Advertisement

ಹಿಂದಿ ಶಿಕ್ಷಕರಿಗೆ ಬಿಎಡ್‌ ಕಡ್ಡಾಯವಿಲ್ಲ: ಮಹೇಶ್‌ 

06:00 AM Sep 26, 2018 | |

ಕಾರವಾರ: ಹಿಂದಿ ಶಿಕ್ಷಕರಿಗೆ ಬಿಎಡ್‌ ಶಿಕ್ಷಣ ಕಡ್ಡಾಯವೆಂಬ 2016ರ ಹೊಸ ಸಿಎನ್‌ಡಿಆರ್‌ ಕಾನೂನು ರದ್ದುಪಡಿಸಿ, 2002ರ ಹಳೆಯ ಪದ್ಧತಿಯನ್ನೇ ಮುಂದುವರಿಸುವ ಕುರಿತ ಕಡತಕ್ಕೆ ಸಹಿ ಹಾಕಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್‌. ಮಹೇಶ್‌ ಹೇಳಿದರು.

Advertisement

ಇಲ್ಲಿನ ಶೇಜವಾಡದ ಸದಾನಂದ ಪ್ಯಾಲೇಸ್‌ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘ ಮಂಗಳವಾರ ಆಯೋಜಿಸಿದ್ದ ರಾಜ್ಯಮಟ್ಟದ ಹಿಂದಿ ಭಾಷಾ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ ಹಾಗೂ ಹಿಂದಿ ದಿವಸ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರದ ಐಕ್ಯತೆ, ಸಮಗ್ರತೆಗೆ ಹಿಂದಿ ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಸಬೇಕಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಅನೇಕ ಸಮಸ್ಯೆಗಳನ್ನು
ಸಂಸತ್ತಿನಲ್ಲಿ ಪ್ರತಿಬಿಂಬಿಸಲು ನಿರರ್ಗಳವಾಗಿ ಹಿಂದಿ ಮಾತನಾಡುವುದು ಅವಶ್ಯಕವಾಗಿದೆ. ರಾಜ್ಯದ ಮುಂಬೈ ಹಾಗೂ ಹೈದ್ರಾಬಾದ್‌ ಭಾಗಗಳಲ್ಲಿ ಹಿಂದಿ ಅರಿತು ಮಾತನಾಡುವವರು ಸಾಕಷ್ಟು ಜನರಿದ್ದಾರೆ. ಆದರೆ ಹಳೇ ಮೈಸೂರು ಭಾಗದಲ್ಲಿ ಹಿಂದಿ ಕಬ್ಬಿಣದ ಕಡಲೇಕಾಯಿಯಾಗಿದೆ. ಈ ದಿಸೆಯಲ್ಲಿ ಮುಂದಿನ ಹಿಂದಿ ಶಿಕ್ಷಕರ ಸಮ್ಮೇಳನ ಚಾಮರಾಜನಗರದಲ್ಲಿ ಆಯೋಜಿಸಲು ಎಲ್ಲ ರೀತಿಯ ಸಹಾಯ, ಸಹಕಾರ ನೀಡಲಾಗುವುದು ಎಂದರು. ರಾಜ್ಯದಲ್ಲಿ ತ್ರಿಭಾಷಾ ಸೂತ್ರ ಜಾರಿಯಲ್ಲಿದ್ದು, ಕನ್ನಡ ಮಾತೃ ಭಾಷೆ ನಮ್ಮ ಸಂಸ್ಕೃತಿ ಪ್ರತಿಬಂಬಿಸಿದರೆ, ಸಂಸತ್ತಿನಲ್ಲಿ ಕರ್ನಾಟಕದ ಪ್ರಾತಿನಿಧ್ಯತ್ವಕ್ಕೆ ಹಿಂದಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗ ಪಡೆಯಲು ಇಂಗ್ಲಿಷ್‌ ಕೌಶಲ ಭಾಷೆಯಾಗಿದೆ. ಈ ಮೂರೂ ಭಾಷೆ ಕಲಿತರೆ ಆಧುನಿಕ ಜಗತ್ತಿನಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next