ನಾರಾಯಣಪುರ: ಗ್ರಾಮೀಣ ಸೇರಿ ನಗರ ಪ್ರದೇಶದ ಮಹಿಳೆಯರು ಸ್ವಾವಲಂಬಿಗಳಾಗಿ ಜತೆಗೆ ಆರ್ಥಿಕವಾಗಿ ಸದೃಢರಾಗುವ ಮೂಲಕ ಜೀವನಮಟ್ಟ ಸುಧಾರಿಸಿಕೊಳ್ಳಬೇಕೆಂದು ಜಿಪಂ ಯೋಜನಾ ನಿರ್ದೇಶಕ ಬಿ.ಎಸ್. ರಾಠೊಡ ಹೇಳಿದರು. ಕೊಡೇಕಲ್ ಪಟ್ಟಣದ ಗ್ರಾಪಂ ಕಚೇರಿ ಆವರಣದಲ್ಲಿ ಜಿಪಂ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮಾಸಿಕ ಸಂಜೀವಿನಿ ಸಂತೆ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಿಳೆಯರು ನಾನಾ ರಂಗದಲ್ಲಿ ಪುರುಷನಿಗೆ ಸರಿಸಮಾನವಾಗಿ ನಿಲ್ಲಬಲ್ಲವರಾಗಿದ್ದು, ಹೆಣ್ಣು ಮಕ್ಕಳು ಶಿಕ್ಷಣ ಜೊತೆಗೆ ಕಸೂತಿ, ಗೃಹಪಯೋಗಿ ವಸ್ತುಗಳ ತಯಾರಿಸಿ ಮಾರಾಟ ಮಾಡುವ ಮೂಲಕ ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನು ನಿಭಾಯಿಸುತಿರುವುದು ಸಂತಸದ ಸಂಗತಿ ಎಂದರು.
ಎನ್‌ಆರ್‌ಎಲ್‌ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಸವಿತಾ ಪಾಲ್ಕಿ ಮಾತನಾಡಿ, ಹುಣಸಗಿ ತಾಲೂಕಿನಲ್ಲಿ 413 ಸ್ವ-ಸಹಾಯ ಗುಂಪುಗಳು ಕಾರ್ಯ ನಿರ್ವಹಿಸುತ್ತಿವೆ. ಎನ್‌ಆರ್‌ಎಲ್ ಎಂ ಮೂಲಕ ಪ್ರತಿ ಗೃಹಪಯೋಗಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದರು.
ಹುಣಸಗಿ ತಾಪಂ ಇಒ ಬಸಯ್ಯ ಹಿರೇಮಠ, ಮುಖಂಡ ಸಿದ್ಧನಗೌಡ ಕರಿಭಾವಿ, ಗ್ರಾಪಂ ಪಿಡಿಒ ಸಂಗಣ್ಣ ರಾಯನಗೋಳ, ಶರಣಗೌಡ ಉಳ್ಳೇಸೂಗುರು, ನಬೀಸಾಬ್ ಡೋಣಿ ಹಾಗೂ ಶರಣಯ್ಯ ಹೊಸಮಠ, ಗ್ರಾಪಂ ಉಪಾಧ್ಯಕ್ಷ ಮಲ್ಲಪ್ಪ ಕಟ್ಟಿಮನಿ, ಗೌಡಪ್ಪ ರಾಮನಗೌಡ್ರ, ಒಕ್ಕೂಟದ ಅಧ್ಯಕ್ಷೆ ಅನ್ನಪೂಣೇಶ್ವರಿ, ಶಂಕರ ಪಾಟೀಲ್, ಸಿ.ಎಸ್. ಬಸವರಾಜ, ಅಮ್ಮಪ್ಪ, ನರೇಗಾ ಅಭಿಯಂತರ ಮಹೇಶ ಶೆಟ್ಟಿ, ರವಿಶಂಕರ ಅಡ್ಡಿ, ಚನ್ನಬಸ್ಸು ಕೊಡೇಕಲ್‌ವುಠ, ಸಂಗೀತಾ ದೊರಿಗೋಳ ಸೇರಿ ಗ್ರಾಪಂ ಸದಸ್ಯರು, ಮಹಿಳಾ ಸ್ವ-ಸಹಾಯ ಸಂಘದ ಪದಾಧಿಕಾರಿಗಳಿದ್ದರು.