ಸ್ಟೇಟ್‌ಬ್ಯಾಂಕ್: ಸೆಂಟ್ರಲ್ ಮಾರುಕಟ್ಟೆಯ ಸಮೀಪದ ಕಲ್ಪನಾ ಸ್ವೀಟ್ಸ್‌ನಿಂದ ಲೇಡಿಗೋಷನ್ ಹಿಂಭಾಗದ ಬೀಬಿ ಅಲಬಿ ರಸ್ತೆ ಒಳಚರಂಡಿ ಕಾಮಗಾರಿಗಾಗಿ ಅಗೆದು ಕೆಲವು ತಿಂಗಳಾದರೂ ಇನ್ನೂ ರಸ್ತೆ ಕಾಂಕ್ರೀಟ್ ಕೆಲಸ ಶುರು ಮಾಡಿಲ್ಲ; ಅಗೆದ ರಸ್ತೆಗೆ ತೇಪೆಯೂ ಹಾಕಿಲ್ಲ!
ಸ್ಮಾರ್ಟ್‌ಸಿಟಿಯಿಂದ ಒಳ ಚರಂಡಿ ಕಾಮಗಾರಿಗಾಗಿ ರಸ್ತೆ ಯನ್ನು ಅಗೆದು ಹೆಚ್ಚಾ ಕಡಿಮೆ 5 ತಿಂಗಳು ಕಳೆದಿವೆ. ರಸ್ತೆ ಕಾಂಕ್ರೀಟ್ ಮಾಡಲಾಗುವುದು ಎಂದು ಹೇಳಿ ತಿಂಗಳು ಹಲವಾದರೂ ಇನ್ನೂ ಕೆಲಸ ಆರಂಭವಾಗಿಲ್ಲ. ಕನಿಷ್ಠ ಒಳಚರಂಡಿಗಾಗಿ ಅಗೆದ ರಸ್ತೆಗೆ ತೇಪೆಯನ್ನೂ ಮಾಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಸದ್ಯ ರಸ್ತೆಯನ್ನು ಅಗೆದ ಪರಿಣಾಮ ಜಲ್ಲಿ ಕಲ್ಲಿನ ಕಾರಣ ವಾಹನ ಸವಾರರಿಗೆ ಸಮಸ್ಯೆಯಾಗಿದೆ. ಜತೆಗೆ ವ್ಯಾಪಾರ ವಹಿವಾಟು ಮಾಡುವವರಿಗೆ ಕಿರಿಕಿರಿಯಾಗುತ್ತಿದೆ. ಕೊಂಚ ಎಚ್ಚರ ತಪ್ಪಿದರೂ ವಾಹನ ಸವಾರರು ಇಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಅದರಲ್ಲಿಯೂ ಮಳೆ ಬಂದರೆ ಇಲ್ಲಿನ ರಸ್ತೆ ಸಂಚಾರಕ್ಕೆ ಸಂಚಕಾರ ಆಗುತ್ತಿದೆ ಎಂಬುದು ಸ್ಥಳೀಯರ ನಿತ್ಯದ ಗೋಳು.
ರಸ್ತೆಯಲ್ಲೇ ಪಾರ್ಕಿಂಗ್!
ಇಲ್ಲಿನ ರಸ್ತೆಯ ಎರಡೂ ಬದಿಯಲ್ಲಿ ಪಾರ್ಕಿಂಗ್ ನಡೆಸುತ್ತಿರುವ ಪರಿಣಾಮ ಈ ರಸ್ತೆ ಬಹುತೇಕ ಸಮಯ ಸಂಚಾರ ದಟ್ಟಣೆ ಎದುರಿಸುತ್ತದೆ. ಇಲ್ಲಿನ ಬಹುತೇಕ ಕಟ್ಟಡಗಳಿಗೆ ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲದ ಕಾರಣದಿಂದ ವಾಹನಗಳೆಲ್ಲವೂ ಅನಿವಾರ್ಯವಾಗಿ ರಸ್ತೆ ಬದಿ ನಿಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಇಲ್ಲಿನ ರಸ್ತೆಯ ಎರಡೂ ಪಾರ್ಶ್ವದ ಬಹುಭಾಗದಲ್ಲಿ ಸಂಚಾರ ದಟ್ಟಣೆ ಸಾಮಾನ್ಯ ಎಂಬಂತಾಗಿದೆ! ಈ ಮಧ್ಯೆ ತ್ಯಾಜ್ಯವನ್ನು ಆ್ಯಂಟಿನಿ ಸಂಸ್ಥೆಯವರಿಗೆ ನೀಡುವ ಬದಲು ರಸ್ತೆ ಬದಿಯಲ್ಲಿಯೇ ಎಲ್ಲೆಂದರಲ್ಲಿ ಚೆಲ್ಲುವವರ ಸಂಖ್ಯೆ ಇಲ್ಲಿ ಹೆಚ್ಚಿದೆ. ಹೀಗಾಗಿ ಪಾದಾಚಾರಿಗಳಿಗೆ ಸಮಸ್ಯೆ ಆಗುತ್ತಿದೆ. ಮಳೆ ಬಂದರಂತೂ ಸ್ಥಳೀಯರಿಗೆ ತ್ಯಾಜ್ಯ ದುರ್ನಾತ ಬೀರುತ್ತದೆ.
ಶೀಘ್ರ ತೇಪೆ ಕಾರ್ಯ
ಬೀಬಿ ಅಲಾಬಿ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ನಡೆಸಲಾಗಿದೆ. ಕಾಂಕ್ರಿಟ್ ಹಾಕುವ ಮುನ್ನ ಈ ರಸ್ತೆಯನ್ನು ಅಗಲೀಕರಣ ಮಾಡಬೇಕಿದೆ. ಅಗಲೀಕರಣಕ್ಕೆ ಬೇಕಾದ ಭೂ ಸ್ವಾಧೀನ ಪ್ರಕ್ರಿಯೆಯನ್ನು ಪಾಲಿಕೆ ನಡೆಸಬೇಕಾಗಿದೆ. ಅದಾದ ಬಳಿಕ ಕಾಂಕ್ರಿಟ್ ಕೆಲಸ ಮಾಡಲಾಗುವುದು. ಆದರೆ, ಮಳೆಗಾಲಕ್ಕೆ ಯಾವುದೇ ಸಮಸ್ಯೆ ಆಗದಂತೆ ತೇಪೆ ಹಾಕುವ ಕಾರ್ಯವನ್ನು ಶೀಘ್ರ ನಡೆಸಲಾಗುವುದು.
-ಅರುಣ್ ಪ್ರಭ, ಜನರಲ್ ಮ್ಯಾನೆಜರ್, ಸ್ಮಾರ್ಟ್‌ಸಿಟಿ