕುಗಳಲ್ಲಿ ಮಕ್ಕಳ ಸಹಾಯವಾಣಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಬಸವಕಲ್ಯಾಣದಲ್ಲಿ ಇಲ್ಲ. ಇದಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಈವರೆಗೆ ಅನುಮೋದನೆ ಸಿಕ್ಕಿಲ್ಲ ಎಂದು ಅ ಧಿಕಾರಿಗಳು ಮಾಹಿತಿ ನೀಡಿದಾಗ, ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಪ್ರಸ್ತಾವನೆ ಸಲ್ಲಿಸಿ ಕೈಕಟ್ಟಿ ಕುಳಿತಲ್ಲಿ ಯಾವುದೇ ಕೆಲಸಗಳು ಆಗುವುದಿಲ್ಲ. ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕೆಲಸ ಮಾಡಿಕೊಳ್ಳಬೇಕು ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಕಿಡಿಗೇಡಿಗಳು ಶಾಲೆಯ ಬಾಗಿಲು, ಕಿಟಕಿಗಳನ್ನು ಒಡೆದು, ಶಾಲಾ ವಾತಾವರಣ ಕೆಡಿಸುತ್ತಿರುವುದು ಕಂಡುಬಂದಿದೆ ಎಂದು ಮಕ್ಕಳ ಸಹಾಯವಾಣಿ ಕೇಂದ್ರದವರು ತಿಳಿಸಿದರು. ಅಂತಹ ಶಾಲೆಗಳ ಪಟ್ಟಿಯನ್ನು ಪೊಲೀಸ್‌ ಇಲಾಖೆಗೆ ಸಲ್ಲಿಸಿ. ಸರಿಪಡಿಸಲು ಕ್ರಮ ವಹಿಸಲಾಗುವುದು ಜಿಲ್ಲಾಧಿಕಾರಿ ಹೇಳಿದರು.

Advertisement

0-6 ಮತ್ತು 15ರಿಂದ 18 ವರ್ಷದವರೆಗಿನ ಮಕ್ಕಳಿಗೆ ತುರ್ತು ತಾತ್ಕಾಲಿಕ ವಸತಿ ಕಲ್ಪಿಸಬೇಕು. ಮಕ್ಕಳ ಸಹಾಯವಾಣಿ-1098 ಬಗ್ಗೆ ಗೋಡೆ ಬರಹಗಳನ್ನು ಎಲ್ಲ ಶಾಲೆಗಳಲ್ಲಿ ಬರೆಸಬೇಕು. ಬಾಲ್ಯ ವಿವಾಹ ನಿಷೇಧ ಅಧಿ ಕಾರಿಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವಂತಾಗಬೇಕು ಎನ್ನುವ ಬೇಡಿಕೆಗಳನ್ನು ಸಲ್ಲಿಸಲಾಯಿತು.

ಇದೇ ವೇಳೆ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ, ಜಿಲ್ಲಾ ತನಿಖಾ ಸಮಿತಿ, ಮಕ್ಕಳ ಸಲಹಾ ಮಂಡಳಿ ಸಮಿತಿ, ಮಕ್ಕಳ ಕಲ್ಯಾಣ ಸಮಿತಿಯ ಪ್ರಗತಿ ಪರಿಶೀಲನೆ, ಬಾಲ್ಯ ವಿವಾಹ ಸಮನ್ವಯ ಸಮಿತಿ, ಮಹಿಳೆಯರ ಮತ್ತು ಮಕ್ಕಳ ಅಕ್ರಮ ಸಾಗಾಣಿಕೆ ತಡೆಗಟ್ಟುವ ಜಿಲ್ಲಾ ಮಟ್ಟದ ಸಮಿತಿ, ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ತಡೆಯುವ ಜಿಲ್ಲಾ ಮಟ್ಟದ ಸಮಿತಿ ಸಭೆಗಳು ನಡೆದವು.

ಸಭೆಯಲ್ಲಿ ಜಿಪಂ ಸಿಇಒ ಜ್ಞಾನೇಂದ್ರಕುಮಾರ ಗಂಗವಾರ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆಯ ಉಪ ನಿರ್ದೇಶಕ ಶ್ರೀಕಾಂತ ಕುಲಕರ್ಣಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚಂದ್ರಕಾಂತ ಜಾಧವ, ಬಾಲ ನ್ಯಾಯ ಮಂಡಳಿ ಸದಸ್ಯ ಶಶಿಧರ ಕೋಸಂಬೆ, ಚೈಲ್ಡ್‌ ಲೈನ್‌ ಇಂಡಿಯಾ ಫೌಂಡೇಶನ್‌ನ ಸಂಪತ್‌ ಕಟ್ಟಿ ಹಾಗೂ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next