Advertisement

ಡಿಸೆಂಬರ್‌ನಲ್ಲಿ ಬೀದರ ಉತ್ಸವ ಆಯೋಜನೆ

03:17 PM Jun 25, 2018 | Team Udayavani |

ಬೀದರ: ಜಿಲ್ಲೆಯು ಕೋಮು ಸೌಹಾರ್ದ ಮೆರೆದ ಜಿಲ್ಲೆಯಾಗಿದ್ದು, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಶರಣರ ಕಾಯಕ ಭೂಮಿಯಾಗಿದೆ. ಇಂತಹ ಜಿಲ್ಲೆಯ ಇತಿಹಾಸವನ್ನು ನಾಡಿಗೆ ತಿಳಿಸುವ ನಿಟ್ಟಿನಲ್ಲಿ ಡಿಸೆಂಬರ್‌ನಲ್ಲಿ ಬೀದರ ಉತ್ಸವ ಆಚರಿಸಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪಾ ಖಾಶೆಂಪುರ ಹೇಳಿದರು.

Advertisement

ನಗರದ ರಂಗಮಂದಿರದಲ್ಲಿ ರವಿವಾರ ಜಮಾತೆ ಇಸ್ಲಾಂ ಹಿಂದ್‌, ಸದ್ಭಾವನಾ ಮಂಚ್‌ ಹಾಗೂ ರಾಬ್ತಾಎ-ಮಿಲಾತ್‌ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಈದ್‌-ಮಿಲನ್‌ ಸ್ನೇಹ ಕೂಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿವಿಧ ಸಂಸ್ಕೃತಿಗಳಿಂದ ಕೂಡಿದ ಜಿಲ್ಲೆ ನಮ್ಮದಾಗಿದ್ದು, ಎಲ್ಲ ಜಾತಿ, ಧರ್ಮದವರು ಏಕತೆಯಿಂದ ಬಾಳುವ ಜಿಲ್ಲೆಯಾಗಿದೆ.

ಪೂರ್ವಜರು ಹಾಕಿಕೊಟ್ಟ ಪರಂಪರೆ ಬಿಂಬಿಸುವ ನಿಟ್ಟಿನಲ್ಲಿ ಈ ಹಿಂದೆ ಪ್ರಾರಂಭಿಸಿದ ಬೀದರ ಉತ್ಸವ ಕಾರ್ಯಕ್ರಮ ಈ ವರ್ಷದ ಡಿಸೆಂಬರ್‌ ತಿಂಗಳ ಕೊನೆ ವಾರದಲ್ಲಿ ಮತ್ತೆ ಮರು ಆರಂಭಿಸುವುದಾಗಿ ಹೇಳಿದರು. ಎಲ್ಲ ಧರ್ಮಗಳ ಸಾರ ಒಂದೇ ಎಂಬುದನ್ನು ತಿಳಿದುಕೊಳ್ಳಬೇಕು. ಎಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸ ಇರಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಏಕತೆಯ ಮಾತುಗಳು ಕೇವಲ ಭಾಷಣಕ್ಕೆ ಸೀಮಿತವಾಗದೇ ಆಚರಣೆಗೆ ಬರಬೇಕಿದೆ ಎಂದರು.

ಶಾಸಕ ರಹೀಂ ಖಾನ್‌ ಮಾತನಾಡಿ, ನಮ್ಮ ಮನೆಯಿಂದಲೇ ನಾವು ಎಲ್ಲರ ಸುಃಖ-ದುಃಖ ಗಳಲ್ಲಿ ಭಾಗಿಯಾಗುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಸುತ್ತಮುತ್ತಲಿನ ಜನರೊಂದಿಗೆ ಸಹೋದರ ಭಾವ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ದೇಶದಲ್ಲಿ ಶಾಂತಿ ಮೂಡಲು ಸಾಧ್ಯವಾಗುತ್ತದೆ ಎಂದರು. ಈದ್‌ ಎಂದರೆ ನಾವು ಮಾತ್ರ ಖುಷಿ ಪಡುವುದಲ್ಲ, ಮತ್ತೂಬ್ಬರಿಗೆ ಖುಷಿ ಹಂಚುವುದಾಗಿದೆ. ಕೇವಲ ಒಂದು ದಿನ ಮಾತ್ರ ಖುಷಿ ಹಂಚದೇ ವರ್ಷವಿಡೀ ಈ ಕೆಲಸ ಸಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಮಾತೆ-ಇಸ್ಲಾಂ ಹಿಂದ್‌ ಕರ್ನಾಟಕ ಪ್ರದೇಶದ ಕಾರ್ಯದರ್ಶಿ ಸೈಯದ್‌ ತನ್ವೀರ್‌ ಅಹ್ಮದ್‌ ಮಾತನಾಡಿ, ದೇಶದಲ್ಲಿ ಪರಸ್ಪರ ನಂಬಿಕೆ ಅಗತ್ಯವಾಗಿದೆ. ನೆರೆ-ಹೊರೆಯ ಮನೆಗಳಿಂದಲೇ ಈ ಕಾರ್ಯ ನಡೆಯಬೇಕು.

Advertisement

ಆಗ ಮಾತ್ರ ಕೋಮು ಸೌಹಾರ್ದ ಸಾಧ್ಯ. ಇಂದು ದೇಶದಲ್ಲಿ ಧರ್ಮಗಳ ಹೆಸರಲ್ಲಿ ವಿಭಜನೆ ಮಾಡುವ ಕುಂತ್ರಗಳು ನಡೆಯುತ್ತಿವೆ. ಹಿಂದೂ-ಮುಸ್ಲಿಂ ನಡುವೆ ಜಗಳ ಹಚ್ಚುವ ಜನರು ಇದ್ದಾರೆ. ಅಲ್ಲದೇ ಹೆಚ್ಚಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಈ ಕುರಿತು ಅಪಪ್ರಚಾರ ಮಾಡಲಾಗುತ್ತಿದ್ದು, ಯಾರೂ ಕೂಡ ಪ್ರಚೋದನೆಗೆ ಒಳಗಾಗಬಾರದು. ಸುಳ್ಳುಗಳನ್ನು ಬಿತ್ತರಿಸಿ ಸಮಾಜದಲ್ಲಿ ಕಲಹ ಮೂಡಿಸುವ ಕೆಲಸ ನಡೆಯುತ್ತಿದ್ದು, ಅಂತಹ ಸಂದೇಶಗಳಿಗೆ ಯಾರೂ ಮಹತ್ವ ನೀಡಬಾರದು. ನಾವು ಒಂದು ಎಂಬ ಭಾವ ಪ್ರತಿಯೊಬ್ಬರಲ್ಲಿ ಇರಬೇಕು ಎಂದರು.

ಸಿದ್ದರಾಮ ಬೆಲ್ದಾಳ ಶರಣರು ಮಾತನಾಡಿ, ನುಡಿದಂತೆ ನಡೆದಾಗ ಮಾತ್ರ ವಿಶ್ವದಲ್ಲಿ ಶಾಂತಿ ಸ್ಥಾಪನೆ ಸಾಧ್ಯವಾಗುತ್ತದೆ. ಬಸವಾದಿ ಶರಣರು ಇದೇ ದಾರಿಯಲ್ಲಿ ನಡೆದಿದ್ದರು. ಶರಣರು ಜಾತಿ, ಧರ್ಮಗಳನ್ನು ಗುರತಿಸಿಲ್ಲ, ಬದಲಿಗೆ ಮಾನವೀಯತೆಗೆ ಹೆಚ್ಚು ಮಹತ್ವ ನೀಡಿದ್ದಾರೆ. ಕಾಯಕವೆ ಕೈಲಾಸ ಎಂಬುದು ಎಲ್ಲ ಧರ್ಮದವರಿಗೆ ಅನ್ವಯ ಆಗುತ್ತದೆ. ಸತ್ಯದ ದಾರಿಯಲ್ಲಿ ನಡೆಯುವ ಮೂಲಕ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಜೀವಿಸಿದರೆ ವಿಶ್ವದಲ್ಲಿಯೇ ಭಾರತ ಮಾದರಿ ದೇಶವಾಗಿ ಗುರುತಿಸಿಕೊಳ್ಳುತ್ತದೆ ಎಂದರು.

ಇದೇ ವೇಳೆ ಐಎಎಸ್‌ ಹಾಗೂ ಐಪಿಎಸ್‌ ಪರೀಕ್ಷೆಗಳಲ್ಲಿ ತೇರ್ಗಡೆಯಾದ ರಾಹುಲ್‌ ಸಿಂಧೆ ಹಾಗೂ ಮೊಹಮ್ಮದ್‌ ನದೀಮೋದ್ದೀನ್‌ ಅವರ ಪೋಷಕರನ್ನು ಸನ್ಮಾನಿಸಲಾಯಿತು. ಸಾಕ್ರೇಡ್‌ ಹರ್ಟ್‌ ಚರ್ಚ್‌ನ ಫಾ| ವಿಲ್ಸನ್‌ ಫರ್ನಾಂಡಿಸ್‌, ಸದ್ಭಾವನಾ ಮಂಚ್‌ನ ಜಿಲ್ಲಾ ಸಂಚಾಲಕ ಗುರುನಾಥ ಗಡ್ಡೆ, ಪ್ರಮುಖರಾದ ಮೊಹಮ್ಮದ್‌ ಫಯಿಮೋದ್ದೀನ್‌, ಎಂ.ನಿಜಾಮೋದ್ದೀನ್‌, ಎಸ್‌.ಅಬ್ದುಲ್‌ ವಹೀದ್‌ ಖಾಸ್ಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next