ಬೀದರ: ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ನಗರದ ಪಶು ವೈದ್ಯಕೀಯ ವಿವಿಯಲ್ಲಿ ಆಯೋಜಿಸಿದ್ದ ಮೂರು ದಿನಗಳ ರಾಜ್ಯ ಮಟ್ಟದ ಪಶು ಮೇಳಕ್ಕೆ ರವಿವಾರ ತೆರೆ ಬಿದ್ದಿದೆ. ರೈತರ ಸ್ವಾವಲಂಬಿ ಬದುಕು ಮತ್ತು ಅಭ್ಯುದಯಕ್ಕಾಗಿ ಪಶು ಸಂಗೋಪನೆ ಎನ್ನುವ ಸಂದೇಶವನ್ನು ಅಕ್ಷರಶಃ ಜನಮನ ತಲುಪಿಸುವಲ್ಲಿ ಪಶು ಇಲಾಖೆ ಯಶಸ್ವಿಯಾಯಿತು.
ಜಾನುವಾರು ಸಾಕಾಣಿಕೆ, ನಿರ್ವಹಣೆ ಕುರಿತು ಮಾಹಿತಿ, ಹೈನುಗಾರಿಕೆ, ಕುಕ್ಕುಟ ಸಾಕಾಣಿಕೆ, ಜಾನುವಾರ ಆರೋಗ್ಯಕ್ಕೆ ಸಂಬಂಧಿಸಿದಂತೆ ಔಷಧ, ಲಸಿಕೆ ಮತ್ತು ರೋಗ ಪತ್ತೆ ಸಾಧನೆಗಳ ಮಾಹಿತಿ, ಫಲ ಪುಷ್ಪ ಪ್ರದರ್ಶನ, ಪ್ರಗತಿಪರ ರೈತರಿಂದ ಚರ್ಚೆ, ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸತತ ಮೂರು ದಿನಗಳ ಕಾಲ ನಡೆದವು. ಹೈನುರಾಸುಗಳಲ್ಲಿ ಹಾಲು ಕರೆಯುವ ಸ್ಪರ್ಧೆ, ಕರುಗಳ ಪ್ರದರ್ಶನ, ಶ್ವಾನ ಪ್ರದರ್ಶನ ಕಾರ್ಯಕ್ರಮಗಳು ಕೂಡ ಪಶುಮೇಳದ ವಿಶೇಷ ಆಕರ್ಷಣೆಯಾಗಿದ್ದವು.
ಕಾರ್ಯಕ್ರಮದಲ್ಲಿ ನಾನಾ ತಳಿಯ ಜಾನುವಾರುಗಳು ರಾಜ್ಯದ ದೂರ ದೂರದ 30 ಜಿಲ್ಲೆಗಳಿಂದ ಆಗಮಿಸಿದ್ದವು. ಜೊತೆಗೆ ಪ್ರಗತಿಪರ ರೈತರು ಕೂಡ ಆಗಮಿಸಿದ್ದರು. ಅಲ್ಲದೇ 30 ಜಿಲ್ಲೆಗಳ ಪಶುವೈದ್ಯಾ ಧಿಕಾರಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮೇಳಕ್ಕೆ ರಾಜ್ಯದ ವಿವಿಧೆಡೆಯಿಂದ ರೈತರು ಮತ್ತು ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು ವಿಶೇಷವಾಗಿತ್ತು.
ಪ್ರಾಣಿಗಳ ಮತ್ತು ವಾಣಿಜ್ಯ ಸ್ಟಾಲ್‌ಗಳು ಕೂಡ ಪಶುಮೇಳದ ವಿಶೇಷ ಆಕರ್ಷಣೆಯಾಗಿದ್ದವು. ಗೀರ್, ಹಳ್ಳಿಕಾರ್, ಜಾಪ್ರಾಬಾದಿ, ಬಿದ್ರಿ, ಕಿಲಾರಿ, ದೇವಣಿ, ಡ್ನೂರಾಕ್ ಸೇರಿದಂತೆ ಹತ್ತು ಹಲವು ತಳಿಯ ಆಕಳು, ಎತ್ತುಗಳು, ಮೇಕೆಗಳು, ಹಂದಿಗಳನ್ನು ಜನರು ಬೆರಗುಗಣ್ಣಿನಿಂದ ನೋಡುತ್ತಿದ್ದುದು ಸಾಮಾನ್ಯವಾಗಿತ್ತು. ಆಯಾ ತಳಿಯ ಸಂಕ್ಷಿಪ್ತ ಮಾಹಿತಿ ಮತ್ತು ಕರಪತ್ರಗಳಿಂದ ಜನತೆಗೆ ಜಾನುವಾರುಗಳ ಬಗ್ಗೆ ತಿಳಿಯಲು ಸಹಕಾರಿಯಾಯಿತು.
ಸಾಂಸ್ಕೃತಿಕ ಕಾರ್ಯಕ್ರಮ: ನಾಟ್ಯಶ್ರೀ ನೃತ್ಯಾಲಯದಿಂದ ಭರತನಾಟ್ಯ, ಗಂಗಾವತಿ ಪ್ರಾಣೇಶ ತಂಡದಿಂದ ಹಾಸ್ಯಸಂಜೆ, ಸವಿಗಾನ ಸಂಗೀತ ತಂಡದಿಂದ ಸುಗಮ ಸಂಗೀತ, ಕೋಗಳಿ ಕೊಟ್ರೇಶ ಅವರಿಂದ ಹಾಸ್ಯ ಕಾರ್ಯಕ್ರಮ, ಪ್ರಹ್ಲಾದ್ ಆಚಾರ್ ಅವರಿಂದ ನೆರಳು ಬೆಳಕು, ಡಾ| ಪದ್ಮಾನಂದ ಮತ್ತು ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮಗಳು ಸಾರ್ವಜನಿಕರ ಮನಸೂರೆಗೊಂಡವು.