ಔರಾದ: ಹದಗೆಟ್ಟ ಬೀದರ-ಔರಾದ ರಸ್ತೆ ಸುಧಾರಣೆ ಮಾಡುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿ ಸೋಮವಾರ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕಾರ್ಯಕರ್ತರು ಉಪ ಬಂಧಿಖಾನೆ ಬಳಿ ಬೀದರ-ಔರಾದ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ತಾಲೂಕು ಪ್ರಮುಖ ಹಾವಪ್ಪಾ ದ್ಯಾಡೆ ಮಾತನಾಡಿ, ಬೀದರ-ಔರಾದ ರಸ್ತೆ ಸುಧಾರಣೆ ಮಾಡುವಂತೆ ಸಂಘ ಸಂಸ್ಥೆ ಮುಖಂಡರು ಪಾದಯಾತ್ರೆ, ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ ಹೆದ್ದಾರಿ ತಡೆ ನಡೆಸಲಾಗುತ್ತಿದೆ ಎಂದರು.
ಬೀದರ ಸಂಸದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕೂಡಾ ಔರಾದ ತಾಲೂಕಿನವರಾಗಿದ್ದಾರೆ. ಆದರೂ ರಸ್ತೆ ಸುಧಾರಣೆ ಮಾಡುವಲ್ಲಿ ಇಬ್ಬರೂ ನಾಯಕರು ನಿರಾಸಕ್ತಿ ತೋರುತ್ತಿದ್ದಾರೆ. ರಸ್ತೆ ಹಾಳಾಗಿರುವ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆ ಬಸ್, ಇತರೆ ವಾಹನಗಳು ವಡಗಾಂವ ಮಾರ್ಗವಾಗಿ ಬೀದರಗೆ ಹೋಗುತ್ತಿವೆ. ಆ ರಸ್ತೆ ಕೂಡಾ ಹಾಳಾಗಿದೆಎಂದು ಆಕ್ರೋಶ ವ್ಯಕ್ತಪಡಿಸಿದರು.
ವಾರದಲ್ಲಿ ಬೀದರ ಔರಾದ ರಸ್ತೆ ಸುಧಾರಣೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೀದರ ಸಂಸದರು ಮುಂದಾಗಬೇಕು. ಇಲ್ಲವಾದಲ್ಲಿಅವರಿಬ್ಬರ ಪ್ರತಿಕೃತಿ ದಹನ ಮಾಡಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಅಂಬಾದಾಸ ನೆಳಗೆ, ಬಾಲಾಜಿ ಸಂತಪುರ, ನವನಾಥ ಮೇತ್ರೆ, ಉತ್ತಮ ಕಾಂಬಳೆ, ಕಿರಣ ಪ್ರಕಾಶ, ರಾಜು ಜೋಜನಾ, ಅನಿಲ ಮೇತ್ರೆ, ರಮೇಶ ವಾಘಮಾರೆ, ಅಶೋಕ ಶೆಂಬೆಳ್ಳೆ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.