ಕಾರ್ಡ್ಸ್‌ಗಳನ್ನು ಬಳಸಿ ನಿಮ್ಮ ಗೆಳೆಯರನ್ನು ಮಂಗ ಮಾಡುವುದು ಹೇಗಂತ ಗೊತ್ತಿದೆಯಾ ನಿಮಗೆ? ಅದ್ಹೇಗೆ ಅಂತ ಬಾಯಿ ಬಿಡಬೇಡಿ, ಮುಂದೆ ಓದಿ!
ಬೇಕಾದ ವಸ್ತುಗಳು: ಇಸ್ಪೀಟ್ ಕಾರ್ಡ್‌ಗಳು.
ಪ್ರದರ್ಶನ: ಜಾದೂಗಾರನ ಎದುರಿಗೆ ಎರಡು ಇಸ್ಪೀಟು ಕಾರ್ಡ್‌ಗಳ ಸೆಟ್ ಇರುತ್ತದೆ. ಒಂದನ್ನು ಸೆಟ್ “ಎ’, ಇನ್ನೊಂದನ್ನು “ಬಿ’ ಎಂದುಕೊಳ್ಳೋಣ. ಜಾದೂಗಾರ ಪ್ರೇಕ್ಷಕನೊಬ್ಬನನ್ನು ಕರೆದು, ಎರಡೂ ಸೆಟ್‌ಗಳಿಂದ ಒಂದೊಂದು ಕಾರ್ಡ್ ಆಯ್ಕೆ ಮಾಡಲು ಹೇಳುತ್ತಾನೆ. ನಂತರ ಪ್ರೇಕ್ಷಕ ತಾನು ಆರಿಸಿದ ಕಾರ್ಡ್ ಯಾವುದು ಎಂದು ಜಾದೂಗಾರನೊಬ್ಬನನ್ನು ಬಿಟ್ಟು ಉಳಿದವರೆಲ್ಲರಿಗೂ ತೋರಿಸುತ್ತಾನೆ. ನಂತರ ಸೆಟ್ “ಎ’ನಿಂದ ಆರಿಸಿದ ಕಾರ್ಡ್‌ನ್ನು ಸೆಟ್ “ಬಿ’ ಒಳಗೆ ಹಾಗೂ ಸೆಟ್ “ಬಿ’ನ ಕಾರ್ಡ್‌ನ್ನು ಸೆಟ್ “ಎ’ ಒಳಗೆ ಸೇರಿಸುತ್ತಾನೆ. ಪ್ರೇಕ್ಷಕ ಆಯ್ಕೆ ಮಾಡಿದ ಕಾರ್ಡ್‌ಗಳು ಯಾವುವು ಎಂದು ಜಾದೂಗಾರ ಕರಾರುವಾಕ್ ಆಗಿ ಗುರುತಿಸುತ್ತಾನೆ.
ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ಇಸ್ಪೀಟ್ ಕಾರ್ಡ್‌ಗಳನ್ನು ಎರಡು ಸೆಟ್‌ಗಳನ್ನಾಗಿ ವಿಂಗಡಿಸಿ ಇಡುವುದರಲ್ಲಿ. ಸೆಟ್ “ಎ’ನಲ್ಲಿ ಕೇವಲ ಸಮ ಸಂಖ್ಯೆಯ, ಸೆಟ್ “ಬಿ’ನಲ್ಲಿ ಕೇವಲ ಬೆಸ ಸಂಖ್ಯೆಯ ಕಾರ್ಡ್‌ಗಳನ್ನು ಜೋಡಿಸಿಡಬೇಕು. ಆಗ, ಬೆಸ ಸಂಖ್ಯೆಯ ಸೆಟ್‌ನಲ್ಲಿರುವ ಸಮ ಸಂಖ್ಯೆಯ ಕಾರ್ಡ್‌ನ್ನು, ಸಮ ಸಂಖ್ಯೆಯ ಸೆಟ್‌ನೊಳಗೆ ಇರುವ ಬೆಸ ಸಂಖ್ಯೆಯ ಕಾರ್ಡ್‌ನ್ನು ತೆಗೆದು ತೋರಿಸಿದರಾಯ್ತು.
– ವಿನ್ಸನ್ಟ್ ಲೋಬೊ